
ಕಕ್ಕೇರಾ: ಹಿಂದೂ-ಮುಸ್ಲಿಂ ಭಾವೈಕ್ಯದ ಕೊಂಡಿ, ದಕ್ಷಿಣ ಕಾಶಿ ಎಂದೇ ಹೆಸರಾದ ಸುಕ್ಷೇತ್ರ ತಿಂಥಣಿಯ ಮೌನೇಶ್ವರ ಜಾತ್ರಾ ಮಹೋತ್ಸವ ಭರ್ಜರಿ ಸಿದ್ದತೆ ನಡೆದಿದೆ.
ಜ.28 ರಂದು ದಶಮಿ ಆಚರಣೆ, ಸುರಪುರದಿಂದ ಪಲ್ಲಕ್ಕಿ ಉತ್ಸವ ತಿಂಥಣಿಗೆ, ಜ.29 ರಂದು ಏಕಾದಶಿ ಆಚರಣೆ, ಸಂಜೆ ಮಹಾಪ್ರಸಾದ, ಜ.30ರಂದು ದ್ವಾದಶಿ ಪಲ್ಲಕ್ಕಿ ಸೇವೆ. ಜ.31 ರಂದು ತ್ರಯೋದಶಿ ಧಾರ್ಮಿಕ ಕಾರ್ಯಕ್ರಮ, ಜವಳ, ಸಾಮೂಹಿಕ ಉಪನಯನ ಮತ್ತು ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿವೆ. ಫೆ 1ರಂದು ಸಂಜೆ 5 ಗಂಟೆಗೆ ಮೌನೇಶ್ವರರ ರಥೋತ್ಸವ ಭಕ್ತ ಸಮೂಹ ಮಧ್ಯೆ ಅದ್ಧೂರಿಯಾಗಿ ಜರುಗಲಿದೆ. ಫೆ.2 ರಂದು ಧೂಳಗಾಯಿ ಗುಹಾ ಪ್ರವೇಶ ಆಗಲಿದೆ.
ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮತ್ತು ಸಾರಿಗೆ ಮೂಲಕ ಜಾತ್ರೆಗೆ ಆಗಮಿಸಿ ಕೃಷ್ಣಾ ನದಿಯಲ್ಲಿ ತೀರ್ಥ ಸ್ನಾನಗೈದು ನಂತರ ಮೌನೇಶ್ವರನ ದರ್ಶನ ಪಡೆಯುತ್ತಾರೆ.
ಮೌನೇಶ್ವರ ಮಹಿಮೆ: ತಿಂಥಣಿಯ ಮೌನೇಶ್ವರರು ಮಹಿಮೆಯಿಂದಲೇ ಭಕ್ತಾಧಿಗಳನ್ನು ಸುಕ್ಷೇತ್ರ ಆಕರ್ಷಿಸುತ್ತಿದೆ. ಉಳವಿಯ ಲಕ್ಷ್ಮೇಶ್ವರ, ಕಲ್ಯಾಣ, ವಿಜಯಪುರ, ಶಹಾಪೂರ, ಕಾಶಿ ಹೀಗೆ ಅನೇಕ ಭಾಗಗಳು ಸಂಚರಿಸಿ ಕಷ್ಟ ಕಾರ್ಪಣ್ಯ ನೀಗಿಸುತ್ತಾ ಮಹಿಮೆಗಳ ಮೆರೆದರು. ವರವಿ, ವಿಜಯಪುರ ಪ್ರದೇಶದ ಸುತ್ತಮುತ್ತಗಳಲ್ಲಿ ಮೌನೇಶ್ವರರ ಗುಡಿಗಳಿವೆ. ಅಲ್ಲದೆ ಇವರ ದೇವಾಲಯಗಳು ಹಿಂದೂ-ಮುಸ್ಲಿಂ ಭಾವೈಕ್ಯತೆ ಶೈಲಿಯಲ್ಲಿ ನೋಡಬಹುದು. ತಿಂಥಣಿ ಕೂಡ ಅದೇ ಮಾದರಿಯಲ್ಲಿ ಕಾಣಬಹುದಾಗಿದೆ.
ಮಹ್ಮದ ಪೈಗಂಬರ ಮತ್ತು ಗಂಗಾಧರ ಒಬ್ಬರೇ ಎಂದು ಮೌನೇಶ್ವರ ಸಾರಿದರು. ಅವರ ವಾಕ್ಯದಲ್ಲಿ ಓಂ ಮತ್ತು ಅಲ್ಲಾ ಒಂದೇ ಎಂಬ ಭಾವ ಸಾಂಸ್ಕೃತಿಕ ಸಿದ್ಧಿಯನ್ನು ಮೊಳಗಿಸಿದ ಮೌನೇಶ್ವರ ಮಹಾ ಮಾನವತಾವಾದಿ ಹಾಗೂ ಸಾಮಾಜಿಕ ಸಂತ ಎನ್ನಬಹುದು.
ಸುರಪುರ ತಾಲ್ಲೂಕಿನ ದೇವರಗೋನಾಲ ಗ್ರಾಮದ ಶೇಷಪ್ಪ ಮತ್ತು ಶೇಷಕ್ಕ ದಂಪತಿಗಳಿಗೆ ಜನಿಸಿ 8 ವರ್ಷ ತುಂಬಿದಾಗ ಉಪನಯನ ಮಾಡಿಸಿಕೊಂಡ ಅವರು ಸುರಪುರ ಗುರುಕುಲದಲ್ಲಿ ಶಿವಸ್ವಾಮಿ ಗುರುಗಳ ಬಳಿ ಸಂಸ್ಕೃತ, ಉರ್ದು, ಕನ್ನಡ ಕಲಿತು ವಿವಿಧ ಶಾಸ್ತ್ರಗಳ ಪರಿಚಯ ಮಾಡಿಕೊಂಡು ಅವರ ಅನುಗ್ರಹದಲ್ಲಿ ಕಾಶಿಯಾತ್ರೆ, ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ರಾಚೋಟಿಗೆ ತೆರಳಿ ವೀರಭಧ್ರ ದೇವರ ಆರಾಧನೆ ಮಾಡಿದ್ದು ವಿಶೇಷ. ನಂತರ ವರವಿ, ಲಿಂಗನಬಂಡಿಗಳಲ್ಲಿ ಅನೇಕ ಪವಾಡಗಳ ಮಾಡಿದರೆಂದು ಪುರಾಣಗಳಲ್ಲಿ ತಿಳಿದು ಬರುತ್ತದೆ.
ತಂದೆ-ತಾಯಿ ವೃದ್ಧರಾಗಿ ತೀರಿಕೊಂಡಾಗ ನಂತರ ದೇಶ ಸಂಚಾರ ಮಾಡುತ್ತಾ ಭಕ್ತರನ್ನು ಉದ್ದರಿಸುವ ಕಾಯದಲ್ಲಿ ತೊಡಗಿಸಿಕೊಂಡು ಕೃಷ್ಣಾನದಿ ದಂಡೆಯಲ್ಲಿನ ತಿಂಥಣಿಯಲ್ಲಿ ನೆಲೆಸಿದರು. ಹೀಗಾಗಿ ಸುಕ್ಷೇತ್ರ ತಿಂಥಣಿ ಪವಿತ್ರ ಸ್ಥಾನವಾಗಿ ಗುರುತಿಸಿಕೊಂಡಿದೆ.
‘ಪ್ರತಿ ವರ್ಷವು ಜಾತ್ರೆಯಲ್ಲಿ ಮದ್ಯ ಮತ್ತು ಮಾಂಸ ಮಾರಾಟವಾಗುತ್ತಿದ್ದು, ಈ ವರ್ಷ ಕಟ್ಟುನಿಟ್ಟಿನಿಂದ ಮಾರಟ ನಿಷೇಧಿಸಬೇಕು’ ಎಂದು ಗ್ರಾ.ಪಂ ಸದಸ್ಯ ಭೈರಣ್ಣ ಅಂಬಿಗರ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಭಕ್ತರಿಗೆ ಸೌಕರ್ಯ: ‘ಜಾತ್ರಾ ಮಹೋತ್ಸವದಲ್ಲಿ ಭಕ್ತರಿಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತುರ್ತುಸೇವೆ, ಸೂಕ್ತ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರಸಾದ ವಿತರಿಸುವ ಸ್ಥಳ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರ್ ಅಳವಡಿಸಲಾಗಿದೆ. ಅಲ್ಲದೆ ಭಕ್ತಾಧಿಗಳಿಗೆ ಸುಗಮವಾಗಿ ಸಂಚರಿಸಲು 150 ಬಸ್ ಬಿಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಕ್ತರಿಗೆ ಶುದ್ಧ ನೀರು ವಿದ್ಯುತ್ ವ್ಯವಸ್ಥೆ ಕಲ್ಪಿಸಿದ್ದು ಮುಂಜಾಗ್ರತೆಗಾಗಿ 16 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.– ರೇವಪ್ಪ ತೆಗ್ಗಿಮನಿ, ಉಪ ತಹಶೀಲ್ದಾರ್
ಸುರಪುರದಿಂದ ಬರುವ ರಸ್ತೆ ದುರಸ್ತಿಯಾಗಿಲ್ಲ. ಜಾತ್ರೆಗೆ ಬರುವ ರಸ್ತೆಯಲ್ಲಿ ಲೈಟಿಂಗ್ ಮತ್ತು ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ತಹಶೀಲ್ದಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.– ಗಂಗಧರನಾಯಕ, ತಿಂಥಣಿ ಸ್ಥಳೀಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.