
ಗುರುಮಠಕಲ್: ಸ್ವ-ಉದ್ಯೋಗ ಮತ್ತು ಉದ್ಯಮಿಯಾಗಲು ಚಿಂತನೆ, ಪೂರಕ ಯೋಜನೆ ಮತ್ತು ಪರಿಶ್ರಮದ ಅಗತ್ಯವಿದೆ. ಸೃಜನಶೀಲತೆ, ಕ್ರಿಯಾಶೀಲತೆ, ಸ್ವಯಂ ಪ್ರೇರಣೆ, ಆವಿಷ್ಕಾರ, ದೂರದೃಷ್ಟಿ, ಗುಣಮಟ್ಟ ಮತ್ತು ಪ್ರಮಾಣದ ಕುರಿತು ಜಾಗೃತಿ ಹಾಗೂ ನಂಬಿಕೆಗಳು ಅತಿಮುಖ್ಯ ಎಂದು ಜಿಲ್ಲಾ ಪಂಚಾಯಿತಿ ಉಪನಿರ್ದೇಶಕ(ಕೈಗಾರಿಕೆ) ಮುಕುಂದರೆಡ್ಡಿ ಪಾಟೀಲ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಕೆಎಸ್‌ಎಂಸಿಎ ಸಹಯೋಗದಲ್ಲಿ ಆಯೋಜಿಸಿದ್ದ ‘ಎಂಎಸ್‌ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವ(ಆರ್‌ಎಎಂಪಿ) ಯೋಜನೆಯಡಿ ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರ’ದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಇಒ ಅಂಬರೀಷ ಪಾಟೀಲ ಮಾತನಾಡಿ, ‘ಸಣ್ಣ ಮತ್ತು ಬೃಹತ್ ಉದ್ದಿಮೆಗಳು ದೇಶದ ಆರ್ಥಿಕ ಸದೃಢತೆಗೆ ಆಧಾರ. ಕಾಲ ಕಾಲಕ್ಕೆ ನವೀನ ಆವಿಷ್ಕಾರ, ತಂತ್ರಜ್ಞಾನ ಅಳವಡಿಕೆ, ಸಂಶೋಧನೆಗಳು ಸಣ್ಣ, ಮಧ್ಯಮ ಮತ್ತು ಬೃಹತ್ ಉದ್ಯಮಗಳಿಂದ ಸಾಧ್ಯವಾಗುತ್ತದೆ’ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸತೀಶಕುಮಾರ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣದ ನಂತರ ಉದ್ದಿಮೆ ಮಾಡಲು ಇಚ್ಛಿಸಿದರೆ ಕೈಗಾರಿಕಾ ವಾಣಿಜ್ಯ ಇಲಾಖೆಯಿಂದ ವಿವಿಧ ಯೋಜನೆಗಳ ಮೂಲಕ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಲಾಗುವುದು’ ಎಂದು ತಿಳಿಸಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸಲೀಮ್, ಅಧೀಕ್ಷಕ ಕೆ.ಷಣ್ಮುಖ, ಕಾಲೇಜಿನ ಐಕ್ಯೂಎಸಿ ಸಂಯೋಜಕ ಇಮ್ರಾನ್ ಖಾಜಿ ಮತ್ತು ಶರಣಬಸವ ವಿಶ್ವವಿದ್ಯಾಲಯದ ಬಸಂತಿ ಘಂಟಿ ಅವರು ತರಬೇತಿ ನೀಡಿದರು.
ಪ್ರಾಂಶುಪಾಲ ಪುರುಷೋತ್ತಮ್ ಜೋಷಿ ಮಾತನಾಡಿದರು. ಉಪನ್ಯಾಸಕರಾದ ಕೃಷ್ಣಾ ಚಪೆಟ್ಲಾ ಸ್ವಾಗತಿಸಿ, ವೆಂಕಟೇಶ ಕೊಲ್ಲಿ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.