ADVERTISEMENT

ಯಾದಗಿರಿ | ಬಿಸಿಲಿನ ಬೇಗೆ ಒಂದೆಡೆ, ಅನಿಯಮಿತ ವಿದ್ಯುತ್ ಕಡಿತ ಮತ್ತೊಂದೆಡೆ

ಬಿ.ಜಿ.ಪ್ರವೀಣಕುಮಾರ
Published 27 ಮೇ 2020, 19:45 IST
Last Updated 27 ಮೇ 2020, 19:45 IST
ಯಾದಗಿರಿಯ ಜೆಸ್ಕಾಂ ಕಚೇರಿ
ಯಾದಗಿರಿಯ ಜೆಸ್ಕಾಂ ಕಚೇರಿ   

ಯಾದಗಿರಿ: ಮಾರ್ಚ್‌, ಏಪ್ರಿಲ್‌ ತಿಂಗಳ ‘ಹೆಚ್ಚುವರಿ’ ವಿದ್ಯುತ್‌ ಬಿಲ್‌ ನೀಡಿ ಗ್ರಾಹಕರ ಆಕ್ರೋಶಕ್ಕೆ ಜೆಸ್ಕಾಂ ಗುರಿಯಾಗಿತ್ತು. ಇದೀಗ ಅನಿಯಮಿತ ವಿದ್ಯುತ್ ಕಡಿತದಿಂದ ಜನತೆ ರೋಸಿ ಹೋಗಿದ್ದಾರೆ.

ಕಳೆದ ನಾಲ್ಕೈದು ದಿನಗಳಿಂದ ರಾತ್ರಿ ವೇಳೆಯಲ್ಲಿ ವಿದ್ಯುತ್‌ ಕಡಿತ ಮಾಡಲಾಗುತ್ತಿದ್ದು, ಮೊದಲೇ ಬಿಸಿಲಿನ ಬೇಗೆಯಿಂದ ತತ್ತರಿಸಿರುವ ಜನತೆ ಜೆಸ್ಕಾಂಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಸಂಜೆ ವೇಳೆಯಲ್ಲಿ ಗಾಳಿ ಬೀಸಿದರೂ ಪೂರೈಕೆ ಸ್ಥಗಿತಮಾಡಲಾಗುತ್ತಿದೆ. ಇದರಿಂದ ಮನೆಗಳಲ್ಲಿರುವ ಜನರುಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ADVERTISEMENT

ಬಿಸಿಲಿನ ಧಗೆ:ಜಿಲ್ಲೆಯಲ್ಲಿ 42ರಿಂದ 43 ಡಿಗ್ರಿ ಸೆಲ್ಸಿಯಸ್‌ ಬಿಸಿಲು ತಾಪಮಾನ ಇದೆ. ಬಿಸಿಗಾಳಿ ಬೀಸುತ್ತಿದೆ.ಮಧ್ಯಾಹ್ನದ ನಂತರ ಬಹುತೇಕ ಜನರು ಮನೆ ಸೇರಿಕೊಳ್ಳುತ್ತಾರೆ. ಆದರೆ, ಜೆಸ್ಕಾಂ ಸಣ್ಣಪುಟ್ಟ ಕಾರಣಕ್ಕೂ ವಿದ್ಯುತ್‌ ನಿಲ್ಲಿಸಲಾಗುತ್ತಿದೆ. ಇದರಿಂದ ವೃದ್ಧರು, ಬಾಣಂತಿಯರು, ಗರ್ಭಿಣಿಯರು ಪರದಾಡುತ್ತಿದ್ದಾರೆ. ಚಿಕ್ಕ ಮಕ್ಕಳು ಬಿಸಿಲಿನ ಉರಿ ತಾಳಲಾರದೆ ರಚ್ಚೆ ಹಿಡಿದು ಒಂದೇ ಸಮನೆ ಆಳಲು ಶುರುಮಾಡುತ್ತಿವೆ.

‘ಕಳೆದ ನಾಲ್ಕೈದು ದಿನಗಳಿಂದ ರಾತ್ರಿ ಹೊತ್ತು ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಮೊದಲೇ ಬೇಸಿಗೆ ಧಗೆಯಿಂದ ನಿದ್ರೆಯೂ ಬರುತ್ತಿಲ್ಲ. ಇಂಥ ವೇಳೆಯಲ್ಲಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಅದೂ ಯಾವುದೇ ಮುನ್ಸೂಚನೆ ಇಲ್ಲದೆ ತೆಗೆಯುತ್ತಾರೆ. ಇದರಿಂದ ಯಾವಾಗ ಬೇಸಿಗೆ ಕಳೆಯುತ್ತದೆ ಎಂದು ಚಿಂತೆಯಾಗಿದೆ’ ಎಂದು ಅಜೀಜ್‌ ಕಾಲೊನಿಯ ಗೃಹಿಣಿ ರೇಣುಕಮ್ಮ ಕೋಟಗೇರಾ ಹೇಳುತ್ತಾರೆ.

‘ಮನೆಯಲ್ಲಿ ವೃದ್ಧರು ಇದ್ದಾರೆ. ಅವರಿಗೆ ಬಿಸಿಲಿನಿಂದ ಉರಿಗುಳ್ಳೆಗಳು ಎದ್ದಿವೆ. ವಿದ್ಯುತ್‌ ಇದ್ದರೆ ಫ್ಯಾನ್‌ ಗಾಳಿಗೆ ಹಾಯಾಗಿ ಮಲಗುತ್ತಾರೆ. ಇಲ್ಲದಿದ್ದರೆ ಚಡಪಡಿಸುತ್ತಾರೆ’ ಎನ್ನುತ್ತಾರೆ ಅವರು.

‘ರಾತ್ರಿ ವೇಳೆ 1 ರಿಂದ 2 ಗಂಟೆ ವಿದ್ಯುತ್‌ ಇರುವುದಿಲ್ಲ. ಮನಸ್ಸಿಗೆ ಬಂದಂತೆ ಜೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಕಡಿತ ಮಾಡುತ್ತಾರೆ. ಇದರಿಂದ ನಿದ್ರೆಯೇಆಗುವುದಿಲ್ಲ. ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ವಿದ್ಯುತ್‌ ಕಡಿತ ಮಾಡುವುದು ಬಿಟ್ಟು ಪೂರೈಕೆ ಮಾಡಬೇಕು’ ಎಂದು ಖಾಸಗಿ ಉದ್ಯೋಗಿ ವೆಂಕಟೇಶ ಮಾಚಬಾಳ ಆಗ್ರಹಿಸುತ್ತಾರೆ.

‘ನಗರದಲ್ಲಿ ಒಂದು ಫೀಡರ್‌ ಹಾಳಾದರೆ ಎಲ್ಲ ಕಡೆ ವಿದ್ಯುತ್ ಸಮಸ್ಯೆ ಉಂಟಾಗುತ್ತಿತ್ತು. ಬುಧವಾರ ಅದನ್ನು ಸರಿಪಡಿಸಲಾಗಿದೆ. ಇನ್ನು ಮುಂದೆ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಉಂಟಾಗುವುದಿಲ್ಲ. ಶಹಾಪುರದ ಭೀಮರಾಯನಗುಡಿ ಬಳಿ ಐದುಮರಗಳು ಬಿದ್ದು, ವಿದ್ಯುತ್‌ ಸಮಸ್ಯೆ ಆಗಿತ್ತು. ಇವೆಲ್ಲವನ್ನು ಸರಿಪಡಿಸಲಾಗಿದೆ’ ಎನ್ನುತ್ತಾರೆ ಯಾದಗಿರಿ ಜೆಸ್ಕಾಂ ಇಇಡಿ.ರಾಘವೇಂದ್ರ ಹೇಳುತ್ತಾರೆ.

**

ಗಾಳಿ–ಮಳೆ ಬಂದರೆ ಸಾಮಾನ್ಯವಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತದೆ. ಯಾದಗಿರಿ ನಗರದ ಉಪಕೇಂದ್ರದಲ್ಲಿ ಸಮಸ್ಯೆ ಉಂಟಾಗಿತ್ತು. ಅದನ್ನು ಸರಿಪಡಿಸಲಾಗಿದೆ. ಮುಂದೆ ಸಮಸ್ಯೆ ಆಗಲ್ಲ.
-ಡಿ.ರಾಘವೇಂದ್ರ, ಜೆಸ್ಕಾಂ ಇಇ ಯಾದಗಿರಿ

**

‌ವಿದ್ಯುತ್ ಕಡಿತ ಮಾಡುವುದನ್ನು ನಿಲ್ಲಿಸಬೇಕು. ದುರಸ್ತಿಯಾದರೆ ಶೀಘ್ರ ಸರಿಪಡಿಸಬೇಕು. ಅನಗತ್ಯ ವಿದ್ಯುತ್ ಕಡಿತ ತಪ್ಪಿಸಬೇಕು.
-ಮುಸ್ತಾಫ್‌ ಪಟೇಲ್‌, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.