ADVERTISEMENT

ಟಾರು, ಕೆಂಪು ಬಸ್ ಕಾಣದ ಕುರಿಹಾಳ ಗ್ರಾಮ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 5:19 IST
Last Updated 9 ಆಗಸ್ಟ್ 2024, 5:19 IST
ವಡಗೇರಾ ತಾಲ್ಲೂಕಿನ ಕುರಿಹಾಳ ಗ್ರಾಮದ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿರುವುದು
ವಡಗೇರಾ ತಾಲ್ಲೂಕಿನ ಕುರಿಹಾಳ ಗ್ರಾಮದ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟಿರುವುದು    

ವಡಗೇರಾ: ತಾಲ್ಲೂಕಿನ ಕುರಿಹಾಳ ಗ್ರಾಮಕ್ಕೆ ಕಳೆದ ನಾಲ್ಕೈದು ವರ್ಷಗಳಿಂದ ಬಸ್ ಬಾರದೆ ಇರುವದರಿಂದ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸುಮಾರು 1 ಕಿಮೀ ನಡೆದುಕೊಂಡು ಹೋಗಿ ಬಸ್ ಹಿಡಿಯುವ ಪರಿಸ್ಥಿತಿ ಇದೆ.

ಕೊಂಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕುರಿಹಾಳ ಗ್ರಾಮವು ಸುಮಾರು 800 ಜನಸಂಖ್ಯೆ ಹೊಂದಿದೆ. ಇಬ್ಬರು ಗ್ರಾಮ ಪಂಚಾಯಿತಿಯ ಸದಸ್ಯರು ಇದ್ದಾರೆ.

ಈ ಹಿಂದೆ ಜೆನ್ನೂರ (ಜೆ) ಗ್ರಾಮಕ್ಕೆ ಬರುವ ಬಸ್ಸು ಕುರಿಹಾಳ ಗ್ರಾಮವನ್ನು ವಾಯಾ ಮಾಡಿಕೊಂಡು ಹೋಗುತ್ತಿತ್ತು. ದಿನದಲ್ಲಿ ನಾಲ್ಕು ಬಾರಿ ಬಸ್ಸು ಗ್ರಾಮಕ್ಕೆ ಬರುತಿತ್ತು. ಇದರಿಂದ ಗ್ರಾಮಸ್ಥರಿಗೆ, ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿತ್ತು. ಆದರೆ ಕಳೆದ ಹಲವಾರು ವರ್ಷಗಳಿಂದ ಬಸ್ ಬಾರದೆ ಇರುವುದರಿಂದ ಎಲ್ಲರಿಗೂ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ADVERTISEMENT

ಟಾರ್ ಕಾಣದ ಗ್ರಾಮದ ರಸ್ತೆ : ಕುರಿಹಾಳ ಗ್ರಾಮದಿಂದ ಮುಖ್ಯ ರಸ್ತೆಯ ಗೇಟ್‌ವರೆಗೆ 1ಕಿಮೀ ಅಂತರವಿದೆ. ಈ ರಸ್ತೆಯು ಮಣ್ಣಿನಿಂದ ಕೂಡಿದ್ದು, ಮಳೆ ಬಂದರೆ ಈ ರಸ್ತೆಯಲ್ಲಿ ಸಂಚರಿಸುವುದೇ ಒಂದು ದೊಡ್ಡ ಸಾಧನೆ. ಏಕೆಂದರೆ ಜೇಡಿ ಮಣ್ಣಿನಿಂದ ಕೂಡಿರುವ ಈ ರಸ್ತೆಯ ಮೇಲೆ ನಡೆಯಬೇಕಾದರೆ ಕಾಲು ಜಾರಿ ಬೀಳುವದು ಗ್ಯಾರಂಟಿ.

ಕುರಿಹಾಳ ಗ್ರಾಮದಲ್ಲಿ 1 ರಿಂದ 4ನೇ ತರಗತಿಯವರೆಗೆ ಸರ್ಕಾರಿ ಶಾಲೆ ಇದೆ. 5ನೇಯ ತರಗತಿಯಿಂದ 10ನೆಯ ತರಗತಿಯವರೆಗೆ ಮಕ್ಕಳು ಕೊಂಕಲ ಗ್ರಾಮಕ್ಕೆ ಹೋಗಬೇಕು. ವಿದ್ಯಾರ್ಥಿಗಳು ಈ ರಸ್ತೆಯ ಮೂಲಕವೇ ನಡೆದು ಹೋಗಬೇಕು. ಮಳೆ ಬಂದಾಗ ಶಾಲಾ ಮಕ್ಕಳು ಕಾಲು ಜಾರಿ ಕೆಸರಿನಲ್ಲಿ ಬೀಳುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಶುದ್ಧ ಕುಡಿಯುವ ನೀರಿಲ್ಲ: ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಬೇಕಾದರೆ ಬೇರೆ ಗ್ರಾಮಕ್ಕೆ ಹೋಗಿ ತರಬೇಕು. ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ.

ಶೌಚಾಲಯಗಳಿಲ್ಲ: ಸರ್ಕಾರ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಅನುದಾನ ನೀಡುತ್ತಿದ್ದರೂ, ಗ್ರಾಮದ ಕೆಲವೇ ಮನೆಗಳಲ್ಲಿ ಶೌಚಾಲಯ ನಿರ್ಮಾಣವಾಗಿವೆ. ಅನುದಾನ ದುರ್ಬಳಕೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಸಮಸ್ಯೆಗಳ ಸರಮಾಲೆಯನ್ನೇ ಹೊತ್ತಿರುವ ಕುರಿಹಾಳ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಮಾಡುವುದರ ಜತೆಗೆ ಟಾರ್ ರಸ್ತೆ ನಿರ್ಮಿಸಬೇಕು ಎಂಬುದು ಗ್ರಾಮಸ್ಥ ಆಗ್ರಹವಾಗಿದೆ.

ಕುರಿಹಾಳ ಗ್ರಾಮದ ವಿದ್ಯಾರ್ಥಿಗಳು ಕೆಸರು ಗದ್ದೆಯಾದ ರಸ್ತೆಯ ಮೇಲೆ ನಡೆದುಕೊಂಡು ಶಾಲೆಗೆ ಹೋಗುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.