ADVERTISEMENT

‘ದೇಶದ ಆರ್ಥಿಕತೆಗೆ ಪ್ರವಾಸೋದ್ಯಮ ಸಹಕಾರಿ’

ವಿಶ್ವ ಪ್ರವಾಸೋದ್ಯಮ ದಿನಾಚರಣೆ; ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಭಿಮತ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 16:02 IST
Last Updated 27 ಸೆಪ್ಟೆಂಬರ್ 2022, 16:02 IST
ಯಾದಗಿರಿಯ ಕನ್ನಡ ಭವನದಲ್ಲಿ ಮಂಗಳವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಶಾಸಕ ವೆಂಕಟರೆಡ್ಡಿ ಮುದ್ನಾಳ ಚಾಲನೆ ನೀಡಿದರು
ಯಾದಗಿರಿಯ ಕನ್ನಡ ಭವನದಲ್ಲಿ ಮಂಗಳವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆದು ಶಾಸಕ ವೆಂಕಟರೆಡ್ಡಿ ಮುದ್ನಾಳ ಚಾಲನೆ ನೀಡಿದರು   

ಯಾದಗಿರಿ: ‘ದೇಶದ ಆರ್ಥಿಕತೆ ಸದೃಢಗೊಳಿಸುವಲ್ಲಿ ಪ್ರವಾಸೋದ್ಯಮ ಸಹಕಾರಿಯಾಗಿದೆ. ಅತಿಥಿ ದೇವೋಭವ ಎಂಬುದು ನಮ್ಮ ಸಂಸ್ಕೃತಿ. ಅದರಿಂದಾಗಿ ನಮ್ಮ ದೇಶದ ಪ್ರವಾಸೋದ್ಯಮ ಕ್ಷೇತ್ರ ಅತ್ಯಂತ ಲಾಭದಾಯಕ ಉದ್ಯಮವಾಗಿ ಬದಲಾಗಿದೆ ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ನಗರದಲ್ಲಿ ಕನ್ನಡ ಭವನದಲ್ಲಿ ಮಂಗಳವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು.

ದೇಶದಲ್ಲಿ ಸಹಸ್ರ ಸಂಖ್ಯೆಯಲ್ಲಿ ದೇವಸ್ಥಾನಗಳಿವೆ. ಒಬ್ಬೊಬ್ಬರಿಗೂ ಒಂದೊಂದು ದೇವಸ್ಥಾನಗಳೆಂದರೆ ಬಲು ಅಚ್ಚು ಮೆಚ್ಚು. ಉತ್ತರ ಭಾರತದ ಮತ್ತು ದಕ್ಷಿಣದಲ್ಲಿ ಅತ್ಯಂತ ಪ್ರಸಿದ್ಧ ದೇವಸ್ಥಾನಗಳು ಪ್ರೇಕ್ಷಣೀಯ ಸ್ಥಳಗಳಾಗಿವೆ ಎಂದರು.

ADVERTISEMENT

ನಮ್ಮ ಜಿಲ್ಲೆಯಲ್ಲಿ ಬಹಳಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಆದರೆ, ನಮ್ಮಲ್ಲಿ ಪ್ರಚಾರದ ಕೊರತೆಯಿದೆ. ಜಿಲ್ಲಾ ಕೇಂದ್ರದಲ್ಲಿನ ಕೋಟೆ ಸಂರಕ್ಷಣೆ ಹಾಗೂ ಸೌಂದರ್ಯೀಕರಣಕ್ಕೆ ₹ 2 ಕೋಟಿ ಮತ್ತು ನಗರದ ದೊಡ್ಡಕೆರೆಯ ಅಭಿವೃದ್ಧಿಗೆ ₹ 2.75 ಕೋಟಿ ಅನುದಾನ ನೀಡಿದ್ದೇನೆ ಎಂದರು.

ಇತಿಹಾಸ ತಜ್ಞ ಹಾಗೂ ವಕೀಲ ಭಾಸ್ಕರರಾವ ಮುಡಬೂಳ ವಿಶೇಷ ಉಪನ್ಯಾಸ ನೀಡಿ, ಬ್ರಿಟನ್ ರಾಣಿ 2ನೇ ಎಲಿಜಬೆತ್ ಧರಿಸುತ್ತಿದ್ದ ಜಗತ್ಪ್ರಸಿದ್ಧ ಕೊಹಿನೂರ್ ವಜ್ರದ ಮಣಿ ಬ್ರಿಟಿಷ್ ರಾಜಮನೆತನದ ಮುಕುಟಪ್ರಾಯವಾಗಿ ಕಂಗೊಳಿಸುತ್ತಿದೆ. ಆದರೆ, ಈ ವಜ್ರದ ಮಣಿ ಸಿಕ್ಕಿರುವ ಸ್ಥಳ ನಮ್ಮ ಯಾದಗಿರಿ ಜಿಲ್ಲೆಯದ್ದಾಗಿದೆ ಎಂದರು.

ಜಿಲ್ಲೆಯ ‘ಸುರಪುರ ಶೂರರ ಬೀಡು’. ಅಪ್ರತಿಮ ಹೋರಾಟದ ಅಮೃತಭೂಮಿ. ದೇಶದ 1857ರಲ್ಲಿ ಮೊಟ್ಟ ಮೊದಲ ಸ್ವಾತಂತ್ರ‍್ಯ ಸಂಗ್ರಾಮ ಇಲ್ಲಿಂದಲೇ ಪ್ರಾರಂಭವಾಯಿತು. ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಹೋರಾಟ ನೇತೃತ್ವ ವಹಿಸಿರುವುದು ಸ್ಮರಣೀಯ. ಇತಿಹಾಸದ ಪುಟಗಳಲ್ಲಿ ಸುರಪುರಕ್ಕೆ ಎಂದೆಂದಿಗೂ ಶಾಶ್ವತವಾದ ಸ್ಥಾನವಿದೆ. ಹಿಂದೂಸ್ತಾನದ ಇತಿಹಾಸದಲ್ಲಿ ಮಹತ್ತರವಾದ ಸ್ಥಾನಮಾನ ಹೊಂದಿದೆ ಎಂದರು.

ಯಾದಗಿರಿ ನಗರದಲ್ಲಿನ ಕೋಟೆ, ಗುರುಮಠಕಲ್ ಸಮೀಪದ ದಬಧಬಿ ಜಲಪಾತ, ಹತ್ತಿಕುಣಿ ಜಲಾಶಯ, ಚಿಂತನಹಳ್ಳಿ ಗವಿಸಿದ್ದಲಿಂಗೇಶ್ವರ, ಬೋನಾಳ ಪಕ್ಷಿಧಾಮ, ರಾಜನಕೋಳೂರು ಬುಡ್ಡರ ಮನೆಗಳು, ಬಸವಸಾಗರ ಜಲಾಶಯ, ಸುರಪುರದ ವೇಣುಗೋಪಾಲಸ್ವಾಮಿ ದೇವಸ್ಥಾನ, ತಿಂಥಣಿ ಮೌನೇಶ್ವರ ದೇವಸ್ಥಾನ, ಶಹಾಪುರ ಬುದ್ದ ಮಲಗಿದ ಬೆಟ್ಟ, ಮೈಲಾಪುರ ಮೈಲಾರಲಿಂಗೇಶ್ವರ ದೇವಸ್ಥಾನ ಇನ್ನೂ ಜಿಲ್ಲೆಯ ಹಲವು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಮಾಡಲು ಒತ್ತು ನೀಡಬೇಕಾಗಿದೆ ಎಂದರು.

ಚಂದ್ರಶೇಖರ ಗೋಗಿ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿದರು. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ನಿರೂಪಿಸಿದರು. ರಿಯಾಜ್ ಪಟೇಲ್ ವರ್ಕನಳ್ಳಿ ಪ್ರಾರ್ಥಿಸಿದರು.

ಕರ್ನಾಟಕ ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ನಿಗಮ ಅಧ್ಯಕ್ಷ ದೇವೇಂದ್ರನಾಥ ಕೆ.ನಾದ್, ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರುದ್ರಗೌಡ ಪಾಟೀಲ, ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ ಇದ್ದರು.

*****

ಬೈಸಿಕಲ್ ಜಾಥಾಗೆ ಜಿಲ್ಲಾಧಿಕಾರಿ ಚಾಲನೆ

ಯಾದಗಿರಿ: ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ತಾಲ್ಲೂಕಿನ ಹತ್ತಿಕುಣಿ ಜಲಾಶಯದಿಂದ ಯಾದಗಿರಿಯ ಕನ್ನಡ ಭವನದ ವರೆಗೆ ಬೈಸಿಕಲ್ ಜಾಥಾಕ್ಕೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಚಾಲನೆ ನೀಡಿ ಜಾಥಾದಲ್ಲಿ ಭಾಗವಹಿಸಿದರು

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಭುದೊರೆ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸವ ಎಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪ್ರಭಾಕರ್ ಕವಿತಾಳ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಾಘವೇಂದ್ರ, ಕ್ರೀಡಾ ಇಲಾಖೆ ಅಧಿಕಾರಿ ರಾಜು ಬಾವಿಹಳ್ಳಿ, ತೋಟಗಾರಿಕೆ ಅಧಿಕಾರಿ ಸಂತೋಷ ಶೇಷಲು, ಅಲ್ಪಸಂಖ್ಯಾತರ ಅಧಿಕಾರಿ ರಾಜು, ನಗರಸಭೆ ಪೌರಾಯುಕ್ತ ಶರಣಪ್ಪ, ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಯುವಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.