ADVERTISEMENT

ಯಾದಗಿರಿ | ಕೃಷಿ ಪ್ರಧಾನ ಜಿಲ್ಲೆಯಲ್ಲಿ ವೈದ್ಯರ ಕೊರತೆಯೇ ಪ್ರಧಾನ

ಮಲ್ಲಿಕಾರ್ಜುನ ನಾಲವಾರ
Published 15 ಸೆಪ್ಟೆಂಬರ್ 2025, 5:50 IST
Last Updated 15 ಸೆಪ್ಟೆಂಬರ್ 2025, 5:50 IST
<div class="paragraphs"><p>ಕಾಲುಬಾಯಿ ರೋಗ ಲಸಿಕಾ ಅಭಿಯಾನದಡಿ ಪಶು <ins>ವೈದ್ಯರು</ins>&nbsp;ಎತ್ತಿಗೆ ಲಸಿಕೆ ಹಾಕಿದರು (ಸಂಗ್ರಹ ಚಿತ್ರ)</p></div>

ಕಾಲುಬಾಯಿ ರೋಗ ಲಸಿಕಾ ಅಭಿಯಾನದಡಿ ಪಶು ವೈದ್ಯರು ಎತ್ತಿಗೆ ಲಸಿಕೆ ಹಾಕಿದರು (ಸಂಗ್ರಹ ಚಿತ್ರ)

   

ಯಾದಗಿರಿ: ಕೃಷ್ಣೆ– ಭೀಮಾ ನದಿಗಳ ತೀರ ಪ್ರದೇಶ ಹೊಂದಿರುವ ಯಾದಗಿರಿ ಕೃಷಿ ಪ್ರಧಾನ ಜಿಲ್ಲೆ. ಕೃಷಿ ಚಟುವಟಕೆ ಮತ್ತು ಗೃಹ ಬಳಕೆಯ ಹೈನುಗಾರಿಕೆಗಾಗಿ ಪಶುಗಳ ಪಾತ್ರ ಪ್ರಮುಖವಾಗಿದೆ. ಕುರುಚಲು ಬೆಟ್ಟಗಳು ಹೊಂದಿರುವುದು ಕುರಿ ಸಾಕಾಣಿಯೂ ಪೂರಕವಾಗಿದೆ. ಆದರೆ, ಇಲ್ಲಿಯ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯೇ ಪ್ರಧಾನವಾಗಿದೆ.

ವೈದ್ಯರ ಕೊರತೆ ಹಾಗೂ ಮೂಲಸೌಕರ್ಯಗಳ ಅಲಭ್ಯತೆಯಿಂದ ಜಿಲ್ಲೆಯ ಪಶು ಆಸ್ಪತ್ರೆಗಳು ನಾನಾ ಸಮಸ್ಯೆಗಳಿಂದ ಬಳಲುತ್ತಿವೆ. ಇದರಿಂದಾಗಿ ಜಾನುವಾರುಗಳಿಗೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಹುದ್ದೆಗಳ ಭರ್ತಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕದ ತಟ್ಟಿದರೂ ಜಿಲ್ಲೆಗೆ ಸಿಗುತ್ತಿಲ್ಲ. 

ADVERTISEMENT

ಜಿಲ್ಲಾ ಕೇಂದ್ರದಲ್ಲಿ ಒಂದು ಪಾಲಿ ಕ್ಲಿನಿಕ್, ತಾಲ್ಲೂಕು ಕೇಂದ್ರಗಳಲ್ಲಿ 15 ಪಶು ಆಸ್ಪತ್ರೆ, 42 ಪಶು ಚಿಕಿತ್ಸಾಲಯ, 39 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಸೇರಿ ಒಟ್ಟು 97 ಪಶು ವೈದ್ಯಕೀಯ ಕೇಂದ್ರಗಳಿವೆ. ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಜಿಲ್ಲೆಯ ಚಿಕಿತ್ಸಾ ಕೇಂದ್ರಗಳಿಗೆ ಒಟ್ಟು 393 ಹುದ್ದೆಗಳು ಮಂಜೂರು ಆಗಿವೆ. ಅವುಗಳಲ್ಲಿ 175 ಹುದ್ದೆಗಳು ಭರ್ತಿಯಾಗಿದ್ದು, 218 ಹುದ್ದೆಗಳು ಖಾಲಿ ಇರುವುದರಿಂದ ಜಾನುವಾರಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ.

ಪಶುಗಳಿಗೆ ಚಿಕಿತ್ಸೆ ಕೊಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪಶು ವೈದ್ಯಾಧಿಕಾರಿಗಳು, ಹಿರಿಯ ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಪರೀಕ್ಷಕರು, ಪಶು ವೈದ್ಯಕೀಯ ಸಹಾಯಕರು ಹಾಗೂ ಪ್ರಾಣಿ ಸಹಾಯಕರಾಗಿ ಕಾರ್ಯನಿರ್ವಹಿಸುವ ‘ಡಿ’ ದರ್ಜೆ ನೌಕರರ ಹುದ್ದೆಗಳು ಹೆಚ್ಚಿನ ಸಂಖ್ಯೆಯಲ್ಲಿ ಖಾಲಿ ಇವೆ. 

ವೈದ್ಯರ ಮತ್ತು ಸಿಬ್ಬಂದಿಯ ಕೊರತೆಯಿಂದಾಗಿ ಎರಡು– ಮೂರು ಜನ ಮಾಡಬೇಕಾದ ಕೆಲಸವನ್ನು ಒಬ್ಬರೇ ನಿಭಾಯಿಸುತ್ತಿದ್ದು, ಬಹುತೇಕ ವೈದ್ಯರು ಒತ್ತಡದಿಂದ ಬಳಲುತ್ತಿದ್ದಾರೆ. ಪ್ರಾಣಿ ಸಹಾಯಕರು ಇಲ್ಲದಿರುವುದರಿಂದ ಚಿಕಿತ್ಸೆಗೆ ಬೇಕಾದ ಸಿದ್ಧತೆಗಳನ್ನು ವೈದ್ಯರೇ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವೆಡೆ ಕೆಳ ಹಂತದವರಿಗೆ ತರಬೇತಿಯನ್ನು ಕೊಟ್ಟು ಪ್ರಾಣಿಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಹುದ್ದೆಗಳ ಭರ್ತಿಗೆ ಮನವಿ ಮಾಡಿಕೊಂಡು ಹೋಗುತ್ತಿದ್ದೇವೆ. ನೇಮಕಾತಿಯು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ ಎನ್ನುತ್ತಾರೆ ವೈದ್ಯರು.

ಕಾಲು ಬೇನೆ, ಬಾಯಿ ಬೇನೆ ಮತ್ತಿತರ ರೋಗಗಳ ನಿಯಂತ್ರಣಕ್ಕೆ ವರ್ಷದಲ್ಲಿ ಹಲವು ಬಾರಿ ಜಾನುವಾರುಗಳಿಗೆ ಶಿಬಿರ ಆಯೋಜಿಸಿ, ಲಸಿಕೆಗಳನ್ನು ನೀಡಿ ಚಿಕಿತ್ಸೆಯೂ ಕೊಡಬೇಕಾಗುತ್ತದೆ. ಕೃತಕ ಗರ್ಭಧಾರಣೆಯಂತಹ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿರುವ ಜಾನುವಾರುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ಇರುವ ಸಿಬ್ಬಂದಿ ಪರದಾಡುತ್ತಿದ್ದಾರೆ ಎಂದು ಅಲವತ್ತುಕೊಂಡರು. 

13.51 ಲಕ್ಷ ಪ್ರಾಣಿಗಳು 20ನೇ ಜಾನುವಾರು ಗಣತಿ ಪ್ರಕಾರ ಯಾದಗಿರಿ ಜಿಲ್ಲೆಯಲ್ಲಿ 13.51 ಲಕ್ಷ ಪ್ರಾಣಿಗಳಿವೆ. ಅವುಗಳಲ್ಲಿ 2.33 ಲಕ್ಷ ದನಗಳು 57438 ಎಮ್ಮೆಗಳು 4.37 ಲಕ್ಷ ಕುರಿಗಳು 2.56 ಮೇಕೆಗಳು 20504 ಹಂದಿಗಳು 19621 ನಾಯಿಗಳು 3.26 ಲಕ್ಷ ಕೋಳಿ 126 ಮೊಲ ಹಾಗೂ 396 ಇತರೆ ಪ್ರಾಣಿಗಳು ಸೇರಿ ಒಟ್ಟು 13.51 ಪ್ರಾಣಿಗಳಿವೆ.

‘ಹೊರಗುತ್ತಿಗೆ ನೌಕರರ ಮೊರೆ’ ‘ಖಾಲಿ ಇರುವ ಡಿ ಗ್ರೂಪ್‌ನ ಹುದ್ದೆಗಳ ಪೈಕಿ 71 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಪಶುವೈದ್ಯ ಸೇವೆಗಳ ಉಪ ನಿರ್ದೇಶಕ (ಆಡಳಿತ) ಡಾ ರಾಜು ಬಿ.ದೇಶಮುಖ ‘ಪ್ರಜಾವಾಣಿ’ಗೆ ತಿಳಿಸಿದರು. ‘ಪಶುವೈದ್ಯಾಧಿಕಾರಿಗಳ ಹುದ್ದೆಗೂ 10 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಇನ್ನಷ್ಟು ಹುದ್ದೆಗಳು ಖಾಲಿ. ‘ಡಿ’ ಗ್ರೂಪ್‌ನವರಿಗೆ ಅಗತ್ಯವಾದ ತರಬೇತಿ ಕೊಟ್ಟು ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಜೂರಾದ ಎಲ್ಲ ಹುದ್ದೆಗಳು ಭರ್ತಿಯಾದರೆ ಲಕ್ಷಾಂತರ ಜಾನುವಾರುಗಳಿಗೆ ಇನ್ನಷ್ಟು ವೈದ್ಯಕೀಯ ಚಿಕಿತ್ಸೆ ಸಿಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.