ADVERTISEMENT

ಎರಡನೇ ದಿನವೂ ಸಾರಿಗೆ ನೌಕರರ ಮುಷ್ಕರ, ಪರದಾಟ

ಸುರಪುರದಿಂದ ಶಹಾಪುರಕ್ಕೆ ಒಂದು ಬಸ್‌ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 2:35 IST
Last Updated 9 ಏಪ್ರಿಲ್ 2021, 2:35 IST
ಯಾದಗಿರಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮಕ್ಕಳ ಸ್ಕೇಟಿಂಗ್‌
ಯಾದಗಿರಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಮಕ್ಕಳ ಸ್ಕೇಟಿಂಗ್‌   

ಯಾದಗಿರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಯಾಣಿಕರ ಪರದಾಟ ಗುರುವಾರವೂ ಮುಂದುವರಿಯಿತು.

ಗುರುವಾರವೂ ಚಾಲಕ, ನಿರ್ವಾಹಕರು ಬಸ್‌ ಡಿಪೋಗಳತ್ತ ಸುಳಿಯಲಿಲ್ಲ. ಇದರಿಂದ ಬಸ್‌ ಸಂಚಾರ ಆರಂಭವಾಗಲಿಲ್ಲ. ಆದರೆ, ಸುರಪುರ ಬಸ್‌ ನಿಲ್ದಾಣದಿಂದ ಶಹಾಪುರಕ್ಕೆ ಒಂದು ಬಸ್‌ ಮಾತ್ರ ಗುರುವಾರ ಕಾರ್ಯಾಚರಣೆ ಮಾಡಿದೆ. ಅದು ಬಿಟ್ಟರೆ ಮುಷ್ಕರದ ಬಿಸಿ ಪ್ರಯಾಣಿಕರಿಗೆ ತಟ್ಟಿದೆ.

ಖಾಸಗಿ ವಾಹನಗಳ ಮೊರೆಹೋದ ಜನ: ಎರಡನೇ ದಿನ ಬಸ್‌ಗಳುಆರಂಭವಾಗುತ್ತವೆಎನ್ನುವ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಶೆಯಾಯಿತು. ಇದರಿಂದ ಅಕ್ಕಪಕ್ಕದ ಜಿಲ್ಲೆಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಸ್ವಂತ, ಬಾಡಿಗೆ ವಾಹನಗಳ ಮೊರೆ ಹೋದರು.

ADVERTISEMENT

ಮುಂದುವರಿದ ದುಪ್ಪಟ್ಟು ಬೆಲೆ: ಬಸ್‌ ಬಂದ್‌ ಆಗಿದ್ದರಿಂದ ಆಟೊ, ಟಂಟಂ, ಕ್ರೂಸರ್‌, ಮ್ಯಾಕ್ಸಿಕ್ಯಾಬ್‌ ವಾಹನಗಳಲ್ಲಿ ಜನ ಪ್ರಯಾಣ ಮಾಡಿದರು. ಬಸ್‌ ಮುಷ್ಕರದಿಂದ ದುಪ್ಪಟ್ಟು ಬೆಲೆ ವಿಧಿಸುವುದು ಗುರುವಾರವೂ ಮುಂದುವರಿದಿತ್ತು. ಸಾರಿಗೆ ಇಲಾಖೆಯ ಅಧಿಕಾರಿಗಳ ಎಚ್ಚರಿಕೆ ನಡುವೆಯೂ ಚಾಲಕರು ಅಧಿಕ ಬೆಲೆ ವಿಧಿಸಿ ಪ್ರಯಾಣಕರಿಂದ ಸುಲಿಗೆ ಮಾಡಿದರು.

ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ

ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದುಗೆ ನೇತೃತ್ವದಲ್ಲಿ ಗುರುವಾರ ನಗರದ ಸುಭಾಷ್ ವೃತ್ತದಲ್ಲಿ ಟೈಯರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಆರನೇ ವೇತನ ಆಯೋಗ ಜಾರಿಗೆ ಸೇರಿದಂತೆ ಇನ್ನಿತರ ಎಂಟು ಬೇಡಿಕೆಗಳನ್ನು ಪೂರೈಸಲು ಸಾರಿಗೆ ಸಚಿವರಿಗೆ ಹಾಗೂ ಮುಖ್ಯಮಂತ್ರಿಗೆ ಒತ್ತಾಯಿಸಿದರು. ‌‌ನಂತರ ಜಿಲ್ಲಾಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಿದರು.

ಕರವೇ ಜಿಲ್ಲಾ ಅಧ್ಯಕ್ಷ ಸಿದ್ದು ರಡ್ಡಿ, ಸಂಚಾಲಕ ಶರಣು ಇಟಗಿ, ಸಗರನಾಡು ವಲಯ ಗೌರವ ಅಧ್ಯಕ್ಷ ಸಿದಲಿಂಗ ರಡ್ಡಿ ಮುನಗಲ್, ಸಂಚಾಲಕ ವಿಜಯಕುಮಾರ್ ದಾಸನಕೇರಿ, ಯುವ ಘಟಕದ ಅಧ್ಯಕ್ಷ ಅಜೇಯ ಮಾಸನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಯರಗೋಳ, ಕಾರ್ಯದರ್ಶಿ ರವಿ ದೇವರಮನಿ, ಶರಣು ಪಾಟೀಲ, ಕಾಶಿಂ ಪಟೇಲ್, ಗೌಡಪ್ಪಕೋರಿ ಇದ್ದರು.

***

ಕಣ್ಣೀರಿಟ್ಟ ನಿರ್ವಾಹಕ ಶಿವಪ್ಪ

ಏಪ್ರಿಲ್‌ 6ರಂದು ಯಾದಗಿರಿ – ಬೆಂಗಳೂರು ಮಾರ್ಗದಲ್ಲಿ ಕರ್ತವ್ಯಕ್ಕೆ ತೆರಳಿದ್ದ ಶಿವಪ್ಪ ಗುರುವಾರ ಯಾದಗಿರಿ ಬಸ್‌ಗೆ ಡಿಪೋಗೆ ಆಗಮಿಸಿದರು. ಆಗ ಮೇಲಧಿಕಾರಿಗಳು ಬಸ್‌ ಚಾಲಕ, ನಿರ್ವಾಹಕರ ಮನವೊಲಿಸಲು ಮುಂದಾದರು. ಈ ವೇಳೆ ನಿರ್ವಾಹಕ ಶಿವಪ್ಪ ಅಧಿಕಾರಿಗಳ ಮುಂದೆಯೇ ಕಣ್ಣೀರು ಹಾಕಿದರು.

‘ಏ. 7ರಂದು ಸಂಜೆ ಬೆಂಗಳೂರಿನಿಂದ ಬಂದಿದ್ದೇನೆ. ಈಗ ಅಧಿಕಾರಿಗಳು ಮತ್ತೆ ಕರ್ತವ್ಯಕ್ಕೆ ಹಾಜರಾಗಿ ಎಂದು ಹೇಳುತ್ತಿದ್ದಾರೆ. ನೌಕರರು ಮುಷ್ಕರ ಮಾಡುತ್ತಿದ್ದಾರೆ. ನಾನೊಬ್ಬನೇ ಹೇಗೆ ಕರ್ತವ್ಯಕ್ಕೆ ಹಾಜರಾಗಲಿ. ಸರ್ಕಾರ ನಮ್ಮ ಗೋಳು ಯಾಕೆ ಕೇಳಿಸಿಕೊಳ್ಳುತ್ತಿಲ್ಲ. 20 ವರ್ಷ ಸೇವೆ ಸಲ್ಲಿಸಿದ್ದೇನೆ. ಆದರೆ, ನನಗೆ ₹16 ಸಾವಿರ ಸಂಬಳ ಇದೆ. ಇದರಲ್ಲಿ ಹೇಗೆ ಕುಟುಂಬ ನಿರ್ವಹಣೆ ಮಾಡಬೇಕು’ ಎಂದು ನಿರ್ವಾಹಕ ಶಿವಪ್ಪ ಬಸ್ ಡಿಪೋದಲ್ಲೇ ಕಣ್ಣೀರು ಹಾಕಿದರು.

***

ಪ್ರತಿ ದಿನ ಯಾದಗಿರಿ ವಿಭಾಗಕ್ಕೆ ₹34 ಲಕ್ಷ ಆದಾಯನಷ್ಟವಾಗುತ್ತಿದೆ. ನೌಕರರನ್ನು ಮನವೊಲಿಸಲು ಸಭೆ ನಡೆಸಲಾಗಿದೆ. ಯಾರನ್ನು ಅಮಾನತು ಮಾಡಿಲ್ಲ
ರಮೇಶ ಪಾಟೀಲ, ಎನ್‌ಇಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಾಲನಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.