ADVERTISEMENT

ಯಾದಗಿರಿ | ರೈತರಿಗೆ ತಲೆನೋವಾದ ಕಳ್ಳರ ಕಾಟ

ಮೂರು ವರ್ಷಗಳಿಂದ ಕೃಷ್ಣಾ, ಭೀಮಾ ನದಿ ತೀರದಲ್ಲಿ ಕಳವು ಪ್ರಕರಣಗಳು

ಬಿ.ಜಿ.ಪ್ರವೀಣಕುಮಾರ
Published 9 ಜನವರಿ 2023, 19:31 IST
Last Updated 9 ಜನವರಿ 2023, 19:31 IST
ಕೃಷಿಕ (ಪ್ರಾತಿನಿಧಿಕ ಚಿತ್ರ)
ಕೃಷಿಕ (ಪ್ರಾತಿನಿಧಿಕ ಚಿತ್ರ)   

ಯಾದಗಿರಿ: ಜಿಲ್ಲೆಯಲ್ಲಿ ಆಗಾಗ ರೈತರ ಪಂಪ್‌ಸೆಟ್‌ ಮೋಟಾರ್‌ ಕಳವು ಪ್ರಕರಣಗಳು ನಡೆಯುತ್ತಿದ್ದು, ಇದು ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಹಿಂಗಾರು ಹಂಗಾಮಿನಲ್ಲಿ ಕಾಲುವೆ ಜಾಲದಲ್ಲಿ ಭತ್ತ, ಶೇಂಗಾ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದು, ನೀರು ಹಾಯಿಸಲು ಮೋಟಾರ್‌ ಪಂಪ್‌ಗಳು ಬೇಕು. ಆದರೆ, ಕಳ್ಳರು ಅವುಗಳ ಮೇಲೆ ಕಣ್ಣುಹಾಕಿ ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ.

ಕೃಷ್ಣಾ ಮತ್ತು ಭೀಮಾ ನದಿಯ ನೀರು ಬಳಸಿಕೊಂಡು ಸಮೃದ್ದವಾದ ಬೆಳೆ ಬೆಳೆಯಲು ಮುಂದಾಗಿದ್ದಾರೆ. ಗದ್ದೆಗೆ ನೀರು ಹರಿಸಲು ಸಾವಿರಾರು ರೂಪಾಯಿ ಖರ್ಚು ಮಾಡಿ ಪಂಪ್ ಸೆಟ್‌ಗಳನ್ನು ಅಳವಡಿಸಿದ್ದಾರೆ. ಆದರೆ, ಈಗ ಅದೇ ರೈತರಿಗೆ ಕಳ್ಳರ ಕಾಟ ಶುರುವಾಗಿದೆ. ರಾತ್ರೋರಾತ್ರಿ ಕಳ್ಳರು ರೈತರ ಜಮೀನಿಗೆ ಬಂದು ಪಂಪ್‌ಸೆಟ್‌ಗಳನ್ನು ಕಳವು ಮಾಡಿಕೊಂಡು ತೆರಳುತ್ತಿದ್ದಾರೆ.

ನೀರು ಹರಿಸಲು ಹರಸಾಹಸ: ನಗರದ ಹೊರ ಭಾಗದ ಭೀಮಾ ನದಿ ದಡದಲ್ಲಿ ಪಂಪ್‌ಸೆಟ್ ಕಳ್ಳತನದಿಂದ ಗದ್ದೆಗೆ ನೀರು ಹರಿಸಲಾಗದೆ ರೈತರು ಕಂಗಲಾಗಿದ್ದಾರೆ. ಭೀಮಾ ನದಿ ನೀರು ಬಳಸಿಕೊಂಡು ಜಿಲ್ಲೆಯ ಸಾವಿರಾರು ರೈತರು ಪ್ರತಿ ವರ್ಷ ಎರಡು ಬೆಳೆ ಭತ್ತ ಬೆಳೆಯುತ್ತಾರೆ. ನದಿಯಿಂದ ನೀರು ಬಳಸಿಕೊಳ್ಳಲು ಪ್ರತಿಯೊಬ್ಬ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ನದಿ ದಡಕ್ಕೆ ಪಂಪ್ ಸೆಟ್ ಹಾಗೂ ಮೋಟರ್‌ಗಳನ್ನು ಬಿಟ್ಟಿದ್ದಾರೆ. ಇದೆ ಪಂಪ್‌ಸೆಟ್‌ಗಳ ಮೂಲಕ ತಮ್ಮ ಗದ್ದೆಗಳಿಗೆ ನೀರುಣಿಸಿಕೊಳ್ಳುತ್ತಿದ್ದಾರೆ.

ADVERTISEMENT

ಆರೇಳು ಜನರ ಗುಂಪು: ಬೆಳಿಗ್ಗೆಯಿಂದ ಸಂಜೆ ತನಕ ಗದ್ದೆಯಲ್ಲಿ ದುಡಿದು ಮನೆಗೆ ಹೋಗುವ ರೈತರಿಗೆ ವಾಪಸ್ ಮಾರನೆ ದಿನ ಬೆಳಿಗ್ಗೆ ಬಂದು ನೋಡಿದರೆ ಶಾಕ್ ಎದುರಾಗುತ್ತಿದೆ.

ಆರೇಳು ಜನ ಕಳ್ಳರ ಗ್ಯಾಂಗ್ ಗದ್ದೆಗಳಲ್ಲಿ ಪಂಪ್‌ಸೆಟ್‌ಗಳನ್ನು ಎಗರಿಸುವಂತ ಕೆಲಸ ಮಾಡುತ್ತಿದ್ದಾರೆ. ರಾತ್ರಿ ವೇಳೆ ಕರೆಂಟ್ ಇಲ್ಲದ ವೇಳೆಯಲ್ಲಿ ಆಗಿ ಕಳ್ಳರು ಗದ್ದೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ ಎಂದು ರೈತರು ದೂರಿದ್ದಾರೆ.

ತಾಮ್ರದ ತಂತಿ ಕಳವು: ಭೀಮಾ ನದಿ ದಡದಲ್ಲಿರುವ ಸುಮಾರು ಹತ್ತಾರು ರೈತರ ಗದ್ದೆಗಳಲ್ಲಿರುವ ಪೆಂಪ್ ಸೆಟ್‌ನಲ್ಲಿರುವ ಬೆಲೆ ಬಾಳುವ ಕಾಪರ್ ತಂತಿ ಕದ್ದು ಪರಾರಿಯಾಗುತ್ತಿದ್ದಾರೆ. ಪಂಪ್ ಸೆಟ್‌ಗಳು ಭಾರವಾಗಿದ್ದರಿಂದ ಸಾಗಿಸಲು ಕಷ್ಟ ಆಗುತ್ತದೆ ಎಂದು ಕಳ್ಳರು ಪಂಪ್‌ಸೆಟ್‌ನಲ್ಲಿರುವ ಬೆಲೆ ಬಾಳುವ ತಾಮ್ರದ ತಂತಿಗಳನ್ನು ಆರಾಮಾಗಿ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದಾರೆ.

ಗದ್ದೆಗಳನ್ನು ಹದ ಮಾಡಿ ಭತ್ತ ನಾಟಿ ಮಾಡುತ್ತಿರುವ ರೈತರಿಗೆ ನಿತ್ಯ ಗದ್ದೆ ನೀರು ಬಿಡಬೇಕು. ಆದರೆ, ಪಂಪ್ ಸೆಟ್ ಹಾಗೂ ಮೋಟರ್‌ಗಳನ್ನು ಹಾಳು ಮಾಡಿದ್ದರಿಂದ ರೈತರು ಗದ್ದೆ ನೀರು ಬಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿ ಕೊಟ್ಟು ಗದ್ದೆಗಳನ್ನು ಲೀಸ್ ಪಡೆದಿರುವ ರೈತರು ಸರಿಯಾದ ಸಮಯಕ್ಕೆ ಬೆಳೆ ನೀರು ಕೊಡಲಾಗದೆ ಕಂಗಲಾಗಿದ್ದಾರೆ.

‘ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಕಳ್ಳರು ತಮ್ಮ ಕೈಚಳಕ ತೋರಿಸುತ್ತಿದ್ದಾರೆ. ಇನ್ನು ಕಳೆದ ಒಂದೇ ತಿಂಗಳಲ್ಲಿ ಸುಮಾರು ನೂರಕ್ಕೂ ಅಧಿಕ ಪಂಪ್‌ಸೆಟ್‌ಗಳ ತಾಮ್ರದ ತಂತಿ ಕದ್ದಿದ್ದಾರೆ. ಮೊದಲೇ ಸಂಕಷ್ಟದಲ್ಲಿರುವ ರೈತರಿಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ. ಹೀಗಾಗಿ ಪೊಲೀಸರು ರಾತ್ರಿ ವೇಳೆ ಗಸ್ತು ಜಾಸ್ತಿ ಮಾಡಿ ಕಳ್ಳತನ ಆಗದಂತೆ ನೋಡಿಕೊಳ್ಳಬೇಕಾಗಿದೆ‘ ಎಂದು ರೈತರ ಆಗ್ರಹವಾಗಿದೆ.

‘ರೈತರು ಜಾಗೃತರಾಗಿರಬೇಕು. ಸಾಧ್ಯವಾದರೆ ರಾತ್ರಿ ವೇಳೆ ರೈತರೆಲ್ಲರೂ ಸೇರಿ ಒಬ್ಬ ಕಾವಲುಗಾರನನ್ನೂ ನಿಯೋಜನೆ ಮಾಡಿಕೊಂಡು ವಸ್ತುಗಳನ್ನು ಕಳ್ಳತನ ಆಗದಂತೆ ನೋಡಿಕೊಳ್ಳಬೇಕು’ ಎನ್ನುತ್ತವೆ ಪೊಲೀಸ್‌ ಮೂಲಗಳು.

***

ಪಂಪ್‌ಸೆಟ್‌ ಕಳ್ಳತನ ಮಾಡುವ ಮಾಹಿತಿ ಇದ್ದು, ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗುತ್ತಿದೆ. ಗುಜರಿ ಅಂಗಡಿ, ಮೋಟಾರ್‌ ಪಂಪ್‌ ದುರಸ್ತಿ ಅಂಗಡಿಗಳ ಮೇಲೂ ನಿಗಾ ವಹಿಸಿ ಕಳ್ಳತನ ತಡೆಗೆ ಪ್ರಯತ್ನಿಸಲಾಗುತ್ತಿದೆ.
–ಡಾ.ಸಿ.ಬಿ.ವೇದಮೂರ್ತಿ,ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

***

ನದಿ ದಡದಲ್ಲಿರುವ ಮೋಟಾರ್‌ ಪಂಪ್‌ಸೆಟ್‌ಗಳನ್ನು ಕಳ್ಳರು ಕಳವು ಮಾಡಿಕೊಂಡು ಹೋಗುವುದು ತಲೆನೋವಾಗಿದೆ. ಪೊಲೀಸ್‌ ಇಲಾಖೆ ಕಳ್ಳರನ್ನು ಪತ್ತೆ ಹತ್ತಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಬಸವರಾಜ ದೊಡಮನಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.