
ವಡಗೇರಾ ಭೀಮಾ ನದಿಯ ಹೊಸ ಬ್ರೀಡ್ಜ್ ಮೇಲೆ ಶುಕ್ರವಾರ ಬೆಳಿಗ್ಗೆ ಲಾರಿಯೊಂದು ಪಂಚರ್ ಆದ ಕಾರಣ ವಾಹನಗಳು ಸಾಲುಗಟ್ಟಿ ನಿಂತಿರುವುದು
ವಡಗೇರಾ: ತಾಲ್ಲೂಕಿನ ಗುರುಸುಣಿಗಿ ಕ್ರಾಸ್ ಭೀಮಾ ಬ್ರೀಡ್ಜ್ ಕಂ ಬ್ಯಾರೇಜ್ ಮುಖಾಂತರ ಯಾದಗಿರಿ, ಶಹಾಪುರ, ಸುರಪುರ ಕಡೆಗೆ ಹೋಗುವ ಮುಖ್ಯರಸ್ತೆ ಪ್ರತಿದಿನ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಇದರಿಂದ ಪ್ರಯಾಣಿಕರು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಶುಕ್ರವಾರ ಬೆಳಿಗ್ಗೆ ಭೀಮಾ ನದಿಯ ಹೊಸ ಬ್ರೀಡ್ಜ್ ಮೇಲೆ ಲಾರಿಯೊಂದು ಪಂಚರ್ ಆದ ಕಾರಣ ಸುಮಾರು ಎರಡು ಗಂಟೆಗಳ ಕಾಲ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಕೊನೆಗೆ ಪೊಲೀಸರು ಬಂದು ವಾಹನಗಳನ್ನು ವ್ಯವಸ್ಥಿತವಾಗಿ ಸರಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು
ವಡಗೇರಾ ಕ್ರಾಸ್‌ದಿಂದ ಯಾದಗಿರಿ ಹಳೆ ಬಸ್ ನಿಲ್ದಾಣವರೆಗೆ ರಾಜ್ಯ ಹೆದ್ದಾರಿಯ ಕಾಮಗಾರಿ ನಡೆದಿರುವುದರಿಂದ ಗುರುಸುಣಿಗಿ ಕ್ರಾಸ್-ವಡಗೇರಾ ಕ್ರಾಸ್-ಯಾದಗಿರಿ ಕಡೆ ಹೋಗುವ ಹೆದ್ದಾರಿಯಲ್ಲಿ ವಾಹನಗಳ ಓಡಾಟ ಸಂಪೂರ್ಣ ಬಂದ್ ಮಾಡಲಾಗಿದೆ.
ಪರ್ಯಾಯವಾಗಿ ಗುರುಸುಣಿಗಿ ಕ್ರಾಸ್‌ದಿಂದ ಭೀಮಾ ನದಿಯ ಬ್ರೀಡ್ಜ್ ಕಂ ಬ್ಯಾರೇಜ್ ಬೈಪಾಸ್ ಮೂಲಕ ಯಾದಗಿರಿ-ಕಲಬುರಗಿ ಹೆದ್ದಾರಿಗೆ ತಲುಪುತ್ತದೆ. ಇದರಿಂದ ಬೈಪಾಸ್ ಮೂಲಕ ಹೋಗುವ ಮುಖ್ಯ ರಸ್ತೆ ಕಿರಿದಾಗಿರುವದರಿಂದ ಪ್ರತಿದಿನ ವಾಹನಗಳ ದಟ್ಟಣೆ ಹೆಚ್ಚಾಗಿದೆ.
ಈ ಭೀಮಾ ನದಿಯ ಹಳೆಯ ಸೇತುವೆಯ ಮೇಲೆ ವಾಹನ ಸಂಚಾರವು ಡಿ.31 ರವರೆಗೆ ನಿಷೇಧಿಸಲಾಗಿದೆ ಇದರಿಂದಾಗಿ ಭೀಮಾ ನದಿಯ ಹೊಸ ಬ್ರೀಡ್ಜ್ ಕಂ ಬ್ಯಾರೇಜ್ ಮುಖಾಂತರ ಇನ್ನೂ 2 ತಿಂಗಳವರೆಗೆ ವಾಹನಗಳ ಸಂಚಾರ ಇರಲಿದೆ.
ಬೈಪಾಸ್ ಕೂಡು ರಸ್ತೆಯಿಂದ ಯಾದಗಿರಿ ನಗರದ ನೇತಾಜಿ ಸುಭಾಸಚಂದ್ರ ಬೋಸ್ ವೃತ್ತದವರೆಗೆ ಹೆದ್ದಾರಿಯಲ್ಲಿ ದಿನಾಲೂ ಟ್ರಾಫಿಕ್ ಸಮಸ್ಯೆ ತೀರಾ ಹೆಚ್ಚಾಗಿದೆ. ಅತ್ತ ವಡಗೇರಾ ತಾಲ್ಲೂಕು, ಇತ್ತ ಶಹಾಪುರ, ಸುರಪುರ ತಾಲ್ಲೂಕುಗಳಿಂದ ಜಿಲ್ಲಾ ಕೇಂದ್ರಕ್ಕೆ ಹೋಗುವ ವಾಹನಗಳ ದಟ್ಟಣೆ ಹೆಚ್ಚಿಗೆ ಇದೆ.
ಭೀಮಾ ನದಿಯ ಹೊಸ ಬ್ರೀಜ್ ಕಂ ಬ್ಯಾರೇಜ್ ಹತ್ತಿರ ಸಂಚಾರಿ ಪೊಲೀಸರನ್ನು ನೇಮಕ ಮಾಡಿದಾಗ ವಾಹಗಳ ದಟ್ಟನೆಯನ್ನು ತಪ್ಪಿಸಲು ಅನುಕೂಲವಾಗುವದರ ಜತೆಗೆ ಸುಗಮ ಸಂಚಾರಕ್ಕೆ ಸಹಕಾರಿಯಾಗುತ್ತದೆ ಎಂಬುವದು ಪ್ರಯಾಣಿಕರ, ವಾಹನ ಸವಾರರ ಹಾಗೂ ಸಾರ್ವಜನಿಕರ ಒತ್ತಾಸೆಯಾಗಿದೆ.
ಭೀಮಾ ನದಿಯ ಹಳೆಯ ಸೇತುವೆಯ ಮೇಲೆ ದ್ವೀಚಕ್ರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಭೀಮಾ ನದಿಯ ಹೊಸ ಬ್ರೀಜ್ ಕಂ ಬ್ಯಾರೇಜ್ ಮೇಲೆ ಸ್ವಲ್ಪ ಮಟ್ಟಿಗೆ ವಾಹನಗಳ ದಟ್ಟನೆ ಕಡಿಮೆಯಾಗುತ್ತದೆಸುರೇಶ ಹವಾಲ್ದಾರ್, ವಾಹನ ಸವಾರ
ಭೀಮಾ ನದಿಯ ಹೊಸ್ ಬ್ರೀಡ್ಜ್ ಕಂ ಬ್ಯಾರೇಜ್ ಮೇಲೆ ವಾಹನಗಳ ಸಂಚಾರ ಸಾಕಷ್ಟು ಇರುವುದರಿಂದ ತುರ್ತು ಸಮಯದಲ್ಲಿ ರೋಗಿಗಳನ್ನು ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತೊಂದರೆಯಾಗುತ್ತಿದೆಮಹ್ಮದ್ ಖುರೇಸಿ, ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.