ADVERTISEMENT

ಉಪಚುನಾವಣೆಗೆ ಸುರಪುರ ಕಣ ಸಿದ್ಧ

ರಾಜೂಗೌಡ ಸ್ಪರ್ಧೆ ಖಚಿತ, ಅಂತಿಮಗೊಂಡಿಲ್ಲ ಕಾಂಗ್ರೆಸ್‌ ಟಿಕೆಟ್‌

ಬಿ.ಜಿ.ಪ್ರವೀಣಕುಮಾರ
Published 16 ಮಾರ್ಚ್ 2024, 23:37 IST
Last Updated 16 ಮಾರ್ಚ್ 2024, 23:37 IST
ರಾಜಾ ವೆಂಕಟಪ್ಪ ನಾಯಕ
ರಾಜಾ ವೆಂಕಟಪ್ಪ ನಾಯಕ   

ಯಾದಗಿರಿ: ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ರಾಜಾವೆಂಕಟಪ್ಪ ನಾಯಕ ನಿಧನದಿಂದ ತೆರವಾದ ಸ್ಥಾನಕ್ಕೆ ಮೇ 7ರಂದು ಉಪಚುನಾವಣೆ ನಡೆಯಲಿದ್ದು, ಚುನಾವಣಾ ಕಣ ಸಿದ್ಧವಾಗಿದೆ.

ಲೋಕಸಭೆ ಚುನಾವಣೆ ಜೊತೆಗೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ರಾಜಕೀಯ ಚಟುವಟಿಕೆಗಳು ರಂಗೇರಿವೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸುರಪುರ ಮತಕ್ಷೇತ್ರ ಒಳಪಟ್ಟಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಉಪಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಬಿಜೆಪಿಯಿಂದ ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಸ್ಪರ್ಧಿಸುವುದು ಖಚಿತವಾಗಿದೆ. ಆದರೆ, ಕಾಂಗ್ರೆಸ್‌ನಿಂದ ಟಿಕೆಟ್‌ ಯಾರಿಗೆ ಸಿಗಲಿದೆ ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.

ADVERTISEMENT

ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ್ ನಾಯಕ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇದೆ. ಅಥವಾ ಅವರ ತಾಯಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಕ್ಷೇತ್ರದಲ್ಲಿ ಕುರುಬ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಅಲ್ಪಸಂಖ್ಯಾತರ ಸಮುದಾಯದ ಮತಗಳು ನಿರ್ಣಾಯಕವಾಗಿವೆ.

ಬಿಜೆ‍ಪಿ, ಕಾಂಗ್ರೆಸ್‌ ನೇರ ಪೈಪೋಟಿ: ಕ್ಷೇತ್ರದಲ್ಲಿ ಬಿಜೆ‍ಪಿ, ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದೆ. ಇದು ತಮ್ಮ ಕೊನೆಯ ಚುನಾವಣೆ. ಸೇವೆ ಸಲ್ಲಿಸಲು ಅವಕಾಶ ನೀಡಿ ಎಂದು  ಎಂದು ವೆಂಕಟಪ್ಪ ನಾಯಕ ಪ್ರಚಾರ ಮಾಡಿದ್ದರು.

25 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ ಪಕ್ಷ ಗೆದ್ದಿತ್ತು. ಸಚಿವರಾಗಬೇಕೆನ್ನುವ ಆಸೆ ಇತ್ತು. ಪಕ್ಷದ ನಿಷ್ಠರಾಗಿದ್ದ ಅವರು ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು.

ರಾಜಾ ವೆಂಕಟಪ್ಪ ನಾಯಕ ಹೃದಯಾಘಾತದಿಂದ ಫೆಬ್ರುವರಿ 25ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರುನಾಲ್ಕು ಬಾರಿ ಸುರಪುರ ಮತಕ್ಷೇತ್ರದಿಂದ ಆಯ್ಕೆಯಾಗಿದ್ದರು.

ರಾಜೂಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.