ADVERTISEMENT

ಮತಗಳ್ಳತನದಿಂದಲೇ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದು: ಮಾಜಿ ಸಂಸದ ಡಾ.ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 6:36 IST
Last Updated 9 ಡಿಸೆಂಬರ್ 2025, 6:36 IST
ಡಾ.ಉಮೇಶ ಜಾದವ
ಡಾ.ಉಮೇಶ ಜಾದವ   

ಗುರುಮಠಕಲ್‌: ‘ಈ ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು, ಅವುಗಳಿಂದ ಪಾಠ ಕಲಿತು, ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯೊಡನೆ ಮುನ್ನಡೆಯುವೆವು’ ಎಂದು ಮಾಜಿ ಸಂಸದ ಡಾ.ಉಮೇಶ ಜಾದವ ಹೇಳಿದರು.

ಭಾನುವಾರ ಪಟ್ಟಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಕಬ್ಬು ಬೆಳೆಗಾರರು ಮತ್ತು ರೈತರ ಜತೆಗೆ ನಮ್ಮ ಪಕ್ಷ ನಿಲ್ಲಲಿದೆ. ಬಿಜೆಪಿ-ಜೆಡಿಎಸ್‌ ಒಗ್ಗೂಡಿ ರೈತರ ಪರ ಧ್ವನಿಯಾಗಲಿದ್ದೇವೆ’  ಎಂದರು.

‘ನನ್ನ ಅವಧಿಯಲ್ಲಿ ಗುರುಮಠಕಲ್‌ ಜನತೆಯ ಗುಳೆ ತಪ್ಪಿಸಿ, ಇಲ್ಲೇ ಜೀವನೋಪಾಯಕ್ಕೆ ಅನುಕೂಲ ಮಾಡಲು ಕಲಬುರಗಿಗೆ ಟೆಕ್ಸ್‌ಟೈಲ್‌ ಪಾರ್ಕ್‌ ಮಂಜೂರು ಮಾಡಲಾಗಿತ್ತು. ರಾಜ್ಯ ಸರ್ಕಾರದ ನಿಧಾನ ಧೋರಣೆಯಿಂದ ಅದು ನೆನೆಗುದಿಗೆ ಬಿದ್ದಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ಇಲ್ಲಿನ ಶಾಸಕ ಶರಣಗೌಡ ಕಂದಕೂರ ಅವರು ಕಡೇಚೂರು ಕೈಗಾರಿಕಾ ಕ್ಷೇತ್ರದ ಮಾಲಿನ್ಯ ಮತ್ತು ಜನರಿಗಾಗುತ್ತಿರುವ ತೊಂದರೆ ಕುರಿತು ಧ್ವನಿಯೆತ್ತಿದ್ದಾರೆ. ಬಿಜೆಪಿ ಅವರಿಗೆ ಬೆಂಬಲವಾಗಿ ನಿಲ್ಲಲಿದೆ. ಶಾಸಕರು ಕ್ರಿಯಾಶೀಲರಾಗಿದ್ದಾರೆ’ ಎಂದರು.

‘ಶಾಸಕ ಕಂದಕೂರ ಅವರ ವಿರೋಧ ಪಕ್ಷವೂ ಅಸಮರ್ಥವಾಗಿದೆ ಎನ್ನುವ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯ. ಆದರೆ, ಸರ್ಕಾರದಲ್ಲಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ 'ಸಿಎಂ ಚೇರ್' ಗುದ್ದಾಟದಲ್ಲಿ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವುದು ಸತ್ಯ’ ಎಂದು ಹೇಳಿದರು.

‘ಪಕ್ಷ ಸಂಘಟನೆಗೆ ಕೆಳ ಹಂತದಿಂದಲೂ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳ ಲಾಭವನ್ನು ಫಲಾನುಭವಿಗಳು ಪಡೆಯುವಲ್ಲಿ ಸಮಸ್ಯೆಯಾಗುತ್ತಿದ್ದರೆ ನನಗೆ ಸಂಪರ್ಕಿಸಲಿ. ನಾನು ವೈಯಕ್ತಿಕ ಮುತುವರ್ಜಿವಹಿಸುವೆ. ನಮ್ಮ ಜನ ಇನ್ನೂ ಜಾಗೃತರಾಗುವ ಅವಶ್ಯಕತೆಯಿದೆ’ ಎಂದರು.

‘ನಮ್ಮನ್ನು ಆಯ್ಕೆ ಮಾಡಿದ ಜನ ನಮ್ಮ ಕಾಲರ್‌ ಹಿಡಿದು ಪ್ರಶ್ನಿಸುವ ಅಧಿಕಾರವನ್ನು ಹೊಂದಿದ್ದಾರೆ. ಆದರೆ, ಜನತೆಗೆ ಜಾಗೃತಿಯ ಕೊರತೆಯಿದೆ. ಜನ ಜಾಗೃತಿಯಿಂದ ಎಲ್ಲವೂ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ನಾನು ಮುಂದೆ ಲೋಕಸಭಾ ಅಭ್ಯರ್ಥಿಯಾಗುವನೋ, ಇಲ್ಲವೋ ಗೊತ್ತಿಲ್ಲ. ಆದರೆ, ನಮ್ಮ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ ಕೆಲಸ ಮಾಡುವೆ’ ಎಂದರು.

‘ಹಲವು ವರ್ಷಗಳಿಂದ ಡಿ.ಕೆ.ಶಿವಕುಮಾರ ಅವರನ್ನು ನೋಡಿರುವೆ. ಅವರು ಬಿಜೆಪಿ ಬರುವುದಿಲ್ಲ. ಅವರು ಬಂದರೂ ಬಿಜೆಪಿ ಅವರನ್ನು ಸೇರಿಸಿಕೊಳ್ಳದು. ನಮ್ಮ ತಾತ, ತಂದೆ ಮತ್ತು ನಾನೂ ಕಾಂಗ್ರೆಸ್‌ನಲ್ಲಿದ್ದೆವು. ಆದರೆ, ಅಂದಿನ ಕಾಂಗ್ರೆಸ್‌ ಇಂದಿನ ಕಾಂಗ್ರೆಸ್‌ ಒಂದಲ್ಲ’ ಎಂದರು.

‘ಶಿಕ್ಷಕರ ನೇಮಕಾತಿಯಿಲ್ಲದೆ ಶಾಲೆಗಳಲ್ಲಿ ಶಿಕ್ಷಕರಿಲ್ಲ. ವೈದ್ಯರ ನೇಮಕಾತಿಯಿಲ್ಲದೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳು ಕುಂಠಿತವಾಗಿವೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿ ಮರೆತುಹೋದಂತಿದೆ’ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಮಂಡಲ ಘಟಕದ ಅಧ್ಯಕ್ಷ ನರಸಿಂಹುಲು ನಿರೇಟಿ, ಮುಖಂಡರಾದ ಮಲ್ಲೇಶಪ್ಪ ಬೇಲಿ, ರವೀಂದ್ರರೆಡ್ಡಿ ಪೋತುಲ್‌, ವೆಂಕಟರೆಡ್ಡಿ ಮೋತಕಪಲ್ಲಿ, ರಾಮುಲು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆ ವೇಳೆ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ನಡೆದ ಅಕ್ರಮದ ಕುರಿತು ದಾಖಲೆಗಳಿವೆ. ವೋಟ್‌ ಚೋರಿಯಿಂದಲೇ ಖರ್ಗೆಯವರ ಸುಧೀರ್ಘ ಜಯಸಿದ್ದು
ಡಾ.ಉಮೇಶ ಜಾದವ್‌ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.