ADVERTISEMENT

‌ಯಾದಗಿರಿ: ಕರ್ತವ್ಯ ನಿಷ್ಠೆ ಮೆರೆಯುತ್ತಿರುವ ಆಶಾ ಕಾರ್ಯಕರ್ತೆ

ಅಪಘಾತಗೊಂಡ ಮಗ ಮನೆಯಲ್ಲಿದ್ದರೂ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕೆಲಸ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 3:55 IST
Last Updated 7 ಏಪ್ರಿಲ್ 2020, 3:55 IST
ಕರ್ತವ್ಯ ನಿರತರಾಗಿರುವ ಆಶಾ ಕಾರ್ಯಕರ್ತೆ ದಾನಮ್ಮ
ಕರ್ತವ್ಯ ನಿರತರಾಗಿರುವ ಆಶಾ ಕಾರ್ಯಕರ್ತೆ ದಾನಮ್ಮ   

ಯಾದಗಿರಿ: ದೇಶದ ವಿವಿಧೆಡೆ ವೈದ್ಯರು, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಯಂತ ಪ್ರಕರಣಗಳು ನಡೆಯುತ್ತಿದ್ದು, ಇದಕ್ಕೆ ಅಪವಾದವೆಂಬಂತೆ ಜಿಲ್ಲೆಯ ಆಶಾ ಕಾರ್ಯಕರ್ತೆಯೊಬ್ಬರು ತಮ್ಮ ಮಗನಿಗೆ ಅಪಘಾತವಾಗಿದ್ದರೂ ಕರ್ತವ್ಯದಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.

ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾಟಮನಹಳ್ಳಿಯ ಗ್ರಾಮದ ಜನರ ಸೇವೆ ಮಾಡುತ್ತಿರುವ ಆಶಾ ಕಾರ್ಯಕರ್ತೆ ದಾನಮ್ಮ ಸಂಜಯಕುಮಾರ ಹಿರೇಮಠ.

ಮಾರ್ಚ್‌20ರಂದು 22 ಹರೆಯದ ಮಗ ರಾಹುಲ್‌ ತಾಯಿಗೆ ನೆರವಾಗಲು ವಿಜಯಪುರದಿಂದ ಬೈಕ್‌ನಲ್ಲಿ ಬರುವಾಗ ತೀವ್ರ ಅಪಘಾತವಾಗಿ ಕೈ, ಕಾಲುಗಳಿಗೆ ಪೆಟ್ಟಾಗಿದೆ. ನಂತರ ಕಲಬುರ್ಗಿಯ ಆಸ್ಪತ್ರೆಯಲ್ಲಿ ಎರಡು ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಿ ಮೂರನೇ ದಿನಕ್ಕೆ ಮನೆಗೆ ಕಳಿಸಿದ್ದಾರೆ. ಇಷ್ಟೆಲ್ಲಧ್ಯರ ಮಧ್ಯೆ ಆಶಾ ಕಾರ್ಯಕರ್ತೆ ದಾನಮ್ಮ ತಮ್ಮ ಕರ್ತವ್ಯವನ್ನು ಮಾತ್ರ ಬಿಟ್ಟಿಲ್ಲ.

ADVERTISEMENT

₹42 ಸಾವಿರ ಖರ್ಚು: ಲಾಕ್‌ಡೌನ್‌ ಪರಿಣಾಮ ಹಳ್ಳಿಗಳಿಗೆ ತೆರಳಿ ಕೊರೊನಾ ಜಾಗೃತಿ ಮೂಡಿಸಲು ವಾಹನವಿದ್ದರೆ ಅನುಕೂಲ ಎಂದು ವಿಜಯಪುರದಲ್ಲಿದ್ದ ಮಗನಿಗೆ ತಿಳಿಸಿ ಬರಲು ಹೇಳಿದ್ದಾರೆ. ಬರುವಾಗ ಅಪಘಾತವಾಗಿ ಜೀವನ್ಮರಣದ ಮಧ್ಯೆ ಹೋರಾಡಿದ್ದಾರೆ. ಸದ್ಯ ಮಗನ ಚಿಕಿತ್ಸೆಗಾಗಿ ₹42 ಸಾವಿರ ಖರ್ಚು ಮಾಡಿದ್ದಾರೆ. ದಿನಾಲೂ ಔಷಧಿ ಮತ್ತಿತರ ಕೆಲಸಗಳಿಗೆ ಹಣ ಬೇಕಾಗುತ್ತದೆ.

ಮಗ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದು ಸದ್ಯ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೂ ಆಶಾ ಕಾರ್ಯಕರ್ತೆ ತಮ್ಮ ಮಗನ ಆರೈಕೆ ಜೊತೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಿದ್ದಾರೆ. ಮಗನಿಗೆ ಡ್ರೆಸಿಂಗ್‌ ಅವರೆ ಮಾಡುತ್ತಿದ್ದಾರೆ. ಇನ್ನೂ ಕಣ್ಣಿಗೆ ಕೂಡ ಗಾಯವಾಗಿದ್ದು, ಕಲಬುರ್ಗಿಗೆ ಶಿಫಾರಸು ಮಾಡಿದ್ದಾರೆ. ಯಾವುದೇ ವಾಹನ ಸೌಕರ್ಯ ಇಲ್ಲದಿದ್ದರಿಂದ ತಪಾಸಣೆ ಮಾಡಿಸಿಲ್ಲ ಎನ್ನುತ್ತಾರೆ ಆಶಾ ಕಾರ್ಯಕರ್ತೆ ದಾನಮ್ಮ ಅವರು.

ಜಿಲ್ಲೆಗೆ ಸಾವಿರಾರು ಜನರು ಗುಳೆಯಿಂದ ವಾಪಾಸ್‌ ಬಂದಿದ್ದಾರೆ. ಇಂಥ ಸ್ಥಿತಿಯಲ್ಲಿ ಮನೆಯಲ್ಲಿ ಕುಳಿತುಕೊಳ್ಳುವುದು ಸರಿಯಲ್ಲ ಎಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಗುಳೆಯಿಂದ ಬಂದ ಜನರಿಗೆ ಆರೋಗ್ಯದ ತಿಳಿವಳಿಕೆ ನೀಡಿ ಗುಳೆ ಬಂದವರ ಮಾಹಿತಿ ಕಲೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ವಿವಿಧ ಹಳ್ಳಿಗಳಿಗೆ ತೆರಳಿ ಕೊರೊನಾ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ಹೂಮಳೆ: ಇತ್ತಿಚೆಗೆ ಯಾದಗಿರಿ ತಾಲ್ಲೂಕಿನ ಬೆಳಗೇರಾ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಆಗಮಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸುರಿಸಿ ಗೌರವ ಸಲ್ಲಿಸಿದ್ದರು. ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮನೆ ಮನೆ ಜಾಗೃತಿಗೆ ಮುಂದಾಗಿರುವ ಆಶಾ ಕಾರ್ಯಕರ್ತೆಯರ ಕಾರ್ಯ ಶ್ಲಾಘನೀಯ ಎಂದು ಗ್ರಾಮಸ್ಥರು ಅವರು ತೆರಳುವ ರಸ್ತೆಯುದ್ದಕ್ಕೂ ಹೂ ಮಳೆ ಸುರಿಸಿ ಅವರ ಕೆಲಸಕ್ಕೆ ಅಭಿನಂದನೆ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.