ADVERTISEMENT

ಶಕ್ತಿಮೀರಿ ಕೆಲಸಮಾಡಿದ ತೃಪ್ತಿಯಿದೆ: ಕೂರ್ಮಾರಾವ್‌

ಆಡಳಿತಶಾಹಿ ವ್ಯವಸ್ಥೆಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆ: ನಿರ್ಗಮಿತ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2020, 16:32 IST
Last Updated 27 ಆಗಸ್ಟ್ 2020, 16:32 IST
ಯಾದಗಿರಿ ಜಿಲ್ಲೆಯಿಂದ ನಿರ್ಗಮಿತ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಇದ್ದರು
ಯಾದಗಿರಿ ಜಿಲ್ಲೆಯಿಂದ ನಿರ್ಗಮಿತ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಇದ್ದರು   

ಯಾದಗಿರಿ: ಆಡಳಿತಶಾಹಿ ವ್ಯವಸ್ಥೆಯಲ್ಲಿ ವರ್ಗಾವಣೆ ಸಹಜ ಪ್ರಕ್ರಿಯೆ. 2019ರ ನೆರೆ ಪ್ರವಾಹ ನಿರ್ವಹಣೆ ಹಾಗೂ ಕೋವಿಡ್-19 ಸೋಂಕು ನಿಯಂತ್ರಣದಂಥ ಆರೋಗ್ಯ ತುರ್ತು ಸಂದರ್ಭದಲ್ಲಿ 24 ಗಂಟೆಗಳ ಕಾಲ ಎಲ್ಲಾ ಅಧಿಕಾರಿಗಳ ಸಾಂಘಿಕ ಶ್ರಮದಿಂದ ಜಿಲ್ಲೆಯಲ್ಲಿ ಶಕ್ತಿಮೀರಿ ಕಾರ್ಯನಿರ್ವಹಣೆ ಮಾಡಿರುವ ತೃಪ್ತಿ ತಮಗಿದೆ ಎಂದು ಜಿಲ್ಲೆಯಿಂದ ವರ್ಗಾವಾಗಿ ಹೋಗುತ್ತಿರುವ ನಿರ್ಗಮಿತ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲೆಯಿಂದ ವರ್ಗವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಎಂ.ಕೂರ್ಮರಾವ್ ಅವರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಹಾಗೂ ನೂತನ ಜಿಲ್ಲಾಧಿಕಾರಿಗಳಾಗಿ ಆಗಮಿಸಿದ ಡಾ. ರಾಗಪ್ರಿಯಾ ಆರ್., ಅವರಿಗೆ ಗುರುವಾರ ಆಯೋಜಿಸಿದ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಎಲ್ಲಾ ಅಧಿಕಾರಿಗಳು ಸಮರ್ಪಕ, ಶ್ರದ್ಧಾ ಮನೋಭಾವನೆಯಿಂದ ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಣೆ ಮಾಡಿದರೆ ಮಾತ್ರ ಜಿಲ್ಲೆಯ ಪ್ರಗತಿ ಸಾಧ್ಯ. ಅಧಿಕಾರಿ-ಸಿಬ್ಬಂದಿಗಳಿಗೆ ಉತ್ತಮ ಮೂಲ ಸೌಕರ್ಯಗಳು ಕಲ್ಪಿಸಿದಲ್ಲಿ ಇನ್ನೂ ಹೆಚ್ಚಿನ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯ. ಸಕಾಲ ಯೋಜನೆಯಡಿ ಅರ್ಜಿ ವಿಲೇವಾರಿಯಲ್ಲಿ 2019ರ ನವೆಂಬರ್ ತಿಂಗಳಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದ ಕೀರ್ತಿ ಈ ಜಿಲ್ಲೆಗಿದೆ ಎಂದು ತಮ್ಮ ಕಾರ್ಯನಿರ್ವಹಣೆ ಅವಧಿಯನ್ನು ಸ್ಮರಿಸಿಕೊಂಡರು.

ADVERTISEMENT

ಕೋವಿಡ್-19 ಸೋಂಕು ನಿಭಾಹಿಸುವುದು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಇದರ ನಿಯಂತ್ರಣಕ್ಕಾಗಿ ಅಧಿಕಾರಿಗಳು ಸಾಕಷ್ಟು ಶ್ರಮವಹಿಸಿ ಕಾರ್ಯನಿರ್ವಸುತ್ತಿದ್ದಾರೆ ಎಂದು ಅಧಿಕಾರಿ-ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ. ರಾಗಪ್ರಿಯಾ ಆರ್., ಅವರಿಗೆ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿಅಧ್ಯಕ್ಷ ಬಸನಗೌಡ ಪಾಟೀಲ್ ಯಡಿಯಾಪುರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ,ಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಇಂದೂಧರ ಸಿನ್ನೂರ, ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಜೋಳದಡಗಿ, ಖಾಸಗಿ ವೈದ್ಯ ಡಾ. ವಿರೇಶ ಜಾಕಾ, ಪತ್ರಕರ್ತರಾದ ಸುನೀಲ ಪಾಟೀಲ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

ಲಿಂಗೇರಿ ಸ್ಟೇಷನ್ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ಹಾಗೂ ತಂಡದವರು ಪ್ರಾರ್ಥನ ಗೀತೆ ಹಾಡಿದರು. ಸಉಪವಿಭಾಗಾಧಿಕಾರಿ ಶಂಕರಗೌಡ ಎಸ್. ಸೋಮನಾಳ ಅವರು ವಂದಿಸಿದರು. ಉಪನ್ಯಾಸಕಿ ಡಾ. ಜ್ಯೋತಿಲತಾ ತಡಿಬಿಡಿಮಠ ನಿರೂಪಿಸಿದರು.

***

ಹಿಂದುಳಿದ ಹಣೆಪಟ್ಟಿಯಿಂದ ಯಾದಗಿರಿ ಅಭಿವೃದ್ಧಿಯತ್ತ ಸಾಗುತ್ತಿದೆ. ಜಿಲ್ಲೆಯಲ್ಲಿ ಪಾರದರ್ಶಕ ಆಡಳಿತಕ್ಕಾಗಿ ಇ-ಕಚೇರಿ ಅನುಷ್ಠಾನಗೊಳಿಸಲಾಗಿದೆ.
-ಎಂ.ಕೂರ್ಮಾರಾವ್,ನಿರ್ಗಮಿತ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.