ಕೆಂಭಾವಿ: ಪಟ್ಟಣದ ಗುತ್ತಿಬಸವಣ್ಣ ಏತ ನೀರಾವರಿ ಪ್ರದೇಶದ ಜಾಕ್‍ವೆಲ್ ಸ್ಥಳಕ್ಕೆ ಗುರುವಾರ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದ ಸರ್ಕಾರದ ಖರ್ಚು ವೆಚ್ಚಗಳ ಸದನ ಸಮಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಹಲವು ವರ್ಷಗಳಿಂದ ಸತತ ದುರಸ್ತಿಗೊಳ್ಳುತ್ತಿರುವ ಈ ಬೃಹತ್ ನೀರಾವರಿ ಒದಗಿಸುವ ಮೋಟಾರುಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಯಾದಗಿರಿ, ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳ ಸಾವಿರಾರು ಹೆಕ್ಟೇರ್ ಭೂಪ್ರದೇಶಕ್ಕೆ ನೀರುಣಿಸುವ ಈ ಯೊಜನೆ ಹಲವು ವರ್ಷಗಳಿಂದ ಹಳ್ಳ ಹಿಡಿದಿದ್ದು ಕೇವಲ ದುರಸ್ತಿಗೆ ಪ್ರತಿವರ್ಷ ಕೋಟಿಗಟ್ಟಲೇ ಸರ್ಕಾರದ ಹಣ ಪೋಲಾಗುತ್ತಿದೆ. ಏತ ನೀರಾವರಿ ಒದಗಿಸಲು ಒಟ್ಟು 7 ಮೋಟಾರ್ ಅಳವಡಿಸಿದ್ದು, ಅದರಲ್ಲಿ 5 ಯಂತ್ರಗಳು ಸತತ ಕೆಲಸ ಮಾಡಬೇಕೆಂಬ ಸರ್ಕಾರದ ನಿಯಮವಿದೆ. ಆದರೆ, ಐದು ಯಂತ್ರಗಳು ಕೆಟ್ಟು ವರ್ಷಗಳೇ ಗತಿಸಿದ್ದರೂ ಇಲ್ಲಿಯವರೆಗೂ ದುರಸ್ತಿಗೊಳಿಸದೆ ಇರುವ ಅಧಿಕಾರಿಗಳ ನಡೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ಕ್ಲಾಸ್
ಪರಿಶೀಲನೆ ನಂತರ ಕೆಬಿಜೆಎನ್‍ಎಲ್ ಅಧಿಕಾರಿಗಳ ಸಭೆ ನಡೆಸಿದ ಸಮಿತಿ ಸದಸ್ಯರು, ಸರಿಯಾದ ಮಾಹಿತಿ ಇಲ್ಲದೆ ಸಭೆಗೆ ಬಂದ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಂತ್ರಗಳ ನಿರ್ವಹಣೆ, ಒಟ್ಟು ಖರ್ಚು ವೆಚ್ಚ, ಕಾಲುವೆಗೆ ಇಲ್ಲಿಯವರೆಗೆ ಹರಿದ ನೀರಿನ ಪ್ರಮಾಣ ಸೇರಿದಂತೆ ವಿವಿಧ ಮಾಹಿತಿ ಕೇಳಿದ ತಂಡಕ್ಕೆ ಉತ್ತರ ಕೊಡಲು ತಡಕಾಡಿದ ಅಧಿಕಾರಿಗಳ ನಡೆಗೆ ಅತೃಪ್ತಿ ವ್ಯಕ್ತಪಡಿಸಿದ ಸಮಿತಿ ಸದಸ್ಯರು ಈ ಬಗ್ಗೆ ಸಮಗ್ರ ವರದಿ ಸರ್ಕಾರಕ್ಕೆ ಸಲ್ಲಿಸಿ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ತಿಳಿಸಿದರು.
ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ, ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರಭಾಕರ ಚಿಣಿ ಸೇರಿದಂತೆ ಇಲಾಖೆಯ ಹಲವು ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.