ADVERTISEMENT

ಕೃಷಿ ಖುಷಿ: ಮೂರುವರೆ ಎಕರೆಯಲ್ಲಿ ‘ಮಿಶ್ರ ಬೇಸಾಯ’

ಗುರುಸಣಗಿಯಲ್ಲಿ ರೈತ ಮಹಮ್ಮದ್ ಜಲಾಲ್‌ದ್ದೀನ್ ಕೈ ಹಿಡಿದ ಕೃಷಿ; ₹1 ಲಕ್ಷ ನಿವ್ವಳ ಲಾಭ

ಬಿ.ಜಿ.ಪ್ರವೀಣಕುಮಾರ
Published 25 ಮಾರ್ಚ್ 2022, 19:30 IST
Last Updated 25 ಮಾರ್ಚ್ 2022, 19:30 IST
ಯಾದಗಿರಿ ಸಮೀಪದ ಗುರುಸಣಗಿಯಲ್ಲಿ ರೈತ ಮಹಮ್ಮದ್ ಜಲಾಲ್‌ದ್ದೀನ್ ಜಮೀನಿನಲ್ಲಿ ಬದನೆ ಸಮೃದ್ಧಿಯಾಗಿ ಬೆಳೆದಿರುವುದು (ಪ್ರಜಾವಾಣಿ ಚಿತ್ರ/ರಾಜಕುಮಾರ ನಳ್ಳಿಕರ)
ಯಾದಗಿರಿ ಸಮೀಪದ ಗುರುಸಣಗಿಯಲ್ಲಿ ರೈತ ಮಹಮ್ಮದ್ ಜಲಾಲ್‌ದ್ದೀನ್ ಜಮೀನಿನಲ್ಲಿ ಬದನೆ ಸಮೃದ್ಧಿಯಾಗಿ ಬೆಳೆದಿರುವುದು (ಪ್ರಜಾವಾಣಿ ಚಿತ್ರ/ರಾಜಕುಮಾರ ನಳ್ಳಿಕರ)   

ಗುರುಸಣಗಿ (ಯಾದಗಿರಿ): ಇಲ್ಲಿಗೆ ಸಮೀಪದ ಗುರುಸಣಗಿ ಗ್ರಾಮದಲ್ಲಿ ಪ್ರಗತಿಪರ ರೈತರೊಬ್ಬರು ತಮ್ಮ ಮೂರುವರೆ ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ ಮಾಡಿ ಕೈತುಂಬಾ ಕಾಸು ಸಂಪಾದನೆ ಮಾಡುತ್ತಿದ್ದಾರೆ.

ಪ್ರಗತಿಪರ ರೈತ ಮಹಮ್ಮದ್ ಜಲಾಲ್‌ದ್ದೀನ್ ಅವರು ಗ್ರಾಮದ ಹೊರವಲಯದಲ್ಲಿ ಬೆಳೆದಿರುವ ವಿವಿಧ ತರಕಾರಿಗಳು ದಾರಿ ಹೋಕರ ಗಮನ ಸೆಳೆಯುತ್ತಿವೆ.

ಏನೇನು ಬೆಳೆದಿದ್ದಾರೆ: ಮೆಕ್ಕೆಜೋಳ, ಕಲ್ಲಂಗಡಿ, ಬದನೆಕಾಯಿ, ಹಿರೇಕಾಯಿ, ಈರುಳ್ಳಿ, ಟೊಮೆಟೊ, ಸಜ್ಜೆ, ಬೆಂಡೆ, ಸೌತೆ, ವಿವಿಧ ಸೊಪ್ಪು, ಮೂಲಂಗಿ, ಕೋತಂಬರಿ, ‌ಚವಳೆಕಾಯಿ, ಅವರೆ ಕಾಯಿ, ಸಬ್ಬಸಗಿ, ಮೆಂತೆ, ಪಾಲಕ್‌ ಇವು ಮೂರೂವರೆ ಎಕರೆಯಲ್ಲಿ ಬೆಳೆದಿದ್ದಾರೆ. ಇವುಗಳ ಮಾರಾಟದಿಂದ ಬರುವ ಆದಾಯದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

ADVERTISEMENT

ಕೊಳವೆ ಬಾವಿಯಲ್ಲಿ ಎರಡೂ ಇಂಚು ನೀರು ಬರುತ್ತಿದ್ದು, ಬೆಳಿಗ್ಗೆಯಿಂದ ಸಂಜೆವರೆಗೆ ಜಮೀನನಲ್ಲಿ ಮೈಮುರಿದು ದುಡಿಯುತ್ತಿದ್ದಾರೆ.

ಜಲಾಲ್‌ದ್ದೀನ್ ಅವರಿಗೆ ಪತ್ನಿ ಮತ್ತು ಮಗ ಸಾಥ್‌ ನೀಡುತ್ತಿದ್ದು, ಹೆಚ್ಚಿನ ಕೆಲಸ ಇದ್ದಾಗ ಮಾತ್ರ ಕೂಲಿಯಾಳುಗಳ ಮೊರೆ ಹೋಗುತ್ತಿದ್ದಾರೆ.

‘ಮೂರು ವರ್ಷಗಳಿಂದ ತರಕಾರಿ ಬೆಳೆಯುವುದನ್ನು ರೂಢಿಸಿಕೊಂಡಿದ್ದೇನೆ. ಇದಕ್ಕೂ ಮೊದಲು ಲಾರಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಆದರೆ, ಅದರಲ್ಲಿ ಎಷ್ಟು ದುಡಿದರೂ ತೃಪ್ತಿಯಾಗುತ್ತಿರಲಿಲ್ಲ. ಈಗ ಸ್ವತಃ ಜಮೀನನಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ದುಡಿದರೂ ಯಾವುದೇ ಆಯಾಸವಾಗುವುದಿಲ್ಲ. ಭೂಮಿತಾಯಿ ನಮಗೆ ಪ್ರತಿಫಲಕೊಡುತ್ತಿದ್ದು, ಇದನ್ನೆ ನೆಚ್ಚಿಕೊಂಡು ಜೀವನ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮಹಮ್ಮದ್‌ ಜಲಾಲ್‌ದ್ದೀನ್.

ಮೂರೂವರೆ ಏಕರೆಯಲ್ಲಿ ಮಿಶ್ರಬೆಳೆ ಬೆಳೆದಿದ್ದು, ಆಯಾ ಕಾಲಕ್ಕೆ ತಕ್ಕಂತೆ ತರಕಾರಿ ಬೆಳೆಯುತ್ತಿದ್ದಾರೆ. ಈಗ ಬೇಸಿಗೆ ಆರಂಭವಾಗಿದ್ದರಿಂದ ಕಲ್ಲಂಗಡಿ ಮತ್ತು ಸೌತೆಕಾಯಿ ಬೆಳೆದಿದ್ದಾರೆ. ಇದು ಭರ್ಜರಿ ಲಾಭ ತರುವ ಬೆಳೆಯಾಗಿದೆ.

ಟೊಮೆಟೊ 3 ಗುಂಟೆ, ಈರುಳ್ಳಿ 1 ಎಕರೆ, ಸಜ್ಜೆ 10 ಗುಂಟೆ, ಮೆಕ್ಕೆಜೋಳ 10 ಗುಂಟೆ, ಬದನೆಕಾಯಿ 10 ಗುಂಟೆ ಹೀಗೆ ಜಮೀನಿನಲ್ಲಿ ಒಂದರ ನಂತರ ಮತ್ತೊಂದು ಬೆಳೆ ಬೆಳೆದು ವಿಭಿನ್ನ ಋತುಮಾನಕ್ಕೆ ತಕ್ಕಂತೆ ಹಣ ಗಳಿಸುತ್ತಿದ್ದಾರೆ.

ಆಯಾ ಋತುಮಾನಕ್ಕೆ ತಕ್ಕಂತೆ ಬೆಳೆ ಬೆಳೆದು ಲಾಭ ಗಳಿಸುವ ಅವರು, ಖರ್ಚು ವೆಚ್ಚ, ಕೂಲಿಯಾಳು ಸೇರಿದಂತೆ ಎಲ್ಲವನ್ನು ತೆಗೆದರೆ ಒಂದು ವರ್ಷಕ್ಕೆ ಒಂದು ಲಕ್ಷ ಲಾಭ ಪಡೆಯುತ್ತಿದ್ದಾರೆ.

ಹಿಂಗಾರಿನಲ್ಲಿ ಶೇಂಗಾ ಬೆಳೆದಿದ್ದರು. ಅದನ್ನು ಕಿತ್ತು ಹಾಕಿ ಈಗ ಅದೇ ಜಾಗದಲ್ಲಿ ಕಲ್ಲಂಗಡಿ ಬಿತ್ತಿದ್ದಾರೆ. ಏಪ್ರಿಲ್‌ ಕೊನೆ ವಾರದಲ್ಲಿ ಫಸಲು ಬರುವ ನಿರೀಕ್ಷೆ ಇದ್ದು, ಬಿರು ಬೇಸಿಗೆಯಲ್ಲಿ ಬೇಡಿಕೆ ಕಡಿಮೆಯಾಗಿರುವುದಿಲ್ಲ ಎನ್ನುತ್ತಾರೆ ರೈತ ಮಹಮ್ಮದ್‌.

‘ಕೃಷಿಯಲ್ಲಿ ಶ್ರದ್ಧೆ ಬೇಕು. ಏನೋ ಮಾಡಬೇಕು ಎನ್ನುವ ಕಾರಣಕ್ಕೆ ಮಾಡಬಾರದು. ಬೆಳೆ ಬೆಳೆದು ಲಾಭ ಪಡೆಯುವಂತಿದ್ದರೆ ಆಯಾ ಸಂದರ್ಭಕ್ಕೆ ಅನುಗುಣವಾಗಿ ಸೂಕ್ತ ನಿರ್ವಹಣೆ ಮಾಡಬೇಕು. ಆಗ ಮಾತ್ರ ಭೂಮಿ ನಮಗೆ ಉತ್ತಮ ಫಸಲು ನೀಡುತ್ತದೆ‘ ಎನ್ನುತ್ತಾರೆ ಅವರು.

’ಜಮೀನಿನಲ್ಲಿ ಇಬ್ಬರು ಕೂಲಿಯಾಳು ಇದ್ದು, ದಂಪತಿ, ಪ್ರತಿ ನಿತ್ಯ ಕೆಲಸ ಮಾಡುತ್ತಾರೆ. ಮಗ ಆಗಾಗ ರಜೆ ಇದ್ದಾಗ ನೆರವಾಗುತ್ತಾನೆ. ಯಾದಗಿರಿ ತರಕಾರಿ ಮಾರುಕಟ್ಟೆಗೆ ನಮ್ಮ ತರಕಾರಿ ಸಾಗಿಸುತ್ತೇವೆ‘ ಎನ್ನುತ್ತಾರೆ ಮಹಮ್ಮದ್‌.

ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆ: ಬೇಸಿಗೆಯಲ್ಲಿ ಸರಿಯಾಗಿ ವಿದ್ಯುತ್‌ ನೀಡದ ಕಾರಣ ಬೆಳೆಗಳಿಗೆ ನೀರಿನ ಸಮಸ್ಯೆಯಾಗಿ ಒಣಗಲು ಶುರುವಾಗುತ್ತವೆ. ಜಮೀನುಗಳಿಗೆ ನಿರಂತರ 7 ತಾಸು ವಿದ್ಯುತ್‌ ಕೊಡಬೇಕು ಎನ್ನುವ ನಿಯಮವಿದೆ. ಆದರೆ, ಅನುಷ್ಠಾನವಾಗುತ್ತಿಲ್ಲ. ಇದರಿಂದ ಬೆಳೆಗಳನ್ನು ಬೇಸಿಗೆಯಲ್ಲಿ ರಕ್ಷಿಸಿಕೊಳ್ಳುವುದೇ ಸವಾಲಾಗಿದೆ.

ಕೋತಿಗಳ ಕಾಟ: 'ಒಂದೆಡೆ ವಿದ್ಯುತ್‌ ಸಮಸ್ಯೆಯಾದರೆ, ಇನ್ನೊಂದೆಡೆ ತರಕಾರಿಗಳಿಗೆ ಕೋತಿಗಳ ಕಾಟ ವಿಪರೀತವಾಗಿದ್ದು, ತರಕಾರಿಗಳನ್ನು ರಕ್ಷಿಸಿಕೊಳ್ಳುವುದೇ ಸವಾಲಾಗಿದೆ. ಒಂದು ಬಾರಿಗೆ 10–15 ಗುಂಪು ಬಂದು ಎಲ್ಲ ಬೆಳೆಗಳನ್ನು ನಾಶ ಮಾಡುತ್ತವೆ. ಇದರಿಂದ ಜಮೀನಿನಲ್ಲಿ ಯಾವಾಗಲೂ ಒಬ್ಬರು ಇರಲೇಬೇಕಾದ ಅನಿವಾರ್ಯತೆ ಇದೆ’ ಎನ್ನುತ್ತಾರೆ ಅವರು.

***

ತರಕಾರಿ ಬೆಳೆಯುವ ರೈತರಿಗೆ ಆಗುವ ನಷ್ಟ ತಡೆಯಲು ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಮಾಡಬೇಕು. ಮಿಶ್ರಬೆಳೆಯಿಂದ ಹೆಚ್ಚಿನ ಲಾಭವಿದೆ
ಮಹಮ್ಮದ್ ಜಲಾಲ್‌ದ್ದೀನ್, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.