ಯಾದಗಿರಿ: ಕೇವಲ ಪೂಜೆ ಮಾಡುವುದರಿಂದ ದೇವರನ್ನು ಗೆಲ್ಲಲು ಸಾಧ್ಯವಿಲ್ಲ. ತಪಸ್ಸಿನ ಜೊತೆಗೆ ಜ್ಞಾನ ಸಂಪಾದಿಸಿದಾಗ ಮಾತ್ರ ಆತನ ಕೃಪೆಗೆ ಪಾತ್ರರಾಗಲು ಸಾಧ್ಯ. ಅದಕ್ಕಾಗಿ ವೇದೋಪನಿಷತ್ತುಗಳು ತೋರಿದ ಮಾರ್ಗದಲ್ಲಿ ನಾವೆಲ್ಲರೂ ನಡೆದುಕೊಂಡಲ್ಲಿ ಮೋಕ್ಷ ಪಡೆಯಬಹುದು ಎಂದು ಉತ್ತರಾದಿ ಮಠದ ಸತ್ಯಾತ್ಮತೀರ್ಥ ಶ್ರೀ ಹೇಳಿದರು.
ನಗರದ ಉತ್ತರಾದಿಮಠ ರಾಘವೇಂದ್ರ ಸ್ವಾಮಿಗಳ ಪರಿಮಳ ಮಂಟಪದಲ್ಲಿ ಗುರುಪೂರ್ಣಿಮೆ ದಿನ ಅಂಗವಾಗಿ ವಿಶೇಷ ಪೂಜೆಯೊಂದಿಗೆ ಪಂಚಾಮೃತ ಮತ್ತು ಅಷ್ಟೋತ್ತರ ಸಲ್ಲಿಸಿ ನಂತರ ಪಾಲ್ಗೊಂಡ ಭಕ್ತರನ್ನುದ್ದೇಶಿಸಿ ಉಪನ್ಯಾಸ ನೀಡಿದರು.
ಭಗವಂತನ ನಾಮಸ್ಮರಣೆಯಲ್ಲಿ ಇರುವವರಿಗೆ ಕಷ್ಟದ ಅರಿವು ಬರುವುದಿಲ್ಲ. ಅದಕ್ಕಾಗಿ ಪ್ರತಿಯೊಬ್ಬರು ಧರ್ಮ ಸಂರಕ್ಷಣೆಗೆ ಬದ್ಧರಾಗಿ ಮತ್ತು ತಮ್ಮ ಕುಟುಂಬದಲ್ಲಿರುವ ಮಕ್ಕಳಿಗೆ ನಮ್ಮ ಪರಂಪರೆ, ಸಂಸ್ಕಾರದ ಮತ್ತು ಧಾರ್ಮಿಕ ಅರಿವು ಮೂಡಿಸಬೇಕು. ಅಲ್ಲದೆ ದೈನಂದಿಕ ಕಾರ್ಯದ ಜೊತೆಗೆ ಭಗವಂತನ ಪ್ರಾರ್ಥನೆ ಮಾಡಿ ಆತನ ಪ್ರೀತಿ ಸಂಪಾದಿಸಿದಲ್ಲಿ ಮೋಕ್ಷ ಸಾಧಿಸಲು ಸಾಧ್ಯ ಎಂದು ಹೇಳಿದರು.
ಭೂಮಂಡಲದಲ್ಲಿ ಭಗವಂತ ಇಲ್ಲಿ ನೆಲೆಸಿದ್ದು, ಸರ್ವ ಭಕ್ತರಿಗೆ ಸಕಲ ಸಂಪತ್ತನ್ನು ನೀಡುತ್ತಿದ್ದಾನೆ. ಅವನನ್ನು ನಂಬಿದ ಯಾರೆ ಇರಲಿ ಅವರಿಗೆ ಆತನ ಅಭಯ ಹಸ್ತ ಯಾವತ್ತು ಇರುತ್ತದೆ ಎಂದು ಹೇಳಿದರು.
ಮಾನವನಾಗಿ ಜನಿಸಿದ ಮೇಲೆ ನಮ್ಮ ಸಂಸ್ಕಾರಗಳನ್ನು ಅರಿತು ಬದುಕು ಸಾಗಿಸಬೇಕು. ಯಾರು ಸದಾ ಇಂಥ ಕಲ್ಲುಬಂಡೆಯ ಮಧ್ಯೆ ನೆಲೆಸಿರುವ ಭಗವಂತನ ದರ್ಶನ ಮಾಡಿ ನಾವು ಪುನೀತರಾದೆವು. ತಾವುಗಳ ಈತನ ಸೇವೆ ಮಾಡುವ ಮೂಲಕ ಆತನ ಕೃಪೆಗೆ ಪಾತ್ರರಾಗಿ ಎಂದು ತಿಳಿಸಿದರು.
ನಂತರದಲ್ಲಿ ಭಕ್ತರಿಂದ ಪಾದ ಪೂಜೆ ಸ್ವೀಕರಿಸಿ, ತಪ್ತಮುದ್ರಾಧಾರಣೆ ಮಾಡಿದರು.
ಮಧ್ಯಾಹ್ನ ಶ್ರೀಮಠದ ಮೂಲ ರಾಮದೇವರ ಪೂಜೆ ಮಾಡಿದರು. ನಂತರದಲ್ಲಿ ತೀರ್ಥಪ್ರಸಾದ ಜರಗಿತು.
ಈ ಸಂದರ್ಭದಲ್ಲಿ ಶಶಿ ಆಚಾರ ದಿನಾನರು, ಪಂಡಿತ್ ನರಸಿಂಹಾಚಾರ ಪುರಾಣಿಕ, ಮಠದ ವ್ಯವಸ್ಥಾಪಕರಾದ ರಾಘವೇಂದ್ರಾಚಾರ ಜೋಶಿ, ಜಿಲ್ಲಾ ಬ್ರಾಹ್ಮಣ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ನಾರಾಯಣ ಪಸಪುಲ್, ವಿಠ್ಠಲಲಾಚಾರ, ಗುರುರಾಜ ದೇಸಾಯಿ, ಗೋವರ್ಧನ ಪುರಾಣಿಕ, ಯುವಕ ಮಂಡಳಿ ಸದಸ್ಯರು, ಮಹಿಳಾ ಭಜನಾ ಮಂಡಳಿ ಸದಸ್ಯರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.