ಯಾದಗಿರಿ: ಜಿಲ್ಲೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮೂರು ದಿನಗಳ ಪ್ರವಾಸ ಕೈಗೊಂಡಿದ್ದು, ಮೊದಲ ದಿನವಾದ ಸೋಮವಾರ ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮೊದಲಿಗೆ ವಡಗೇರಾ ತಾಲ್ಲೂಕಿನ ಹಾಲಗೇರಾ ಗ್ರಾಮದ ಅಲೆಮಾರಿಗಳ ಕಾಲೊನಿಗೆ ಭೇಟಿ ನೀಡಿದರು. ಗ್ರಾಮಸ್ಥರಿಂದ ಮಾಹಿತಿ ಪಡೆದು ಅಧಿಕಾರಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಜನರ ಸಮಸ್ಯೆ ಆಲಿಸಿದರು. ಕಾಲೊನಿಗೆ ಭೇಟಿ ನೀಡುವ ಸ್ಥಳ ಕೆಸರು ಗದ್ದೆಯಿಂದ ಕೂಡಿದ್ದು, ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ದೂರಿನ ಸುರಿಮಳೆಗೈದರು.
‘ನೀವು ಬಂದಿದ್ದೀರಿ ಎಂದು ಗ್ರಾಮದ ರಸ್ತೆಗೆ ಮರಂ ಹಾಕಿದ್ದಾರೆ. ನಾವು ಎಷ್ಟು ಬಾರಿ ಮನವಿ ಮಾಡಿದರೂ ಕಾಲೊನಿಗೆ ಭೇಟಿ ನೀಡದ ಇವರು ಈಗ ಓಡೋಡಿ ಬಂದಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದರು.
ಇದೇ ವೇಳೆ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸಮಾಜ ಕಲ್ಯಾಣ ಇಲಾಖೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಜೆಜೆಎಂ, ಪಿಡಬ್ಲ್ಯೂಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ, ಸಿಡಿಪಿಒ, ಅಂಗನವಾಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಕಾಲೊನಿಗೆ ಸೌಲಭ್ಯ ಕಲ್ಪಿಸದ ಬಗ್ಗೆ ಪ‍್ರಶ್ನಿಸಿದ ಅಧ್ಯಕ್ಷೆಗೆ ‘ನಾವು ಹೊಸದಾಗಿ ಬಂದಿದ್ದೇವೆ. ನಮಗೆ ಮಾಹಿತಿ ಇಲ್ಲ’ ಎಂದು ಅಧಿಕಾರಿಗಳು ಹೇಳಿದರು. ಇದನ್ನು ಕೇಳಿ ಕೆಂಡಾಮಂಡಲರಾದ ಡಾ.ನಾಗಲಕ್ಷ್ಮೀಯವರು,‘ಎಲ್ಲರೂ ಹೊಸಬರೆ ಆದರೆ ಹಳಬರು ಏನು ಮಾಡಿದರು ಎಂದು ನಿಮಗೆ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.
‘ನಾನೂ ಡಾಕ್ಟರ್ ಇದ್ದೇನೆ’: ಜನ ಅಧಿಕಾರಿಗಳನ್ನು ನಂಬಬೇಕು. ನೀವು ಡೆಂಗಿ, ಮಲೇರಿಯಾ ಸೇರಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡಿಲ್ಲ. ನಾನೂ ಡಾಕ್ಟರ್ ಇದ್ದೇನೆ. ಜನರಿಗೆ ಅಗತ್ಯ ಆರೋಗ್ಯ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ಸೂಚಿಸಿದರು.
₹76 ಲಕ್ಷ ಎಲ್ಲಿಗೆ ಹೋಯ್ತು?: ‘ಗ್ರಾಮದ ಕಾಲೊನಿಗೆ ₹76 ಲಕ್ಷ ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ಮಂಜೂರಾಗಿದ್ದು, ₹64 ಲಕ್ಷ ಬಿಲ್ ಆಗಿದೆ. ಆದರೆ, ಕಾಮಗಾರಿ ಮಾತ್ರ ಕಾಣುತ್ತಿಲ್ಲ. ಕುಡಿಯುವ ನೀರು ಸಿಗುತ್ತಿಲ್ಲ. ಇದರಿಂದ ಹಣ ಎಲ್ಲಿಗೆ ಹೋಯಿತು’ ಎಂದು ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು.
‘ಮನೆ ಮಂಜೂರಾಗಿಲ್ಲ. ರಸ್ತೆ ಕೆಸರುಮಯವಾಗಿದೆ. ಬೀದಿ ದೀಪಗಳಿಲ್ಲ. ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಅಲ್ಲಿಗೆ ತೆರಳಲು ರಸ್ತೆ ಇಲ್ಲ. ರಾಡಿ ನೀರಿನಲ್ಲೇ ಮಕ್ಕಳು ತೆರಳಬೇಕಿದೆ. ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಕೊಡುತ್ತಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.
ಅಧಿಕಾರಿಗಳು ನಮ್ಮ ಗೋಳು ಕೇಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.
‘ನಾವು ಹೇಳಿದಂತೆ ಹೇಳಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದರು.
ಗ್ರಾಮಸ್ಥರು, ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು,‘ಇಲ್ಲಿರುವ ಎಲ್ಲ ಸಮಸ್ಯೆಗಳನ್ನು 3 ತಿಂಗಳಲ್ಲಿ ಇತ್ಯರ್ಥ ಪಡಿಸಬೇಕು. ಇಲ್ಲದಿದ್ದರೆ ನಿಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.