ADVERTISEMENT

ಮೆಣಸಿನಕಾಯಿ ಬೆಳೆಗೆ ನೀರು ಕೊಡಿ: ರೈತರ ಪ್ರತಿಭಟನೆ

ಭೀಮರಾಯನಗುಡಿ ಆಡಳಿತ ಕಚೇರಿಗೆ ಬೀಗ ಹಾಕಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 5:58 IST
Last Updated 22 ಡಿಸೆಂಬರ್ 2023, 5:58 IST
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೆಬಿಜಿಎನ್‌ಎಲ್‌ ಆಡಳಿತ ಕಚೇರಿಗೆ ಗುರುವಾರ ಬೀಗ ಹಾಕಿ ರೈತರು ಪ್ರತಿಭಟನೆ ನಡೆಸಿದರು
ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಕೆಬಿಜಿಎನ್‌ಎಲ್‌ ಆಡಳಿತ ಕಚೇರಿಗೆ ಗುರುವಾರ ಬೀಗ ಹಾಕಿ ರೈತರು ಪ್ರತಿಭಟನೆ ನಡೆಸಿದರು   

ಶಹಾಪುರ: ಬೆಳೆದು ನಿಂತ ಬ್ಯಾಡಗಿ, ಗುಂಟೂರ ತಳಿಯ ಮೆಣಸಿನಕಾಯಿ ಬೆಳೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಭೀಮರಾಯನಗುಡಿ ಆಡಳಿತ ಕಚೇರಿ ಮುಂದೆ ಕಳೆದ ನಾಲ್ಕು ದಿನದಿಂದ ನಡೆಯುತ್ತಿರುವ ಧರಣಿ ನಡೆಸುತ್ತಿರುವ ರೈತ ಮುಖಂಡರು ಗುರುವಾರ ಆಡಳಿತ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ತೀವ್ರಗೊಳಿಸಿದರು.

ಬೆಳಿಗ್ಗೆ ಆಡಳಿತ ಕಚೇರಿಯ ಮುಂದೆ ಎತ್ತಿನ ಗಾಡಿ ಹಾಗೂ ಎತ್ತುಗಳನ್ನು ಕಟ್ಟಿ ಹಾಕಿದ ರೈತ ಮುಖಂಡರು, ನಂತರ ಮಧ್ಯಾಹ್ನ ನಾಲ್ಕು ಗಂಟೆಗೆ  ಕಚೇರಿ ಪ್ರವೇಶ ದ್ವಾರ ಸೇರಿ ನಾಲ್ಕು ಕಡೆ ಕಚೇರಿಗೆ ಬೀಗ ಹಾಕಿದರು. ಆಗ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪರದಾಡಿದರು.

ಪರಿಸ್ಥಿತಿ ಸೂಕ್ಷ್ಮತೆಯನ್ನು ಅರಿತ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಹಾಗೂ ಎಸ್ಪಿ ಸಂಗೀತಾ ಧರಣಿ ನಿರತರ ಸ್ಥಳಕ್ಕೆ ದೌಡಾಯಿಸಿದರು. ರೈತರ ಸಮಸ್ಯೆಯನ್ನು ಆಲಿಸಿದರು.

ADVERTISEMENT

ಈ ವೇಳೆ ರೈತ ಸಂಘದ ರಾಜ್ಯ ಘಟಕದ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 25 ಸಾವಿರ ಎಕರೆ ವಿವಿಧ ತಳಿಯ ಮೆಣಸಿನಕಾಯಿ ಬೆಳೆ ಬಿತ್ತನೆ ಮಾಡಿದ್ದಾರೆ. ಪ್ರತಿ ಎಕರೆಗೆ ₹ 1 ಲಕ್ಷ ವೆಚ್ಚ ಮಾಡಿದ್ದೇವೆ. ಜಲಾಶಯದಲ್ಲಿ ಸಾಕಷ್ಟು ನೀರಿನ ಲಭ್ಯತೆ ಇದೆ. ನಾರಾಯಣಪುರ ಎಡದಂಡೆ ಕಾಲುವೆಗೆ ಫೆಬ್ರುವರಿ ತಿಂಗಳ ತನಕ ಕನಿಷ್ಠ ಮೂರು ಬಾರಿ ನೀರು ನೀಡಿ ಸಂಕಷ್ಟದಿಂದ ಬೆಳೆ ಪಾರು ಮಾಡಬೇಕು. ಇಲ್ಲದಿದ್ದರೆ ನಾವೆಲ್ಲರೂ ವಿಷ ಕುಡಿಯುವ ಪರಿಸ್ಥಿತಿ ಎದುರಾಗಿದೆ. ಸರ್ಕಾರಕ್ಕೆ ರೈತರ ಸಂಕಷ್ಟವನ್ನು ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಮಗೆ ರೈತರ ಸಂಕಷ್ಟ ಅರಿವು ಇದೆ. ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳುವುದು ನನ್ನ ಕೈಯಲ್ಲಿ ಇಲ್ಲ. ಹಿರಿಯ ಅಧಿಕಾರಿಗಳ ಜತೆ ಚರ್ಚಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಮಾಲೋಚನೆ ಮಾಡಬೇಕು. ಜಿಲ್ಲೆ ಬರಗಾಲದಿಂದ ತತ್ತರಿಸಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಜಲಾಶಯದಲ್ಲಿ ನೀರು ಸಂಗ್ರಹಿಸಿ ಇಡಲಾಗಿದೆ ಎಂಬುವುದು ತಮಗೆ ತಿಳಿದ ವಿಷಯ. ನಮಗೆ ಒಂದು ದಿನ ಕಾಲಾವಕಾಶ ನೀಡಿ ನೀರಾವರಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸಾಧ್ಯವಾದಷ್ಟು ನೀರು ಹರಿಸುವ ಬಗ್ಗೆ ಯತ್ನಿಸಲಾಗುವುದು. ನೀರು ಹರಿಸುವ ನಿರ್ಧಾರ ಹೇಳಿ ಎಂದು ಒತ್ತಡ ಹಾಕಬೇಡಿ ಎಂದು ರೈತ ಮುಖಂಡರಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.

ನಂತರ ರೈತ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯ ರೈತ ಸಂಘದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನ ಪಾಟೀಲ ಯಕ್ಷಿಂತಿ, ಜಿಲ್ಲಾ ಘಟಕದ ಅಧ್ಯಕ್ಷ ಶರಣು ಮಂದ್ರವಾಡ, ಮಹೇಶಗೌಡ ಸುಬೇದಾರ, ಚಂದ್ರಕಲಾ, ಹಣಮಂತ ರುಕ್ಮಾಪುರ, ಮಲ್ಲಣ್ಣ ಚಿಂದಿ, ಮಲ್ಲಿಕಾರ್ಜುನ ಸಗರ,ಅಂಬ್ಲಪ್ಪ ದೊರೆ, ಗೌಡಪ್ಪಗೌಡ ಹುಲಕಲ್, ಭೀಮಣ್ಣ ಪೂಜಾರಿ, ಪ್ರಭುಗೌಡ ಇದ್ದರು.

ಮುಂದುವರೆದ ಧರಣಿ: ನಾಲ್ಕು ದಿನದಿಂದ ನಡೆಸುತ್ತಿರುವ ಧರಣಿಯನ್ನು ರೈತರು ಮುಂದುವರೆಸಿದ್ದಾರೆ. ಜಿಲ್ಲಾಧಿಕಾರಿ ನಮಗೆ ಶುಕ್ರವಾರ ಮಧ್ಯಾಹ್ನ ಸ್ಪಷ್ಟ ಸಂದೇಶ ನೀಡುವ ಭರವಸೆ ನೀಡಿದ್ದರಿಂದ ನಾವು ಶಾಂತರೀತಿಯಿಂದ ಧರಣಿಯನ್ನು ಮುಂದುವರೆಸಿದ್ದೇವೆ ಎಂದು ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟೆ ಸ್ಪಷ್ಟಪಡಿಸಿದ್ದಾರೆ.

ಧರಣಿ ಹಿಂಪಡಯುವಂತೆ ರೈತ ಮುಖಂಡರಿಗೆ ಜಿಲ್ಲಾಧಿಕಾರಿ ಡಾ.ಬಿ.ಸುಶೀಲಾ ಮನವಿ ಮಾಡಿದರು
ಧರಣಿಯಲ್ಲಿ ಭಾಗವಹಿಸಿದ್ದ ಮೆಣಸಿನಕಾಯಿ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.