ಸುರಪುರ: ತಾಲ್ಲೂಕಿನಲ್ಲಿ ಕೃಷ್ಣೆ ಹರಿಯುತ್ತಿದ್ದು, ಸುತ್ತಲಿನ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಿದೆ. ಆದರೂ ಇನ್ನೂ ಹಲವು ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಮಸ್ಯೆ ಜಟಿಲವಾಗಿ ಉಳಿದಿದೆ.
ಬೇಸಿಗೆ ಹತ್ತಿರ ಬರುತ್ತಿದ್ದಂತೆ ಸರಣಿ ಸಭೆ ನಡೆಸುವ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರತಿನಿಧಿಗಳು ಸಮಸ್ಯೆ ಆಗದಂತೆ ಮುಂಜಾಗ್ರತೆ ಹಾಗೂ ಕ್ರಮವಹಿಸಬೇಕು ಎಂದು ಸೂಚಿಸುತ್ತಾರೆ. ಅಧಿಕಾರಿಗಳು ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಸಿದ್ಧಪಡಿಸಿ ಹಣ ಮಂಜೂರು ಮಾಡಿಕೊಂಡು ತಾತ್ಕಾಲಿಕ ವ್ಯವಸ್ಥೆ ಮಾಡುತ್ತಾರೆ. ಮಳೆ ಬಂತೆಂದರೆ ಸಮಸ್ಯೆ ಮರೆತು ಬಿಡುತ್ತಾರೆ. ಮತ್ತೆ ಸಮಸ್ಯೆ ನೆನಪಾಗುವುದು ಮುಂದಿನ ಬೇಸಿಗೆಗೆ.
ತಾಲ್ಲೂಕಿನ ಕೆಂಭಾವಿ ಹೋಬಳಿಯ ಯಕ್ತಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚು. ಯಕ್ತಾಪುರ, ಗುತ್ತಿಬಸವೇಶ್ವರ, ಅಶ್ರಯ ಕಾಲೊನಿ, ಬೇವಿನಾಳ ಎಸ್.ಕೆ., ಬಿ.ತಳ್ಳಳ್ಳಿ, ಜನತಾ ಕಾಲೊನಿ, ಹೂವಿನಳ್ಳಿ, ಐನಾಪುರ, ಎಂ. ಬೊಮ್ಮನಳ್ಳಿ, ಆಲ್ಹಾಳ, ಕಾಚಾಪುರ ಮತ್ತು ಮಲ್ಕಾಪುರ ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ.
ಸೂಗೂರ ಗ್ರಾ.ಪಂ ವ್ಯಾಪ್ತಿಯ ಚಂದಲಾಪುರ, ಅಡ್ಡೊಡಗಿ, ಚೌಡೇಶ್ವರಿಹಾಳ, ದೇವಪುರ ಗ್ರಾ.ಪಂ ವ್ಯಾಪ್ತಿಯ ಶೆಳ್ಳಗಿ, ಹೆಗ್ಗನದೊಡ್ಡಿ ಗ್ರಾ.ಪಂ ವ್ಯಾಪ್ತಿಯ ಕಿರದಳ್ಳಿ ತಾಂಡಾಗಳು ಸಮಸ್ಯಾತ್ಮಕ ಗ್ರಾಮಗಳೆಂದು ದಾಖಲೆಗಳು ಹೇಳುತ್ತವೆ.
ಆದರೆ, ಇನ್ನು ಹಲವು ಗ್ರಾಮಗಳಿಗೂ ಬೇಸಿಗೆಯ ಕುಡಿಯುವ ನೀರಿನ ಬವಣೆ ತಪ್ಪುತ್ತಿಲ್ಲ. ಆ ಗ್ರಾಮಗಳ ಜನರ ಕೂಗು ಆಡಳಿತಕ್ಕೆ ಕೇಳಿಸುತ್ತಿಲ್ಲ. ರತ್ತಾಳ, ಲಿಂಗದಳ್ಳಿ, ದೇವಿಕೇರಿ ಇಂತಹ ಹಲವು ಗ್ರಾಮಗಳನ್ನು ಪಟ್ಟಿಗೆ ಸೇರಿಸಿಲ್ಲ.
ಈಗಾಗಲೇ ಗುತ್ತಿಬಸವಣ್ಣ ಮತ್ತು ಬೇವಿನಾಳ ಎಸ್.ಕೆ. ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಯಕ್ತಾಪುರ, ಎಂ. ಬೊಮ್ಮನಳ್ಳಿ, ಐನಾಪುರ, ಬಿ. ತಳ್ಳಳ್ಳಿ, ಜನತಾ ಕಾಲೊನಿ, ಆಲ್ಹಾಳ ಗ್ರಾಮಗಳಲ್ಲಿ ಖಾಸಗಿ ವ್ಯಕ್ತಿಗಳಿಂದ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ.
ಸಮಸ್ಯೆ ಇರುವ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ಕೆಲವೆಡೆ ಘಟಕ ಸ್ಥಾಪಿಸಿಲ್ಲ. ಅಲ್ಲಿನ ಗ್ರಾಮಸ್ಥರು 1 ರಿಂದ 5 ಕಿ.ಮೀ. ದೂರದಿಂದ ನೀರು ತರುತ್ತಿದ್ದಾರೆ.
ಸಮ್ಯಸ್ಯಾತ್ಮಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಆರಂಭಿಸಲಾಗುತ್ತದೆ. ಮುಂದಿನ ಬೇಸಿಗೆ ಒಳಗೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲದಂತೆ ಕ್ರಮವಹಿಸಲಾಗುವುದು
-ಎಚ್.ಡಿ. ಪಾಟೀಲ ಎಇಇ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ
ತಾಲ್ಲೂಕಿನಲ್ಲಿ ಕೃಷ್ಣೆ ಸೇರಿದಂತೆ ಸಾಕಷ್ಟು ಜಲಮೂಲಗಳ ವ್ಯವಸ್ಥೆಯಿದೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದುವಿಶ್ವರಾಜ ಒಂಟೂರ ಚಂದಲಾಪುರ
ಉಚಿತವಾಗಿ ನೀರು ಪೂರೈಕೆ ಸುರಪುರ ತಾಲ್ಲೂಕಿನ ಚಂದಲಾಪುರ ಗ್ರಾಮದ ವಿಶ್ವರಾಜ ಒಂಟೂರ ವಿದ್ಯಾವಂತ ಯುವಕ. ಚಂದಲಾಪುರ ಗ್ರಾಮದ ಶೇ 75ರಷ್ಟು ಜನರು ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಈ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮನೆ ಬಾಗಿಲಿಗೆ ಸಾಕಷ್ಟು ಸಲ ಅಡ್ಡಾಡಿದ ವಿಶ್ವರಾಜ ಅವರಿಗೆ ಸ್ಪಂದನೆ ಸಿಗಲಿಲ್ಲ. ಕೊನೆಗೆ ಕಳೆದ ಮಾರ್ಚ್ ತಿಂಗಳಲ್ಲಿ ತಮ್ಮ ಮನೆಯ ಮುಂದೆ ಕೊಳೆಬಾವಿಯನ್ನು ಸ್ವಂತ ಖರ್ಚಿನಲ್ಲಿ ಕೊರೆಯಿಸಿ ಮೋಟಾರು ಅಳವಡಿಸಿದ್ದಾರೆ. ನಿತ್ಯವೂ ಬೆಳಿಗ್ಗೆ ಮೂರು ಗಂಟೆ ಸಂಜೆ ಮೂರು ಗಂಟೆ ಗ್ರಾಮಸ್ಥರಿಗೆ ಉಚಿತವಾಗಿ ನೀರು ಕೊಡುತ್ತಿದ್ದಾರೆ. ನೀರಿಗಾಗಿ ಮೂರು ಕಿ.ಮೀ. ದೂರದ ಗ್ರಾಮಕ್ಕೆ ಹೋಗಬೇಕಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.