ಯಾದಗಿರಿ: ‘ಅಲೆಮಾರಿ, ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿ, ಎಲ್ಲರೂ ಸಮನ್ವಯತೆಯಿಂದ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಯೋಜಿಸಿದ್ದ ‘ಧರ್ತಿ ಅಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ’ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅಲೆಮಾರಿ, ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಒಳ್ಳೆಯ ಯೋಜನೆಗಳು ಬರುತ್ತಿವೆ. ತಳ ಮಟ್ಟದಲ್ಲಿನ ಬುಡಕಟ್ಟು ಜನಾಂಗದ ಬದುಕಿನಲ್ಲಿ ಬದಲಾವಣೆ ಮಾಡುವ ಯೋಜನೆಗಳಾಗಿವೆ. ಅವುಗಳನ್ನು ಒಂದು ಮಿಷನ್ ರೂಪದಲ್ಲಿ ತೆಗೆದುಕೊಂಡು ಅನುಷ್ಠಾನಕ್ಕೆ ತರಬೇಕು’ ಎಂದರು.
‘ಸ್ವಾತಂತ್ರ್ಯದ ಬಳಿಕ ಮೀಸಲಾತಿ ಮೂಲಕ ಬುಡಕಟ್ಟು ಜನಾಂಗದಲ್ಲಿ ದೊಡ್ಡ ಬದಲಾವಣೆ ತರಲಾಗಿದೆ. ಭೂ ವ್ಯಾಜ್ಯ, ಅರಣ್ಯ ಕಾಯ್ದೆಗಳು ಬಂದ ಬಳಿಕ ಸರ್ಕಾರ ಮತ್ತು ಜನರ ನಡುವೆ ಬಹಳಷ್ಟು ವ್ಯಾಜ್ಯಗಳನ್ನು ನೋಡಿದ್ದೇವೆ. ಆಡಳಿತದಲ್ಲಿ ಇರುವವರ ನಡುವಿನ ಸಹಭಾಗಿತ್ವದ ಕೊರತೆಯಿಂದಾಗಿ ಬುಡಕಟ್ಟು ಸಮುದಾಯದ ಬೇಡಿಕೆಗಳು ಸರ್ಕಾರಕ್ಕೆ ಮುಟ್ಟುತ್ತಿಲ್ಲ ಎಂಬ ಭಾವನೆಯೂ ಇದೆ. ಇದನ್ನು ದೂರ ಮಾಡುವುದು ಪ್ರತಿಯೊಂದು ಇಲಾಖೆಯ ಜವಾಬ್ದಾರಿ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರಡಿಯಾ ಮಾತನಾಡಿ, ‘ಬುಡಕಟ್ಟು ಜನಾಂಗದ ಅಭಿವೃದ್ಧಿಯಲ್ಲಿ ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ತಮ್ಮ ಪಾತ್ರ ಏನಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ, ಕೃಷಿ ಸೇರಿದಂತೆ ಪ್ರತಿಯೊಂದು ಇಲಾಖೆಯು ಬುಡಕಟ್ಟು ಜನಾಂಗದ ಅಭಿವೃದ್ಧಿಯಲ್ಲಿ ಸಹಕರಿಸಿದರೆ ನಮ್ಮ ಗುರಿಯನ್ನು ಮುಟ್ಟಲು ಸಾಧ್ಯ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಸಿದ್ದಣ್ಣ ಅಣಬಿ ಮಾತನಾಡಿ, ‘ಎಲ್ಲಾ ಇಲಾಖೆಗಳನ್ನು ಒಗ್ಗೂಡಿಸುವ ಮೂಲಕ ಬುಡಕಟ್ಟು ಸಮುದಾಯದ ಸಮಸ್ಯೆಗಳಿಗೆ ಪರಿಹಾರಸಿಗಲಿ ಎಂಬ ಆಸೆಯ ಇರಿಸಿಕೊಳ್ಳಲಾಗಿದೆ. ತರಬೇತಿ ಪಡೆದವರು ಬ್ಲಾಕ್, ತಾಲ್ಲೂಕು ಮಟ್ಟದಲ್ಲಿನ ಬುಡಕಟ್ಟು ಜನಾಂಗಕ್ಕೆ ಒಳ್ಳೆಯದು ಆಗುವ ರೀತಿಯಲ್ಲಿ ಕೆಲಸ ಮಾಡಬೇಕು’ ಎಂದರು.
‘2011ರ ಜನಗಣತಿಯನ್ನು ಆಧಾರವಾಗಿ ಇಟ್ಟುಕೊಂಡು ಧರ್ತಿ ಅಭಾ ಜನ ಜಾತೀಯ ಗ್ರಾಮ ಉತ್ಕರ್ಷ ಯೋಜನೆಯಡಿ 64 ಹಳ್ಳಿಗಳನ್ನು ಆಯ್ಕೆ ಮಾಡಲಾಗಿದೆ. ಗ್ರಾಮಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಿ ಕೇಂದ್ರ ಬುಡಕಟ್ಟು ನಿರ್ದೇಶನಾಲಯಕ್ಕೆ ವರದಿಯನ್ನು ಕಳುಹಿಸಲಾಗಿದೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ರತೀಂದ್ರನಾಥ ಸೂಗೂರು, ಡಿಎಚ್‌ಒ ಡಾ.ಮಹೇಶ ಬಿರಾದಾರ, ಡಿಡಿಪಿಐ ಚನ್ನಬಸವ ಮುಧೋಳ, ಸಂಪನ್ಮೂಲ ವ್ಯಕ್ತಿ ಕೇಶವ ಮರಾಠೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತರಬೇತಿಯಲ್ಲಿ ಕಲಿತಿರುವುದನ್ನು ತಳಮಟ್ಟದಲ್ಲಿ ಜಾರಿಗೆ ಮಾಡಿದರೆ ಯೋಜನೆಯ ಉದ್ದೇಶ ಈಡೇರುತ್ತದೆ ಸದ್ಬಳಕೆಯೂ ಆಗುತ್ತದೆಹರ್ಷಲ್ ಭೋಯರ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.