ಯಾದಗಿರಿ: ಜಿಲ್ಲೆಯ ಶಹಾಪುರ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ₹4.42 ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬುಧವಾರ ಬಂಧಿಸುವುದರ ಜತೆಗೆ ₹4.35ಲಕ್ಷ ಮೌಲ್ಯದ ಬಂಗಾರದ ವಸ್ತುಗಳನ್ನು ಶಹಾಪುರ ಠಾಣೆಯ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಶಹಾಬಾದ ರೇಷ್ಮಾ ದನವಾಲ್, ಸೋಮಶೇಖರ ಈರಣ್ಣ ತೆಲಗಬಾಳ, ಸಿದ್ದರಾಮೇಶ್ವರ ಈರಣ್ಣ ತೆಲಗಬಾಳ ಬಂಧಿತರು.
ಘಟನೆ ವಿವರ:
ಕಳೆದ ಆಗಸ್ಟ್ 16ರಂದು ಶಹಾಪುರದ ಶಿವಶೇಖರಪ್ಪ ಏವೂರ ಅವರು ತಮ್ಮ ಕುಟುಂಬ ಸಮೇತ ಶಹಾಪುರ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಶಿವಶೇಖರಪ್ಪ ಅವರ ಪತ್ನಿಯ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಐದು ತೊಲೆ ಬಂಗಾರದ ತಾಳಿ ಚೈನ್, 2.5 ತೊಲೆ ಬಂಗಾರದ ಚೈನ್, ಒಂದು ತೊಲೆ ಬಂಗಾರದ ಕಿವಿ ಜುಮುಕಿ ₹7,500 ನಗದು ಹಣ, ಒಂದು ಮೊಬೈಲ್ ಅನ್ನು ಕಳ್ಳರು ಎಗರಿಸಿ ಪರಾರಿಯಾಗಿದ್ದರು.
‘ಮೊಬೈಲ್ ಲೊಕೇಶನ್ ಸಹಾಯದಿಂದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅಲ್ಲದೇ 85 ಗ್ರಾಂ ಬಂಗಾರದ ಆಭರಣ ಹಾಗೂ ಮೊಬೈಲ್ ಹೀಗೆ ಒಟ್ಟು ₹ 4.35 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾ ಎಸ್ಪಿ ಸಂಗೀತಾ ಜಿ., ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಹಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.