
ಯಾದಗಿರಿ: ಆ ಮನೆಯಲ್ಲಿ ಮೂವರಿಗೆ ಹಿಮೋಫಿಲಿಯಾ ಕಾಯಿಲೆ ಬಾಧಿಸುತ್ತಿದೆ. ಎದ್ದು ನಡೆದಾಡಲು ಸಮಸ್ಯೆ. ಮೊಣಕೈ, ಮೊಣಕಾಲು ಗಂಟು ಕಟ್ಟಿ ಗಡ್ಡೆ ಕಟ್ಟಿರುತ್ತದೆ. ಇದರ ಜೊತೆಗೆ ಸೋರುವ ಮನೆಯಲ್ಲಿ ವಾಸ.
ಹೌದು. ಇದು ಕಂಡು ಬಂದಿದ್ದು ಯಾದಗಿರಿ ಮತಕ್ಷೇತ್ರದ, ವಡಗೇರಾ ತಾಲ್ಲೂಕಿನ ಬಬಲಾದ ಗ್ರಾಮದಲ್ಲಿ. ಹಿಮೋಫಿಲಿಯಾ ಮೂವರನ್ನು ಹೈರಾಣು ಮಾಡಿದೆ. ಅದು ಒಂದೇ ಕುಟುಂಬದ ಮೂವರು ಪುರುಷರಲ್ಲಿ ಮಾತ್ರ ಇದೆ. ಇದರಿಂದ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಮಲ್ಲಪ್ಪ ಬನ್ನಮ್ಮ ಬಬಲಾದ ದಂಪತಿಗೆ ಐವರು ಮಕ್ಕಳು. ಮೂವರು ಗಂಡು, ಇಬ್ಬರು ಹೆಣ್ಣು ಮಕ್ಕಳು. ರವಿ ಬಡಕಣ್ಣೊರ್, ಸೈದಪ್ಪ, ಸುನಿಲ್ ಮೂವರು ಗಂಡು ಮಕ್ಕಳಿಗೂ ಹಿಮೋಫಿಲಿಯಾ ಬಾಧಿಸುತ್ತಿದೆ. ಆದರೆ, ಇಬ್ಬರು ಹೆಣ್ಣುಮಕ್ಕಳಲಲ್ಲಿ ಇಲ್ಲ ಅನ್ನೋದು ಸಮಾಧಾನದ ಸಂಗತಿ. ಅನಾರೋಗ್ಯ ಸಮಸ್ಯೆ ಮಧ್ಯೆಯೂ ಸೈದಪ್ಪ ಅವರು ಕುಳಿತುಕೊಂಡು ಕೆಲಸ ಮಾಡುವ ಸೆಕ್ಯೂರಿಟಿಯಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಸುನಿಲ್ ಬೆಂಗಳೂರಿನ ಸರ್ಕಾರಿ ವಸತಿ ನಿಲಯದಲ್ಲಿದ್ದು, ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ರವಿ ಮಾತ್ರ ಊರಲ್ಲಿದ್ದಾರೆ.
ರವಿ ತಂದೆ ನಿಧನ ಹೊಂದಿದ್ದು, ತಾಯಿ ಬನ್ನಮ್ಮ, ಪತ್ನಿ ಪೋಷಕರಾಗಿದ್ದಾರೆ. ಬಬಲಾದ ಗ್ರಾಮದ ಅಂಗನವಾಡಿ ಕೇಂದ್ರ ಸಮೀಪದ ಮಣ್ಣಿನ ಮನೆ ಹೊಂದಿರುವ, ಮಳೆ ಬಂದರೆ ಸೋರುವ ಮನೆಯಲ್ಲಿ 32 ವರ್ಷ ಹರೆಯದ ರವಿ ಬಡಕಣ್ಣೊರ್ ಈ ಕಾಯಿಲೆಯಿಂದ 45 ವರ್ಷದವರಂತೆ ಕಾಣುತ್ತಾರೆ.
ಹಿಂದುಳಿದ ವರ್ಗದ (ಪ್ರವರ್ಗ–1) ಕಬ್ಬಲಿಗ ಜಾತಿಗೆ ಸೇರಿದ ರವಿ ಕುಟುಂಬ ಕಣ್ಣಿರಲ್ಲಿ ಕೈತೊಳೆಯುತ್ತಿದೆ. ಬೆಂಗಳೂರಿನಲ್ಲಿ ಸಮಸ್ಯೆ ಇರುವವರಿಗೆ ಏನಾದರೂ ಚಿಕ್ಕ ಗಾಯವಾದರೂ ತುಂಬಾನೇ ರಕ್ತಸ್ರಾವವಾಗುತ್ತದೆ. ಒಣ ರೊಟ್ಟಿ ವಸುಡೆಗೆ ಸಿಕ್ಕರೂ ರಕ್ತ ಸೋರುವ ಅಪಾಯವಿದೆ. ಇದರಿಂದ ಒಣ ರೊಟ್ಟಿ ತಿನ್ನುವುದಿಲ್ಲ ಎಂದು ರವಿ ಹೇಳುತ್ತಾರೆ.
ಬಿಸಿಲಿನಲ್ಲಿ ನಡೆಯಲು ಆಗಲ್ಲ. ಮುಳ್ಳು ಚುಚ್ಚಿದರೂ ಸಮಸ್ಯೆ. ದೇಹದ ಯಾವುದೇ ಭಾಗದಲ್ಲಿ ರಕ್ತ ಸೋರುವುದು ಆರಂಭವಾದರೆ ಬೇಗನೇ ನಿಲ್ಲುವುದಿಲ್ಲ. ನೋವು ಬಂದರೆ ಹಾಸಿಗೆಯಲ್ಲಿ ಬೀಳಬೇಕು. ಚುಚ್ಚುಮದ್ದು ತೆಗೆದುಕೊಂಡರೆ ಮಾತ್ರ ನೋವು ನಿವಾರಣೆಯಾಗುತ್ತದೆ. ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಇಲ್ಲದಿದ್ದರೆ ತುಂಬಾ ಸಮಸ್ಯೆ ಅನುಭವಿಸಬೇಕಾಗುತ್ತದೆ.
ಈ ಕಾಯಿಲೆ ಇದ್ದವರು ವಯಸ್ಸಾದ ನಂತರ ನಡೆದಾಡಲು ಕಷ್ಟ ಪಡಬೇಕಿದೆ. ವಯಸ್ಸಾದಂತೆ ರಕ್ತಸ್ರಾವಗಳ ಸ್ನಾಯುಗಳು ಆಶಕ್ತವಾಗಬಹುದು. ಸ್ನಾಯುಗಳ ಮೇಲೆ ಮತ್ತು ಕೆಳಗೆ ಇರುವ ಕೀಲುಗಳು ಸರಿಯಾಗಿ ಚಲಿಸಲಾರವು. ಪದೇಪದೆ ರಕ್ತಸ್ರಾವಗೊಳ್ಳುವುದು, ಸ್ನಾಯು ರಕ್ತಸ್ರಾವಗಳ ಸಮಯದಲ್ಲಿ ನರಗಳು ಹಾನಿಗೊಳಗಾದರೆ ಸ್ನಾಯು ಅಶಕ್ತವಾಗಬಹುದು ಅಥವಾ ಲಕ್ವಾ ಹೊಡೆಯಬಹುದಾಗಿದೆ.
ರವಿಯವರಿಗೆ ವಿವಾಹವಾಗಿದ್ದು ಬಸವರಾಜ, ರಂಜಿತ್ ಇಬ್ಬರು ಪುತ್ರರು, ಒಬ್ಬ ಪುತ್ರಿ ಭವಾನಿ ಇದ್ದಾರೆ. ಮೂವರು ಮಕ್ಕಳಿಗೆ ಅನುವಂಶಿಕವಾಗಿ ‘ಹಿಮೋಫಿಲಿಯಾ’ ಬಂದಿಲ್ಲ ಎನ್ನುವುದು ಸಮಾಧಾನದ ಸಂಗತಿ. ಆದರೆ, ಇವರನ್ನು ಸಾಕಲು ದುಡಿಯಲು ಆಗುತ್ತಿಲ್ಲ ಎನ್ನುವ ನೋವಿದೆ. ಇದು ಅಪರೂಪದ ಕಾಯಿಲೆಯಾಗಿದ್ದು, ಜಿಲ್ಲೆಯಲ್ಲಿ ಕೆಲವೇ ಜನಕ್ಕೆ ಕಾಣಿಸಿಕೊಂಡಿದೆ.
‘ಈಚೆಗೆ ಸುರಿದ ಜಿಟಿ,ಜಿಟಿ ಮಳೆಗೆ ಮನೆ ಸೋರಿದೆ. ಅಲ್ಲದೇ ಗೋಡೆಗಳಿಗೆ ತೇವಾಂಶ ಇಳಿದು ಬೀಳುವ ಸ್ಥಿತಿಗೆ ತಲುಪಿದೆ. ಜೋರು ಮಳೆ ಬಂದರೆ ಮನೆ ಎಲ್ಲ ಕಡೆ ಸೋರುವುದರಿಂದ ಬೇರೆಯವರ ಮನೆಗೆ ಹೋಗಿ ಮಲಗುವ ಪರಿಸ್ಥಿತಿ ಇದೆ. ಆಶ್ರಯ ಮನೆಯಾದರೂ ಸಂಬಂಧಿಸಿದವರು ಮಂಜೂರು ಮಾಡಿಕೊಡಬೇಕು’ ಎಂದು ಕಣ್ಣಿರಾಗುತ್ತಾರೆ ಬನ್ನಮ್ಮ ಅವರು.
ರವಿ ಬಡಕಣ್ಣೊರ್ ಅವರ ಕುಟುಂಬಕ್ಕೆ ಸಹಾಯ ಮಾಡಲು ಇಚ್ಛಿಸುವವರು ಯಾದಗಿರಿಯ ಇಂಡಿಯನ್ ಬ್ಯಾಂಕ್ ಖಾತೆ ಸಂಖ್ಯೆ 6614305708, ಐಎಫ್‌ಎಸ್‌ಸಿ ಸಂಖ್ಯೆ IDBI000 Y007 ಅಥವಾ ಫೋನ್ ಪೆ ಸಂಖ್ಯೆ 90082 36606 ಸಂಖ್ಯೆಗೆ ಆರ್ಥಿಕ ಸಹಾಯ ಮಾಡಬಹುದು.
ರವಿ ಬಡಕಣ್ಣೋರ್ ಕುಟುಂಬಕ್ಕೆ ನಮ್ಮ ಕಡೆಯಿಂದ ಆಗುವ ಸಹಾಯ ಮಾಡುತ್ತೇನೆ. ಸೂಕ್ತ ಮಾಹಿತಿ ಪಡೆದು ಮನೆ ವಾಹನದ ವ್ಯವಸ್ಥೆಗೆ ಅಧಿಕಾರಿಗಳಿಗೆ ಸೂಚಿಸುತ್ತೇನೆಚನ್ನಾರೆಡ್ಡಿ ಪಾಟೀಲ ತುನ್ನೂರು ಯಾದಗಿರಿ ಮತಕ್ಷೇತ್ರದ ಶಾಸಕ
ತಾಯಿ ಪತ್ನಿ ಕೂಲಿಗೆ ಹೋದರೆ ಊಟ ಇಲ್ಲದಿದ್ದರೆ ಉಪವಾಸವೇ ಗತಿ. ಸೋರುವ ಮನೆಯಲ್ಲಿದ್ದು ನನ್ನ ಮೂವರು ಮಕ್ಕಳನ್ನು ಓದಿಸಲು ಆಗದ ಪರಿಸ್ಥಿತಿ ಇದೆ. ಹೆಮೋಫಿಲಿಯಾ ಬೆನ್ನಿಗೆ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇನೆ.ರವಿ ಬಡಕಣ್ಣೋರ್ ಹೆಮೋಫಿಲಿಯಾ ಪೀಡಿತ ವ್ಯಕ್ತಿ
ಮೂವರು ಹೆಮೋಫಿಲಿಯಾ ಪೀಡಿತ ಮಕ್ಕಳ ಜೊತೆ ಕುಟುಂಬ ನಿರ್ವಹಣೆಗೆ ಪರದಾಡಬೇಕಿದೆ. ಸರ್ಕಾರ ಜನಪ್ರತಿನಿಧಿಗಳು ಜೀವನ ಕಟ್ಟಿಕೊಳ್ಳಲು ನೆರವು ನೀಡಬೇಕುಬನ್ನಮ್ಮ ಮಲ್ಲಪ್ಪ ರವಿ ತಾಯಿ
ಹೆಮೋಫಿಲಿಯಾ ಹುಟ್ಟುತ್ತಲೆ ಬರುತ್ತದೆ. ಇದು ಗುಣಪಡಿಸಲಾಗದು. ಆದರೆ ಆರೋಗ್ಯ ಇಲಾಖೆಯಿಂದ ಹೆಮೋಫಿಲಿಯಾದಿಂದ ಬಳಲುವವರಿಗೆ ಸೂಕ್ತ ಔಷಧೋಪಚಾರ ನೀಡಲಾಗುವುದುಡಾ.ಲಕ್ಷ್ಮೀಕಾಂತ ಪ್ರಭಾರಿ ಡಿಎಚ್‌ಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.