ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಪ್ರಕರಣಗಳ ಏರಿಕೆ; ವೈದ್ಯರ ಕೊರತೆ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್‌–19, ಮಹಾರಾಷ್ಟ್ರದಿಂದ ಬಂದವರಲ್ಲೇ ಸೋಂಕು

ಬಿ.ಜಿ.ಪ್ರವೀಣಕುಮಾರ
Published 31 ಮೇ 2020, 2:11 IST
Last Updated 31 ಮೇ 2020, 2:11 IST
ಸುರಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಿಂದ ಶನಿವಾರ ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸಲಾಯಿತು
ಸುರಪುರದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಿಂದ ಶನಿವಾರ ವಲಸೆ ಕಾರ್ಮಿಕರನ್ನು ಮನೆಗೆ ಕಳುಹಿಸಲಾಯಿತು   

ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಲೇ ಇವೆ. ಆದರೆ, ತಜ್ಞ ವೈದ್ಯರು, ವೈದ್ಯರ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಳೆದ ತಿಂಗಳು ಅರ್ಜಿ ಕರೆದಿದ್ದರೂ ಯಾರೂ ಬರದಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ಜಿಲ್ಲಾಡಳಿತದ ಪ್ರಕಾರ 33 ತಜ್ಞ ವೈದ್ಯರು, 63 ವೈದ್ಯರು, 18 ಶುಶ್ರೂಷಕರು, 16 ಲ್ಯಾಬ್ ತಂತ್ರಜ್ಞರು ಹಾಗೂ 20 ಫಾರ್ಮಾಸಿಸ್ಟ್‌ಗಳ ಅವಶ್ಯಕತೆ ಇದೆ. ಅರ್ಜಿ ಕರೆದರೂ ವೈದ್ಯರು ಬರಲು ತಯಾರಿಲ್ಲ.

ಜಿಲ್ಲೆಗೆ ಸಾವಿರಾರು ವಲಸೆ ಕಾರ್ಮಿಕರು ಈಗಲೂ ಬರುತ್ತಿದ್ದಾರೆ. ಅವರನ್ನು ಕ್ವಾರಂಟೈನ್‌ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಕ್ವಾರಂಟೈನ್‌ ಇದ್ದವರಲ್ಲೇ ಕೋವಿಡ್‌–19 ಕಾಣಿಸಿಕೊಳ್ಳುತ್ತಿದೆ.

ADVERTISEMENT

ಏಪ್ರಿಲ್‌ನಲ್ಲಿ 20 ಸ್ಟಾಫ್‌ ನರ್ಸ್‌, 10 ಗ್ರೂಪ್‌ ಡಿ, 5 ಲ್ಯಾಬ್‌ ಟೆಕ್ನಿಷಿಯನ್‌ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅವರು ನಿಗದಿತ ಕೋವಿಡ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇದಕ್ಕಿಂತ ಹೆಚ್ಚಿನ ಸಿಬ್ಬಂದಿಗೆ ಬೇಡಿಕೆ ಇದೆ.ಗ್ರೂಪ್‌ ಡಿ ನೌಕರರೂ ಬೇಕಾಗಿದ್ದಾರೆ.

‘10 ದಿನಕ್ಕೆ ವೈದ್ಯರ ಬದಲಾವಣೆ ಆಗುತ್ತದೆ. ಈ ಬಾರಿ ಮೇ 25ರಿಂದ ಜೂನ್ 6 ರವರೆಗೆ ವೈದ್ಯರ ಒಂದು ತಂಡ ಕಾರ್ಯನಿರ್ವಹಣೆ ಮಾಡುತ್ತಿದೆ’ ಎನ್ನುತ್ತಾರೆಹೊಸ ಜಿಲ್ಲಾಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ನೀಲಮ್ಮ ರೆಡ್ಡಿ.

‘ಸದ್ಯಕ್ಕೆ ಸಮಸ್ಯೆ ಇಲ್ಲ.ಜಿಲ್ಲೆಯಲ್ಲಿ ಒಬ್ಬರೇ ಫಿಜಿಷಿಯನ್‌ ಇದ್ದಾರೆ. ಸೋಂಕಿತರ ತೊಂದರೆಗೆ ಅನುಗುಣವಾಗಿ ವೈದ್ಯರ ನಿಯೋಜನೆ ಮಾಡಲಾಗುತ್ತಿದೆ. ಎಲ್ಲವನ್ನು ನಿರ್ವಹಣೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಅವರು.

ನಗರ ಹೊರವಲಯದಲ್ಲಿರುವ ಕೋವಿಡ್‌ ಆಸ್ಪತ್ರೆಯೂಮೂರು ಅಂತಸ್ತುಗಳ ಕಟ್ಟಡ ಹೊಂದಿದೆ. ಒಂದು ಶಿಫ್ಟ್‌ಗೆಒಬ್ಬ ವೈದ್ಯ, ಇಬ್ಬರು ದಾದಿಯರು, ಒಬ್ಬ ಗ್ರೂಪ್‌ ಡಿನೌಕರಇರುತ್ತಾರೆ. ಮೂರು ಶಿಫ್ಟ್‌ಗಳಲ್ಲಿ ಕೆಲಸ ನಿರ್ವಹಿಸುತ್ತಾರೆ.

ಈಗಾಗಲೇ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂವರು ವೈದ್ಯರನ್ನು ಹೋಂ ಕ್ವಾರಂಟೈನ್‌ಗೆ ಕಳಿಸಲಾಗಿದೆ. ಇವರ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿದೆ. ವರದಿ ಬಂದ ಬಳಿಕವೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇಂಥ ವೇಳೆ ಕೆಲವರ ಮೇಲೆ ಒತ್ತಡ ಹೆಚ್ಚುತ್ತಿದೆ. ವೈದ್ಯರು ಹೆಚ್ಚು ಜನ ಇದ್ದರೆ ಸಮಸ್ಯೆ ಆಗುವುದಿಲ್ಲ.

***

ಸದ್ಯ ಇರುವ ಸಿಬ್ಬಂದಿ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ತುಂಬಾ ಸೀರಿಯಸ್‌ ಇದ್ದರೆ ಮಾತ್ರ ಕಲಬುರ್ಗಿಯ ಇಎಸ್‌ಐ ಆಸ್ಪತ್ರೆಗೆ ರವಾನಿಸಲಾಗುತ್ತಿದೆ
- ಡಾ.ನೀಲಮ್ಮ ರೆಡ್ಡಿ, ಸ್ಥಾನಿಕ ವೈದ್ಯಾಧಿಕಾರಿ, ಹೊಸ ಜಿಲ್ಲಾಸ್ಪತ್ರೆ

***

ಕೋವಿಡ್‌–19ಗೆ ಸಂಬಂಧಿಸಿದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. 7 ವೆಂಟಿಲೇಟರ್‌ ಸೌಲಭ್ಯ ಇದೆ. ಪಿಪಿಇ ಕಿಟ್‌ ಕೂಡ ಲಭ್ಯವಿದೆ
- ಡಾ.ನಾರಾಯಣಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.