ವಡಗೇರಾ: ಪಟ್ಟಣದಲ್ಲಿ ನ್ಯಾಯಾಲಯ ಸ್ಥಾಪಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಬೀಮಣ್ಣ ಬೂದಿನಾಳ ನೇತೃತ್ವದಲ್ಲಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
‘ವಡಗೇರಾ ತಾಲ್ಲೂಕು ಸುಮಾರು 2 ಲಕ್ಷ ಜನಸಂಖ್ಯೆ ಹೊಂದಿದೆ. ಸಾರ್ವಜನಿಕರಿಗೆ ಸಾರಿಗೆ ಸಂಪರ್ಕದ ಅನುಕೂಲವಿದೆ. ಇಲ್ಲಿ ಕೋರ್ಟ್ ಸ್ಥಾಪನೆಗೆ ಬೇಕಾದ ಸ್ಥಳವಕಾಶವೂ ಇದೆ. ಇಷ್ಟೆಲ್ಲ ಸೌಕರ್ಯವಿದ್ದರೂ ಸಹ ತಾಲ್ಲೂಕು ಕೋರ್ಟ್ ಇಲ್ಲ’ ಎಂದು ಮನವಿಪತ್ರದಲ್ಲಿ ತಿಳಿಸಿದ್ದಾರೆ.
‘ತಾಲ್ಲೂಕಿನ ಕೊನೆ ಭಾಗದ ಜನರು ತಮ್ಮ ವಾಜ್ಯಗಳಿಗೆ ದೂರದ ಶಹಾಪೂರ, ಯಾದಗಿರಿ ಕೋರ್ಟ್‌ಗಳಿಗೆ ಹೋಗುವುದು ಅನಿವಾರ್ಯವಾಗಿದೆ. ಸಾರ್ವಜನಿಕರ, ರೈತರ ಸಮಯದ ಜೊತೆಗೆ ಹಣವು ಪೋಲಾಗುತ್ತಿದೆ. ಈ ಕುರಿತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರು ಯಾವ ಪ್ರಯೋಜನವಾಗಿಲ್ಲ’ ಎಂದು ದೂರಿದ್ದಾರೆ.
‘ವಡಗೇರಾ ಪಟ್ಟಣದಲ್ಲಿ ಕೋರ್ಟ್ ಸ್ಥಾಪಿಸಿ ಬಡವರಿಗೆ, ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನುಕೂಲ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲು ಹಲಗಿ ಕುರಕುಂದಾ, ಶಿವರಾಜ ಕೊಂಕಲ್, ಬಸವರಾಜ, ಪುಟ್ಟಯ್ಯ ಹಾಗೂ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.