ADVERTISEMENT

ಗುರುಮಠಕಲ್: ಹಣದ ಹೊಳೆ ಹರಿದರೂ ಹರಿಯದ ನೀರು

ಯಂಪಾಡ ಗ್ರಾಮಸ್ಥರಲ್ಲಿ ಬತ್ತಿದ ಪರಿಹಾರದ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 5:09 IST
Last Updated 14 ಮೇ 2025, 5:09 IST
ಗುರುಮಠಕಲ್ ಹತ್ತಿರದ ಯಂಪಾಡ ಗ್ರಾಮದಲ್ಲಿ ಎತ್ತರಕ್ಕೆ ನೀರು ಬಾರದ ಹಿನ್ನಲೆ ಕುಡಿಯುವ ನೀರು ಸಂಗ್ರಹಿಸಲು ಚರಂಡಿಯಲ್ಲೇ ಪೈಪ್ ತುಂಡರಿಸಿದ್ದು
ಗುರುಮಠಕಲ್ ಹತ್ತಿರದ ಯಂಪಾಡ ಗ್ರಾಮದಲ್ಲಿ ಎತ್ತರಕ್ಕೆ ನೀರು ಬಾರದ ಹಿನ್ನಲೆ ಕುಡಿಯುವ ನೀರು ಸಂಗ್ರಹಿಸಲು ಚರಂಡಿಯಲ್ಲೇ ಪೈಪ್ ತುಂಡರಿಸಿದ್ದು   

ಗುರುಮಠಕಲ್: ಗಡಿ ತಾಲ್ಲೂಕು ರಾಜ್ಯದಲ್ಲೇ ಅತೀ ಹೆಚ್ಚು ಕೆರೆಗಳನ್ನು ಹೊಂದಿರುವ ಎರಡನೇ ವಿಧಾನಸಭಾ ಕ್ಷೇತ್ರದಲ್ಲಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಇನ್ನೂ ಕೆಲವೆಡೆ ಕುಡಿವ ನೀರಿಗೂ ಪರಿದಾಟ ತಪ್ಪಿಲ್ಲ.

ತಾಲ್ಲೂಕಿನ ಪುಟಪಾಕ ಗ್ರಾಮದಲ್ಲಿ 'ಮಳೆಗಾಲದಲ್ಲೂ ನೀರಿಲ್ಲ' ಎನ್ನುವ ಅಳಲು ಕೇಳಿಬಂದರೆ, ಗಾಜರಕೋಟ ಗ್ರಾಮದಲ್ಲಿ ನಿರ್ವಹಣೆಯ ಕೊರೆತೆಯ ಆರೋಪ, ಮಧ್ವಾರ ಗ್ರಾಮದಲ್ಲಿ 'ಶುದ್ಧ ನೀರಿನ ಕನಸೂ ಬತ್ತಿದೆ' ಎನ್ನುವ ಅಸಹಾಯಕತೆ, ಚಂಡ್ರಿಕಿ, ಕೇಶ್ವಾರ ಗ್ರಾಮಗಳಲ್ಲಿ 'ಕಲುಷಿತ ನೀರು' ಸರಬರಾಜಿನ ಕುರಿತು ಜನ ಅಲವತ್ತುಕೊಳ್ಳುವರು.

ಜೆಜೆಎಂ ಕಾ‍ಮಗಾರಿ ಯಾರಿಗೆಂದು ಮಾಡಿದ್ದಾರೆ? ಗುತ್ತಿಗೆದಾರರ ಲಾಭಕ್ಕೇನೋ ಎನ್ನುವ ವ್ಯಂಗ್ಯದ ಮಾತುಗಳು ಚಪೆಟ್ಲಾ, ಗಾಜರಕೋಟ, ಪುಟಪಾಕ ಮತ್ತು ಯಂಪಾಡ ಗ್ರಾಮಗಳಲ್ಲಿ ಕೇಳಿಬಂದವು.

ADVERTISEMENT

ಒಂದೆಡೆ ಮನೆ-ಮನೆಗೆ ಶೌಚಾಲಯ ಕಟ್ಟಿಸಿಕೊಳ್ಳಲು ಹೇಳುವ ಸರ್ಕಾರ 'ಕುಡಿಯಲು ನೀರನ್ನೇ ಸರಿಯಾಗಿ ನೀಡತ್ತಿಲ್ಲ, ಶೌಚಾಲಯ ಬಳಕೆಗೆ ನೀರೆಲ್ಲಿಂದ ತರೋದು? ಸರ್ಕಾರ ಕೊಟ್ಟ ವಾರ್ಷಿಕ ಗುರಿ ಸಾಧಿಸಲು ಶೌಚಾಲಯ ಕಟ್ಟಿಸಿದರು. ನೀರಲ್ಲದೆ ಬಳಕೆ ಮಾಡದು ಹೇಗೆಂಬುದನ್ನೂ ಕಲಿಸಲಿ' ಎನ್ನುವ ಸಿಡಿಮಿಡಿಯ ಮಾತುಗಳು ಪುಟಪಾಕ ಮತ್ತು ಯಂಪಾಡದ ವೃದ್ಧೆಯರದ್ದು.

ಪ್ರತಿ ಸಲ ನೀರಿನ ಸಮಸ್ಯೆ ಹೇಳಿದಾಗ 'ಇಗೋ ಸಮಸ್ಯೆ ಬಗೆಹರಿಸಿ ಬಿಟ್ಟೆವು' ಎನ್ನುವಂತೆ ಭರವಸೆ ಕೊಟ್ಟು ಸಾಗಹಾಕುತ್ತಾರೆ. ಇಲ್ಲ ಏನಾದರೊಂದು ಹೇಳಿ ಕಳುಹಿಸುತ್ತಾರೆ. ಆದರೆ, ಸಮಸ್ತೆ ಪರಿಹರಿಸುವ ಪ್ರಾಮಾಣಿಕತೆ ಮಾತ್ರ ಕಾಣುತ್ತಿಲ್ಲ. ಪ್ರತೀ ವರ್ಷ ನೀರು ಸರಬರಾಜಿಗೆ ಹಣದ ಹರಿವೂ ನಡೆದೇಯಿದೆ. ಕೆಲಸ ಮಾಡುವವರು(ಗುತ್ತಿಗೆದಾರರು) ಮಾತ್ರ ಖುಷಿ, ಜನಕ್ಕೆ ಮಾತ್ರ 'ನೀರಿಗಾಗಿ ಕಣ್ಣೀರು ಹರಿಸುವ ಕಾಯಕ' ಉಳಿಯುತ್ತದೆ ಎಂದಿದ್ದು ಯಂಪಾಡ ಗ್ರಾಮದ ಯುವಕರ ಮಾತು.

ಪ್ರತಿ ವರ್ಷ ನೀರಿನ ಸಮಸ್ಯೆ ಕಾಣಿಸುತ್ತದೆ. ಸಮಸ್ಯೆಯ ಜತೆಗೆ ಪರಿಹಾರದ ಮಾತುಗಳು, ಭರವಸೆಗಳು ಮತ್ತು ಅನುದಾನವೂ ಬರುತ್ತಿದೆ. ‘ಲಕ್ಷಾಂತರ ರೂಪಾಯಿ ಅನುದಾನ ಬಂದರೂ, ನೀರು ಮಾತ್ರ ಹರಿಯುತ್ತಿಲ್ಲ’ ಎನ್ನುವ ಗ್ರಾಮಸ್ಥರಲ್ಲಿ ನೀರಿನ ಸಮಸ್ಯೆ ಬಗೆಹರಿಯುವ ನಿರೀಕ್ಷೆಯ ಒರತೆ ಬತ್ತಿದೆ.

ಯಂಪಾಡ ಗ್ರಾಮದಲ್ಲಿ ಸುಮಾರು 600ಕ್ಕೂ ಅಧಿಕ ಮನೆಗಳು, 4 ಸಾವಿರಕ್ಕೂ ಅಧಿಕ ಜನಸಂಖ್ಯೆ, 8 ಸದಸ್ಯ ಬಲ ಹೊಂದಿರುವ ಗ್ರಾ.ಪಂ, ಕೇಂದ್ರ ಸ್ಥಾನವಾದ ತಾಲ್ಲೂಕಿನ ಯಂಪಾಡ ಗ್ರಾಮಸ್ಥರಲ್ಲಿ ನೀರಿನ ಸಮಸ್ಯೆಯ ಕುರಿತು ಕೇವಲ ಅಸಹಾಯಕ ಮಾತುಗಳೇ ಕೇಳಿ ಬಂದವು.

‘ಯಂಪಾಡದಲ್ಲಿ ನೀರಿನ ಸಮಸ್ಯೆ ನೀಗಿಸುವ ಪ್ರಾಮಾಣಿಕ ಕೆಲಸವಾಗಿದೆಯೇ? ಸರ್ಕಾರದಿಂದ ನೀರಿಗೆಂದು ಹಣ ಕೊಡುತ್ತದೆ. ಆದರೆ ನೀರು ಮಾತ್ರ ಬರೋದೇ ಇಲ್ಲ. ಅವರವರ ಲಾಭಕ್ಕೆ ತಕ್ಕಂತೆ ಕೆಲಸಗಳಾಗುತ್ತವೆ. ಗ್ರಾಮಸ್ಥರ ನೋವು ಯಾರಿಗೆ ಬೇಕಿದೆ?’ ಎಂದು ಹಿರಿಯಜ್ಜಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಜೆಜೆಎಂ ಕಾಮಗಾರಿಗೆ ₹1.07 ಕೋಟಿ ಅನುದಾನ ಹಂಚಿಕೆಯಾಗಿ, ಕಾಮಗಾರಿ ಮಾಡಲಾಗಿದೆ. ಕಾಮಗಾರಿಯಿಂದ ಮನೆಗಳಿಗೆ ನಳದ ಸಂಪರ್ಕ ಬಂತು. ನೀರು ಮಾತ್ರ ಬರಲೇ ಇಲ್ಲ. ಜೆಜೆಎಂ ನಂತರ ಗ್ರಾಮದಲ್ಲಿ ನೀರಿನ ಸಮಸ್ಯೆಯೇ ಇರುವುದಿಲ್ಲ ಎಂದಿದ್ದರು. ಆದರೆ, ಹಳೇ ಪೈಪ್‌ಲೈನ್‌ಗಿಂತಲೂ ಸಮಸ್ಯೆ ಹೆಚ್ಚಿತು.

ಈಗ ಮತ್ತೆ ಸರ್ಕಾರ ಮತ್ತೆ ₹30 ಲಕ್ಷದಷ್ಟು ಅನುದಾನ ನೀಡಿದೆ. ಗ್ರಾಮದಿಂದ ಸುಮಾರ 5 ಕಿ.ಮೀ. ದೂರದಲ್ಲಿ ಕೊಳವೆಬಾವಿ ಕೊರೆಯಿಸಿದ್ದಾರೆ. ಅಲ್ಲಿಂದ ಪೈಪ್‌ಲೈನ್ ಮಾಡುತ್ತಾರೆ. ಆದರೆ, ನೀರು ತಲುಪುವ ಭರವಸೆಯಿಲ್ಲ. ಸರ್ಕಾರದ ಅನುದಾನ ಸರಿಯಾಗಿ ಬಳಕೆಯಾಗಿದ್ದರೆ ನಮ್ಮೂರಲ್ಲಿ ಸಮಸ್ಯೆಯೇ ಇರುತ್ತಿರಲಿಲ್ಲ ಎಂದು ಯುವಕರೊಬ್ಬರು ಅಸಮಾಧಾನ ತೋಡಿಕೊಂಡರು.

ಜೆಜೆಎಂ ಕಾಮಗಾರಿ ನಂತರ ನೀರು ಬರಲಿಲ್ಲ. ಎತ್ತರದಲ್ಲಿ ನಳ ಅಳವಡಿಸಿದ್ದರಿಂದ ನೀರಿನ ಹರಿವಿಲ್ಲದೆ ಸಮಸ್ಯೆಯಾಗಿ ಚರಂಡಿಯಲ್ಲಿದ್ದ ನಳದ ಪೈಪ್ ಕತ್ತರಿಸಿ, ನೀರು ತುಂಬಿಕೊಳ್ಳುವ ಅನಿವಾರ್ಯ. ನೀರಿನ ಸಮಸ್ಯೆ ತೀರುವುದೇ ಇಲ್ಲ ಎಂದು ಕೆಲ ಮಹಿಳೆಯರು ತಮ್ಮ ದುಸ್ಥಿತಿಗೆ ಶಪಿಸಿಕೊಂಡರು.

ಸರ್ಕಾರದ ಅನುದಾನದಲ್ಲಿ ಕೊರೆದ ಕೆಲವು ಕೊಳವೆಬಾವಿಗಳಲ್ಲಿ ಉತ್ತಮ ನೀರಿನ ಸೆಲೆಯಿದೆ. ಆದರೆ, ಜಮೀನಿನ ಮಾಲೀಕರು ಸರ್ಕಾರದ ಹಣದಲ್ಲಿ ಕೊರೆದ ಕೊಳವೆಬಾವಿ ಈಗ ಅವರ ಸ್ವಂತಕ್ಕೆ ಮಾತ್ರ ಬಳಕೆಯಾಗುತ್ತಿದೆ. ಇದನ್ನು ಪ್ರಶ್ನಿಸುವ ಧೈರ್ಯ ನಮಗಿಲ್ಲ. ಮಂದಿ ಮನಿ ಮುಂದ ಹೋಗಿ ನೀರು ಹಿಡ್ಕೊಂಡು ಬರೋಣಂದ್ರೂ ಅವರ ಮನೆಯಲ್ಲಿ ತುಂಬಿದ ನಂತರ ನಮಗೆ ತುಂಬಿಸಿಕೊಳ್ಳಲು ಬಿಡ್ತಾರೆ. ಸಿಗೋದು ಕೇವಲ ಎರಡು ಅಥವಾ ಮೂರು ಕೊಡ ಮಾತ್ರ. ಉಳಿದಂತೆ ಬಿಸಿಲಿನಲ್ಲೂ ಕೈ ಪಂಪ್‌ನಿಂದ ನೀರು ತುಂಬಿಕೊಳ್ಳಬೇಕು ಎಂದು ಗ್ರಾಮದ ಮುಖಂಡರು ಹೇಳುತ್ತಾರೆ.

ಗುರುಮಠಕಲ್ ಹತ್ತಿರದ ಯಂಪಾಡ ಗ್ರಾಮದಲ್ಲಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ಪೈಪ್ ಲೈನ್ ವಾಲ್ವ್ ನಲ್ಲಿ ತ್ಯಾಜ್ಯ ಸಂಗ್ರಹವಾದರೂ ಸ್ವಚ್ಛಗೊಳಿಸದಿರುವುದು
ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಖಾಸಗಿ ಜಮೀನುಗಳಲ್ಲಿ ನೀರು ಸಿಕ್ಕರೆ ಮಾಲೀಕರು ಸ್ವಂತಕ್ಕೆ ಕೇಳುತ್ತಾರೆ. 5 ಕಿ.ಮೀ.ದೂರದಲ್ಲಿ ಕೊಳವೆ ಬಾವಿ ಕೊರೆಸಿ ಪೈಪ್‌ಲೈನ್ ಮಾಡಲಾಗುತ್ತಿದೆ
ಶಾಂತಪ್ಪ ಗ್ರಾ.ಪಂ ಸದಸ್ಯ
ಭೀಮಾ ಯೋಜನೆ ನೀರು ತರಲು ಹೆಚ್ಚುವರಿ ಪಂಪ್ ಹೌಸ್ ಅವಶ್ಯ. ಈಗ ಐದು ಕೊಳವೆಬಾವಿ ಬಾಡಿಗೆ ಪಡೆಯಲಾಗಿದೆ. ಹೊಸ ಕೊಳವೆಬಾವಿ ಕೊರೆದಿದ್ದು ಪೈಪ್‌ಲೈನ್ ಪೂರ್ಣಗೊಂಡರೆ ನೀರಿನ ಸಮಸ್ಯೆ ಇರುವುದಿಲ್ಲ
ಸಿದ್ದಪ್ಪ ಯಂಪಾಡ ಗ್ರಾಮದ ಮುಖಂಡ

ನಮ್ ಹೆಸ್ರು ಬರಿಬ್ಯಾಡ್ರಿ ಫೋಟೋ ಹಾಕಬ್ಯಾಡ್ರಿ ಸರ್

‘ಊರಾಗಿನ ನೀರಿನ ತೊಂದ್ರೆ ಎಲ್ಲಾ ನಿಮಗೆ ಹೇಳ್ತೀವಿ ಆದ್ರೆ ನಮ್ ಹೆಸ್ರು ಬರಿಬ್ಯಾಡ್ರಿ. ಇಷ್ಟಕ್ ಮೊದ್ಲು ಫೋಟೊ ಮತ್ತ ಹೆಸರು ಬಂದವ್ರಿಗೆ ಸರ್ಕಾರದ ಮನಿ ಬಂದ್ರೂ ದುಡ್ಡ ಬರ್ಲಾರ್ದಂಗೆ ಮಾಡಿದ್ರು. ನಮ್ ಹೆಸ್ರು ಬಂದ್ರೆ ನಮಗೂ ಏನಾದ್ರು ಮಾಡಂಗಾರ ಸರ್’ ಎಂದು ಗ್ರಾಮದ ಮಹಿಳೆಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು. ಆಶ್ರಯ ಮನೆ ಯೋಜನೆಯಲ್ಲಿ ಫಲಾನುಭವಿಯಾಗಿದ್ದ ಮಹಿಳೆಯೊಬ್ಬರು ನೀರಿನ ಸಮಸ್ಯೆಯ ಕುರಿತು ಪತ್ರಿಕೆಗೆ ಹೇಳಿಕೆ ನೀಡಿದ್ದರು. ಅವರ ಮನೆಯ ಜಿಪಿಎಸ್ ಮಾಡದೆ ಫಲಾನುಭವಿಗೆ ಬರಬೇಕಿದ್ದ ಸಹಾಯಧನ ಬಾರದಂತೆ ಮಾಡಿ ದ್ವೇಷ ಸಾಧಿಸಿದ್ದಾರೆ ಎಂಬ ಆರೋಪ ಪಂಚಾಯಿತಿ ಮತ್ತು ಸ್ಥಳೀಯ ಮುಖಂಡರ ಮೇಲಿದೆ.

ಕಾಟಾಚಾರದ ಜೆಜೆಎಂ ಕೆಲಸ: ಆರೋಪ

ಕೇಂದ್ರ ಸರ್ಕಾರ ಜೆಜೆಎಂ ಯೋಜನೆ ಜಾರಿ ಮಾಡಿ ಕೋಟ್ಯಂತರ ಹಣ ವ್ಯಯಿಸಿದೆ. ಆದರೆ ನಮ್ಮ ಹಣೆ ಬರಹ ನೋಡಿ.. ಅದ್ಯಾವ ಲೆಕ್ಕಾಚಾರವೋ ಗೊತ್ತಿಲ್ಲ. ಜೆಜೆಎಂ ಪೈಪ್‌ಲೈನ್ ಅಳವಡಿಸಿದ್ದು ಬಿಟ್ಟರೆ ನೀರು ಬರಲೇ ಇಲ್ಲ. ನೀರಿನ ಲಭ್ಯತೆ ನೋಡದೆ ಪೈಪ್‌ಲೈನ್ ಮಾಡಿದರೆ ನೀರೆಲ್ಲಿಂದ ಬರಬೇಕು. ಕಾಟಾಚಾರಕ್ಕೆ ಕಾಮಗಾರಿ ಮುಗಿಸಿದಂತಿದೆ ಎಂದು ಗ್ರಾಮದ ಯುವಜನರು ಆರೋಪಿಸಿದ್ದಾರೆ. ಎತ್ತರದಿಂದ ನೀರು ಕೆಳಗೆ ಬರಬೇಕು. ಅದ್ಯಾವ ಎಂಜಿನಿಯರ್ ‘ಯಾವ ಪವಾಡ ಮಾಡುವ ನಂಬಿಕೆ’ಯಿಂದಲೋ ಏನೊ ಕೆಳಗಿರುವ ಮೇನ್ ಲೈನ್‌ನಿಂದ ಎತ್ತರದಲ್ಲಿರುವ ಮನೆಗಳಿಗೆ ನಳದ ಪೈಪ್‌ಲೈನ್ ಮಾಡಿದ್ದಾನೆ ಪುಣ್ಯಾತ್ಮ. ಅಲ್ಪ ಸ್ವಲ್ಪವಾದರೂ ನೀರು ಸಿಗಲಿ ಎನ್ನುವ ಆಸೆಗೆ ಚರಂಡಿಯ ನಡುವೆ ಪೈಪ್ ಅನ್ನು ಕತ್ತರಿಸಿಕೊಂಡು ನೀರು ತುಂಬಿಕೊಳ್ಳುವ ಅನಿವಾರ್ಯ ನಮ್ಮೂರಿನದು ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆಗೆ ಹಳಿದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.