ಸುಭಾಶ್ಚಂದ್ರ ಕಟಕಟಿ
ಯಾದಗಿರಿ: ತಾವು ಭ್ರಷ್ಟಾಚಾರದ ಜನಕರಾಗಿದ್ದೀರಿ. ನಿಮ್ಮ ಅವಧಿಯಲ್ಲಿ ಒಂದೊಂದು ಇಲಾಖೆಯಲ್ಲಿ ಭ್ರಷ್ಟಾಚಾರದ ಮೆನು ಕಾರ್ಡ್ ಅತ್ಯಂತ ಜನಪ್ರಿಯವಾಗಿದ್ದು, ಅದನ್ನು ಮುಚ್ಚಿಕೊಳ್ಳಲು ತಾವು ಆಗಾಗ ಇನ್ನೊಬ್ಬರ ಬಗ್ಗೆ ಹೇಳಿಕೆ ಕೊಟ್ಟು ಜನರಲ್ಲಿ ಪರಿಚಿತರಾಗಲು ಪ್ರಯತ್ನಿಸುವುದನ್ನು ಬಿಡಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಅವರಿಗೆ ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ ಸಲಹೆ ನೀಡಿದ್ದಾರೆ.
ಯಾದಗಿರಿ ಶಾಸಕ ಚನ್ನಾರೆಡ್ಡಿ ತುನ್ನೂರ ಎಚ್.ಡಿಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಯಾರೋ ಚಾಡಿ ಹೇಳಿದ್ದನ್ನು ಕೇಳಿ ಪ್ರತಿಕ್ರಿಯಿಸಿದ್ದಲ್ಲ, ಯಾದಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮಾತನಾಡಿದ್ದನ್ನು ಗಮನಿಸಿ, ಅಷ್ಟು ವರ್ಷಗಳಿಂದ ಇರದ ಅಭಿವೃದ್ಧಿ ಕಾಳಜಿ ಈಗ ಬಂದಿತೆ ಎಂದು ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೊಬ್ಬರ ಬಗ್ಗೆ ಚಾಡಿ ಹೇಳುವ ಸಂಸ್ಕೃತಿ ನಮ್ಮ ನಾಯಕರದ್ದಲ್ಲ ಎನ್ನುವುದು ಜನರಿಗೆ ಗೊತ್ತಿದೆ. ತಾವುಗಳು ಇನ್ನೊಬ್ಬರ ಬಗ್ಗೆ ಚಾಡಿ ಹೇಳಿ ಪಕ್ಷಗಳಲ್ಲಿ ಗುರುತಿಸಿಕೊಂಡು ಅಧಿಕಾರ ಪಡೆಯುವ ಹಂತಕ್ಕೆ ಬಂದಿದ್ದೀರಿ ಎಂದು ಹೇಳಿದ್ದಾರೆ.
ಈ ಹಿಂದೆ ಜನತಾ ಪರಿವಾರದಲ್ಲಿದ್ದಾಗ ಸದಾಶಿವರಡ್ಡಿ ಕಂದಕೂರ ಬಗ್ಗೆ ಚಾಡಿ ಹೇಳಿ ಅವರಿಗೆ ಅಧಿಕಾರಿ ತಪ್ಪಿಸಿದವರು ಯಾರು?, ಕಾಂಗ್ರೆಸ್‌ನಲ್ಲಿದ್ದಾಗ ಮಾಜಿ ಸಚಿವ ಡಾ.ಎ.ಬಿ.ಮಾಲಕರಡ್ಡಿಯವರ ಬಗ್ಗೆ ಹಿರಿಯ ನಾಯಕರಿಗೆ ಕಿವಿ ಊದಿ ಟಿಕೆಟ್ ತಪ್ಪಿಸಿದ್ದು ಯಾರೆಂಬದು ಜಿಲ್ಲೆಯ ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಕುಮಾರಸ್ವಾಮಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಚಂಡ್ರಿಕಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾಗ ಇಲ್ಲಿನ ಅಭಿವೃದ್ಧಿಯನ್ನು ಕಣ್ಣಾರೆ ಕಂಡಿದ್ದಾರೆ. ಹಾಗಾಗಿ ಖರ್ಗೆಯವರ ಬೆಂಗಳೂರು ಮೈಸೂರು ಹೇಳಿಕೆಗೆ ಪ್ರತಿಕ್ರೀಯಿಸಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.