
ಯಾದಗಿರಿ: ನಗರ, ಪಟ್ಟಣ ಪ್ರದೇಶಗಳ ವ್ಯಾಪ್ತಿ ವಿಸ್ತರಣೆ ಆಗುತ್ತಿರುವಂತೆ ಕಂದಾಯ ಭೂಮಿಯನ್ನು ವಿಭಜಿಸಿ ಅನಧಿಕೃತ ಬಡಾವಣೆ, ನಿವೇಶನಗಳಾಗಿ ಪರಿವರ್ತಿಸಿ ಅವುಗಳನ್ನು ಮಾರುತ್ತಿರುವ ಪ್ರಕರಣಗಳೂ ಏರಿಕೆ ಆಗುತ್ತಿವೆ. ಇದರಿಂದ ಸ್ಥಳೀಯ ಆಡಳಿತಕ್ಕೆ ತೆರಿಗೆ, ಭೂ ಪರಿವರ್ತನೆ ಶುಲ್ಕದಂತ ಆದಾಯದಲ್ಲಿ ಖೋತ ಆಗುತ್ತಿದೆ.
ನಗರ ಪ್ರದೇಶದಲ್ಲಿ ನಿವೇಶನ ಕೊಂಡು ಮನೆ ಕಟ್ಟಬೇಕು ಎಂಬ ಮಧ್ಯಮ ವರ್ಗದವರ ಆಸೆ ಹೆಚ್ಚಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿಗಳು ಅಕ್ರಮ ಬಡಾವಣೆ ನಿರ್ಮಿಸಿ ಮಾರಾಟ ಮಾಡುತ್ತಿದ್ದಾರೆ. ಸೂಕ್ತ ದಾಖಲಾತಿಗಳೂ ಇಲ್ಲದೇ ಇರುವುದರಿಂದ ಮನೆ ನಿರ್ಮಿಸಿಕೊಂಡವರು ತೆರಿಗೆ ಕಟ್ಟುತ್ತಿಲ್ಲ. ಜೊತೆಗೆ ತಾವು ವಾಸಿಸುವ ಪ್ರದೇಶದಲ್ಲಿ ಸರಿಯಾದ ಮೂಲಸೌಕರ್ಯಗಳನ್ನು ಪಡೆಯಲು ಆಗುತ್ತಿಲ್ಲ.
ಜಿಲ್ಲೆಯ ಯಾದಗಿರಿ, ಶಹಾಪುರ ಹಾಗೂ ಸುರಪುರ ನಗರಸಭೆ, ಕೆಂಭಾವಿ ಪುರಸಭೆ ಹಾಗೂ ಹುಣಸಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ಅನಧಿಕೃತ ಬಡಾವಣೆಗಳಿವೆ. ಅವುಗಳ ಪೈಕಿ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಬಡಾವಣೆಗಳಿವೆ. ರಾಖಂಗೇರಾ, ಹಳಿಸಗರ, ಬಾಪುಗೌಡ ನಗರ, ಬಿ.ಬಿ. ರಸ್ತೆ, ಹೊಸ ಬಸ್ ನಿಲ್ದಾಣ ಸೇರಿ ಹಲವೆಡೆ ಹಬ್ಬಿಕೊಂಡಿವೆ.
ಅನಧಿಕೃತ ಬಡಾವಣೆಗಳನ್ನು ತಡೆಯಬೇಕಾಗಿರುವ ಸ್ಥಳೀಯ ಪ್ರಾಧಿಕಾರಿಗಳು ಗಾಢ ನಿದ್ರೆಯಲ್ಲಿದೆ. ಯಾರಾದರೂ ದೂರು ನೀಡಿದಾಗ, ಸಂಬಂಧಪಟ್ಟವರಿಗೆ ನೋಟಿಸ್ ಕೊಟ್ಟು ಸುಮ್ಮನೆ ಆಗುತ್ತಿದೆ. ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಖಾಸಗಿ ಅಧಿಕೃತ ಲೇಔಟ್‌ಗಳ ವಿನ್ಯಾಸ ರಚಿಸಲು ಸಂಬಂಧಪಟ್ಟ ಪ್ರಾಧಿಕರಾದಿಂದ ಕಡ್ಡಾಯವಾಗಿ ಅನುಮೋದನೆ ಪಡೆಯಬೇಕು. ನಿಯಮದ ಅನುಸಾರ ಬಡಾವಣೆಯ ವ್ಯಾಪ್ತಿಯಲ್ಲಿ ರಸ್ತೆ ಪರಿಚಲನೆ, ಅಗಲ, ಉದ್ದ, ಉದ್ಯಾನ, ಬಯಲು ಜಾಗ, ಸಾರ್ವಜನಿಕ ಸ್ಥಳ ಬಳಕೆ, ಒಳ ಚರಂಡಿಯಂತಹ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಷರತ್ತುಗಳಿಗೆ ಒಳಪಟ್ಟು ಸ್ಥಳೀಯ ಪ್ರಾಧಿಕಾರವು ವಿನ್ಯಾಸದ ಯೋಜನೆಗೆ ಅನುಮೋದನೆ ಕೊಡುತ್ತದೆ. ಇದ್ಯಾವುದರ ಪರಿವೆಯಿಲ್ಲದೆ ಜನರು ಭೂಮಾಲೀಕರ, ಮಧ್ಯವರ್ತಿಗಳಿಂದ ನಿವೇಶನ ಖರೀದಿಸಿ ಮೋಸ ಹೋಗುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.
ಕಡಿಮೆ ಬೆಲೆ, ಸುಲಭ ಕಂತು, ಮುಂಗಡ ಹಣ ಕಟ್ಟಿದರೆ ನಿವೇಶನಗಳನ್ನು ಖರೀದಿದಾರರ ಹೆಸರಿಗೆ ಮಾಡಿಕೊಡುವುದಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳು ಹೇಳಿಕೊಂಡು ಮಾರಾಟ ಮಾಡುತ್ತಿದ್ದಾರೆ. ಇದನ್ನು ನಂಬುವ ನಿವೇಶನಗಳ ಆಸಕ್ತರು ಅವರ ಮಾತಿಗೆ ಮರುಳಾಗಿ ಬಾಂಡ್ ಮೇಲೆಯೇ ನಿವೇಶನ ಖರೀದಿಸಿ, ಹಣ ಸಹ ಪಾವತಿ ಮಾಡುತ್ತಿದ್ದಾರೆ. ಮನೆ ನಿರ್ಮಾಣದ ವೇಳೆ ಪ್ರಾಧಿಕಾರದ ಅನುಮೋದನೆ ಸಿಗದೆ, ಮೂಲಸೌಕರ್ಯಗಳು ಪಡೆಯಲು ಆಗದೆ ಅತಂತ್ರ ಸ್ಥಿತಿ ಎದುರಿಸುತ್ತಾರೆ.
ಅನಧಿಕೃತ ಬಡಾವಣೆಗಳಲ್ಲಿ ಸರಿಯಾಗಿ ರಸ್ತೆ, ಚರಂಡಿ ನಿರ್ಮಾಣವಾಗದೆ ಮಳೆಯ ನೀರು ಸೇರಿದಂತೆ ತ್ಯಾಜ್ಯ ನೀರು ಸರಾಗವಾಗಿ ಹರಿದು ಹೋಗಲು ಆಗುವುದಿಲ್ಲ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಯಂತೆ ಆಗುತ್ತವೆ. ತ್ಯಾಜ್ಯ ನಿರ್ವಹಣೆ, ಬೀದಿ ದೀಪ ವ್ಯವಸ್ಥೆಯೂ ಸಮರ್ಪಕವಾಗಿ ಇರುವುದಿಲ್ಲ.
‘ಡೆವಲಪರ್ಸ್ ಸೇರಿ ಅಧಿಕಾರಿಗಳ ಮೇಲೂ ಎಫ್‌ಐಆರ್’
‘ನಗರ ಸುತ್ತಲಿನ ಗ್ರಾಮೀಣ ಭಾಗದಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಿಸಿದವರನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಅವುಗಳಲ್ಲಿ ಯಾವೆಲ್ಲ ಅಧಿಕಾರಿಗಳು ಭಾಗಿಯಾಗಿದ್ದಾರೆ ಸೇರಿ ಡೆವಲಪರ್ಸ್ ವಿರುದ್ಧವೂ ಎಫ್‌ಐಆರ್ ಮಾಡಲಾಗುವುದು’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಲಕ್ಷ್ಮಿಕಾಂತ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅನಧಿಕೃತ ಬಡಾವಣೆಗಳ ಬಗ್ಗೆ ದೂರು ಬಂದಿದ್ದು ದಾಖಲೆಗಳ ಪರಿಶೀಲನೆಯಿಂದ ಗೊತ್ತಾಗಿದೆ. ಏಳು ಲೇಔಟ್‌ಗಳ ಮಾಲೀಕರು ಡೆವಲಪರ್ಸ್‌ಗಳ ವಿರುದ್ಧ ತೆಗೆದುಕೊಳ್ಳಲಾಗುವುದು. ಅದಕ್ಕಾಗಿ ಅಗತ್ಯ ಸಿದ್ಧತೆಯೂ ಮಾಡಿಕೊಳ್ಳಲಾಗಿದೆ’ ಎಂದರು.
‘ಬಹಳಷ್ಟು ವರ್ಷಗಳ ಹಿಂದೆಯೇ ಬಡಾವಣೆಗಳು ನಿರ್ಮಾಣ ಆಗಿವೆ. ಡಬಲ್ ತೆರಿಗೆ ಕಟ್ಟಿಸಿಕೊಂಡು ಬಿ–ಖಾತೆ ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಬಹುತೇಕರು ಮುಂದೆ ಬಂದು ಬಿ– ಖಾತೆಯನ್ನು ಮಾಡಿಸಿಕೊಂಡಿದ್ದಾರೆ’ ಎಂದು ಹೇಳಿದರು.
‘ಈ ಬಗ್ಗೆ ಜಿಲ್ಲಾಧಿಕಾರಿಗಳು ಉಪ ನೋಂದಣಾಧಿಕಾರಿಯ ಗಮನಕ್ಕೂ ತಂದು ಅರ್ಜಿಗಳ ವಿಲೇವಾರಿ ಮಾಡಬೇಡಿ ಎಂದಿದ್ದರು. ಸೇಲ್ ಡೀಡ್ ಆದ ಮೇಲೆ ವಿಲೇವಾರಿ ನಿಲ್ಲಿಸಲು ಆಗುವುದಿಲ್ಲ. ಅನಧಿಕೃತ ಲೇಔಟ್ ಎಂಬುದು ಸಹ ನಮಗೆ ಗೊತ್ತಾಗುವುದಿಲ್ಲ ಎಂದು ಸಬ್ ರಿಜಿಸ್ಟ್ರಾರ್ ಹೇಳಿದ್ದಾರೆ.
ನಗರಸಭೆ ಪುರಸಭೆ ಹಂತದಲ್ಲಿ ತಡೆಗಟ್ಟುವಂತೆಯೂ ಸೂಚನೆ ಕೊಡಲಾಗಿದೆ. ಅನಧಿಕೃತ ಬಡಾವಣೆಗಳಲ್ಲಿ ಅನಧಿಕೃತ ಲೇಔಟ್ ಎಂಬ ನಾಮಫಲಕಗಳನ್ನು ಅಳವಡಿಕೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ಹತ್ತಕ್ಕೂ ಹೆಚ್ಚು ಅನಧಿಕೃತ ಬಡಾವಣೆ
ಹುಣಸಗಿ: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 10ಕ್ಕೂ ಹೆಚ್ಚು ಅನಧಿಕೃತ ವಸತಿ ಬಡಾವಣೆ ಇವೆ ಎಂದು ಪಟ್ಟಣ ಪಂಚಾಯಿತಿಯಿಂದ ತಿಳಿದುಬಂದಿದೆ. ಈ ಹಿಂದಿನ ಗ್ರಾಮ ಪಂಚಾಯಿತಿಯು ಪಟ್ಟಣ ಪಂಚಾಯಿತಿಯಾದ ಬಳಿಕ ಕೆಲವರು ವಾಣಿಜ್ಯ ಹಾಗೂ ವಸತಿ ಉದ್ದೇಶಕ್ಕಾಗಿ ಬಡಾವಣೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಇನ್ನೂ ಕೆಲವು ಬಡಾವಣೆಗಳಲ್ಲಿ ರಸ್ತೆ ಚರಂಡಿ ವ್ಯವಸ್ಥೆ ಅಭಿವೃದ್ಧಿಪಡಿಸಿರುವುದಿಲ್ಲ. ಪ್ರತಿ ವರ್ಷವೂ ಅವರು ಕರ ಪಾವತಿಸುತ್ತಾರೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.
ಅನಧಿಕೃತ ಬಡಾವಣೆಗಳಿಗೆ ‘ಬಿ’ ಖಾತಾ
ಸುರಪುರ: ಸುರಪುರ ಪುರಸಭೆ ಆಗಾಗ ತನ್ನ ವಿಸ್ತಾರ ವ್ಯಾಪ್ತಿ ಹೆಚ್ಚಿಸುತ್ತಿದ್ದಂತೆ ಮತ್ತು ಕೆಲ ವರ್ಷಗಳ ಹಿಂದೆ ನಗರಸಭೆಯಾಗಿ ಮೇಲ್ದರ್ಜೆಗೇರುತ್ತಿದ್ದಂತೆ ಹಲವು ಗ್ರಾಮಗಳು ವ್ಯಾಪ್ತಿಗೆ ಒಳಪಟ್ಟಿವೆ. ಅವೆಲ್ಲವೂ ಈಗ ಅನಧಿಕೃತ ಬಡಾವಣೆಗಳಾಗಿವೆ. ಅಲ್ಲಿನ ಮನೆಗಳಿಗೆ ಗ್ರಾಮ ಪಂಚಾಯಿತಿಯ ಕಟ್ಟಡ ಪರವಾನಗಿ ಇದೆ. ನಗರ ಯೋಜನೆ ಮತ್ತು ನಗರಸಭೆಯ ಪರವಾನಗಿ ಇಲ್ಲ. ನಗರಸಭೆ ಅನಧಿಕೃತ ಬಡಾವಣೆ ಎಂಬ ನಾಮಫಲಕವೂ ಅಳವಡಿಸಿಲ್ಲ. ನಗರಸಭೆ ಅಧಿಕಾರಿಗಳು ಅವುಗಳನ್ನು ಅಧಿಕೃತ ಬಡಾವಣೆಗಳನ್ನಾಗಿ ಮಾರ್ಪಡಿಸುವ ಗೋಜಿಗೆ ಹೋಗಿಲ್ಲ. ಈ ಬಡಾವಣೆಗಳ ಎಲ್ಲ ಮನೆಗಳಿಗೆ ‘ಬಿ’ ಖಾತಾ ನೀಡಿ ಕೈತೊಳೆದುಕೊಂಡು ಬಿಟ್ಟಿದ್ದಾರೆ. ಇದರಿಂದ ನಗರಸಭೆಗೆ ಮನೆ ಕರ ವಸೂಲಿಯಾಗುತ್ತಿದೆ. ಆದರೆ ಮನೆ ಮಾಲೀಕರಿಗೆ ಬ್ಯಾಂಕ್‍ಗಳಿಂದ ಯಾವುದೇ ಸಾಲ ಸೌಲಭ್ಯ ಸಿಗುತ್ತಿಲ್ಲ. ಮನೆ ಮಾಲೀಕರು ತಮ್ಮ ಮನೆಗಳನ್ನು ಅಧಿಕೃತವೂ ಮಾಡಿಸಿಕೊಳ್ಳುತ್ತಿಲ್ಲ. ‘ನಮ್ಮ ಮನೆಯನ್ನು ಅಧಿಕೃತ ಮಾಡುವಂತೆ ಹಲವು ಬಾರಿ ನಗರಸಭೆಗೆ ತಿರುಗಾಡಿದರೂ ಪ್ರಯೋಜನವಾಗಿಲ್ಲ. ಟೌನ್ ಪ್ಲಾನಿಂಗ್ ಪರವಾನಿಗೆಗೆ ಪರದಾಡುವಂತಾಗಿದೆ. ಸಾಕಷ್ಟು ಹಣವೂ ಕೇಳುತ್ತಿದ್ದಾರೆ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅನಧಿಕೃತ ಬಡಾವಣೆಯ ನಿವಾಸಿ.
ಅನಧಿಕೃತ ಮನೆಗಳನ್ನು ಸಕ್ರಮ ಮಾಡಿಕೊಳ್ಳಲು ನೋಟಿಸ್ ನೀಡಿದರೂ ಮನೆ ಮಾಲೀಕರು ಸ್ಪಂದಿಸುತ್ತಿಲ್ಲ. ಮಾನವೀಯತೆಯ ದೃಷ್ಟಿಕೋನದಿಂದ ಆ ಬಡಾವಣೆಗಳಿಗೆ ಸೌಕರ್ಯ ಒದಗಿಸಿದ್ದೇವೆ.-ವೆಂಕಟೇಶ, ಕಲಬುರಗಿ ನಗರಸಭೆ ಕಂದಾಯ ಅಧಿಕಾರಿ
ಪಟ್ಟಣದ ಅನಧಿಕೃತ ಬಡಾವಣೆಗಳಿಗೆ ಬಿ– ಖಾತಾ ನೀಡಲಾಗುತ್ತಿದ್ದು ಜನಸಂದಣಿ ಹೆಚ್ಚಾಗಿರುವಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಅನಧಿಕೃತ ಬಡಾವಣೆಗಳಿಗೆ ಎರಡು ಪಟ್ಟು ಕರ ವಸೂಲಿ ಮಾಡಲಾಗುತ್ತಿದೆ.-ಮಹಮ್ಮದ್ ಯೂಸುಫ್ ಪುರಸಭೆ ಮುಖ್ಯ ಅಧಿಕಾರಿ ಕೆಂಭಾವಿ
ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಪವನ ಕುಲಕರ್ಣಿ, ಭೀಮಸೇನರಾವ ಕುಲಕರ್ಣಿ