ADVERTISEMENT

ಯಾದಗಿರಿ | ವೆಂಕಟರೆಡ್ಡಿ ಸಜ್ಜನ ರಾಜಕಾರಣಿ: ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 5:57 IST
Last Updated 18 ಸೆಪ್ಟೆಂಬರ್ 2025, 5:57 IST
ಯಾದಗಿರಿಯಲ್ಲಿ ಬುಧವಾರ ನಡೆದ ವೆಂಕಟರೆಡ್ಡಿ ಮುದ್ನಾಳ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನಮನ ಸಲ್ಲಿಸಿದರು 
ಯಾದಗಿರಿಯಲ್ಲಿ ಬುಧವಾರ ನಡೆದ ವೆಂಕಟರೆಡ್ಡಿ ಮುದ್ನಾಳ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನಮನ ಸಲ್ಲಿಸಿದರು    

ಯಾದಗಿರಿ: ‘ನೇರ ನುಡಿಯ ವ್ಯಕ್ತಿತ್ವ, ಸದಾ ಜನರೊಂದಿಗೆ ಬೆರೆತು ಬಡವರು, ರೈತರ ಬಗ್ಗೆ ಕಾಳಜಿ ಹೊಂದಿದ್ದ ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಸರಳ, ಸಜ್ಜನಿಕೆಯ ರಾಜಕಾರಣಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಎನ್‌ವಿಎಂ ಹೋಟೆಲ್ ಪಕ್ಕದ ಆವರಣದಲ್ಲಿ ದಿ.ವೆಂಕಟರೆಡ್ಡಿ ಮುದ್ನಾಳ ಅವರ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಆಯೋಜಿಸಿದ್ದ ವೆಂಕಟರೆಡ್ಡಿ ಮುದ್ನಾಳ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವೆಂಕಟರೆಡ್ಡಿ ಅವರು 2018ರ ಚುನಾವಣೆಯಲ್ಲಿ ಗುರುಮಠಕಲ್‌ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ, ಯಾದಗಿರಿ ಕ್ಷೇತ್ರದಲ್ಲಿ ಇಳಿಸಲಾಯಿತು. ಬಿ.ಎಸ್‌. ಯಡಿಯೂರಪ್ಪ ಅವರ ಮೇಲಿನ ಗೌರವಕ್ಕೆ ಒಪ್ಪಿ, ಯಡಿಯೂರಪ್ಪ ಅವರು ಸಿಎಂ ಆಗಬೇಕು, ರೈತರ ಸಮಸ್ಯೆಗಳು ದೂರಾಗಬೇಕು. ಅದಕ್ಕಾಗಿ ನಾನು ಎಲ್ಲಿಯಾದರೂ ನಿಲ್ಲಲು ಸಿದ್ಧ ಎಂದಿದ್ದರು. ಆ ಮಾತುಗಳು ಈಗಲೂ ನನ್ನಲ್ಲಿ ಅಚ್ಚಳಿಯದೆ ಉಳಿದಿವೆ’ ಎಂದು ಹೇಳಿದರು.

ADVERTISEMENT

‘‌ಹೊಲದಲ್ಲಿ ಉಳಿಮೆ ಮಾಡಬೇಕಿದ್ದ ರೈತರು ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಅತಿವೃಷ್ಟಿಯಿಂದ ಹಾನಿಯಾದ ಬೆಳೆಯ ಸಮೀಕ್ಷೆ ಆಗುತ್ತಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಆಗಬೇಕಿದೆ’ ಎಂದರು. 

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ವಿಧಾನ ಪರಿಷತ್ ಸದಸ್ಯನಾಗಿ ಬೆಂಗಳೂರಿನವನಾದ ನನಗೆ ಯಾದಗಿರಿಯನ್ನು ನೋಡಲ್ ಜಿಲ್ಲೆಯಾಗಿ ಆಯ್ಕೆ ಮಾಡಿಕೊಳ್ಳಲು ಪ್ರೇರಣೆ ಆಗಿದ್ದು ವೆಂಕಟರೆಡ್ಡಿ ಮುದ್ನಾಳ ಅವರು. ಕ್ಷೇತ್ರದ ಜನರು ಮುದ್ನಾಳ ಕುಟುಂಬಕ್ಕೆ ಶಕ್ತಿ ಕೊಡಬೇಕಿದೆ’ ಎಂದು ಹೇಳಿದರು.

ಅಬ್ಬೆತುಮಕೂರಿನ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಾತನಾಡಿ, ‘ವೆಂಕಟರೆಡ್ಡಿ ಅವರು ಶಾಸಕರಾಗಿದ್ದರೂ ತಮ್ಮ ಸರಳವಾದ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳದ ಸರಳ ಸ್ವಭಾವದವರು. ಸರಳತೆಯ ಮೂಲಕ ಎಲ್ಲರೊಂದಿಗೆ ಬೆರೆಯುತ್ತಿದ್ದರು’ ಎಂದರು.

ಅಭಿಮಾನಿ ಬಳಗದಿಂದ ರಕ್ತದಾನ, ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. 

ಕಾರ್ಯಕ್ರಮದಲ್ಲಿ ಹೆಡಗಿಮದ್ರಾದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಗುರುಮಠಕಲ್‌ನ ಮುರುಘರಾಜೇಂದ್ರ ಸ್ವಾಮೀಜಿ, ನೇರಡಗಂಬ ಪಂಚಮ ಸಿದ್ದಲಿಂಗ ಸ್ವಾಮೀಜಿ, ವಿಶ್ವಾರಾಧ್ಯ ಸ್ವಾಮಿಜಿ, ಶಾಸಕರಾದ ಬಸವರಾಜ‌ ಮತ್ತಿಮಡು, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ, ಜೆಡಿಎಸ್ ಮುಖಂಡ ದೊಡ್ಡಪಗೌಡ ಪಾಟೀಲ ನರಿಬೋಳ, ಪ್ರಮುಖರಾದ ರಾಚನಗೌಡ ಮುದ್ನಾಳ, ಹಣಮಂತರಡ್ಡಿ ಮುದ್ನಾಳ, ಮಲ್ಲಣ್ಣಗೌಡ ಪಾಟೀಲ ಉಪಸ್ಥಿತರಿದ್ದರು.

ಅಜ್ಜನಾದ ವಿಶ್ವನಾಥರೆಡ್ಡಿ ಮುದ್ನಾಳ ಅವರು 371 (ಜೆ) ಜಾರಿಗಾಗಿ ಹೋರಾಟ ಆರಂಭಿಸಿದ್ದರು. ನಮ್ಮ ತಂದೆ ವೆಂಕಟರೆಡ್ಡಿ ಅವರು ಅಜ್ಜನ ಮಾರ್ಗದರ್ಶನದಲ್ಲಿ ನಡೆದರು
ಮಹೇಶರೆಡ್ಡಿ ಮುದ್ನಾಳ ವೆಂಕಟರೆಡ್ಡಿ ಪುತ್ರ
ವೆಂಕಟರೆಡ್ಡಿ ಅವರು ಕ್ಷೇತ್ರದ ಯಾವುದೆ ಕೆಲಸಗಳು ಆಗಬೇಕಾದರೂ ಮುಖ್ಯಮಂತ್ರಿಗಳ ಬಳಿಗೆ ನನ್ನ ಕರೆದುಕೊಂಡು ಹೋಗುತ್ತಿದ್ದರು
ರಾಜುಗೌಡ ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.