
ವಡಗೇರಾ: ‘ಪ್ರತಿಯೊಂದು ಗ್ರಾಮದ ಸ್ವಚ್ಛತೆ ಹಾಗೂ ನಿರ್ವಹಣೆ ಗ್ರಾಮ ಪಂಚಾಯಿತಿಯ ಜವಾಬ್ದಾರಿಯಾಗಿದೆ. ಅದಕ್ಕಾಗಿ ಗ್ರಾಪಂ ಸ್ವಚ್ಛತಾ ಸಿಬ್ಬಂದಿ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದಾಗ ಮಾತ್ರ ಪರಿಸರ ಉತ್ತಮವಾಗಿರುತ್ತದೆ’ ಎಂದು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಹೇಳಿದರು.
ಜಿಲ್ಲಾ ಪಂಚಾಯಿತಿ ಯಾದಗಿರಿ ತಾಲ್ಲೂಕು ಪಂಚಾಯಿತಿ ವಡಿಗೇರಾ ಹಾಗೂ ಸಾಹಸ್ ಸಂಸ್ಥೆ ಮತ್ತು ರೈನ್ ಮ್ಯಾಟರ ಫೌಂಡೇಶನ್, ಸ್ವಚ್ಛ ಭಾರತ ಮಿಷನ್ (ಗ್ರಾ) ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಯೋಗ ಅಭಿಯಾನ ಇವರ ಸಹಯೋಗದಲ್ಲಿ ಬುಧುವಾರ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮರ್ಥ್ಯ ಅಭಿವೃದಿ ತರಬೇತಿಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು.
‘ಸ್ವಚ್ಚತಾ ಸಿಬ್ಬಂದಿಗಳು ಗ್ರಾಮದ ಪ್ರತಿ ಮನೆ ಮತ್ತು ಇತರೆ ಮಳಿಗೆಗಳಿಂದ ಉತ್ಪತ್ತಿಯಾಗಿ ಹೊರಹಾಕುತ್ತಿರುವ ಘನತ್ಯಾಜ್ಯವನ್ನು (ಒಣ ಕಸ) ಸೂಕ್ತವಾಗಿ ವಿಲೇವಾರಿ ಮಾಡಲು ಜನರಲ್ಲಿ ಜಾಗೃತಿ ಮೂಡಿಸಬೇಕು. ಇದರ ಜೊತೆ ಪ್ಲಾಸ್ಟಿಕ್ ಬಳಕೆಯ ವಸ್ತುಗಳನ್ನು ತ್ಯಜಿಸಿ, ಮರು ಬಳಕೆಯಾಗುವ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಲು ಗ್ರಾಮಸ್ಥರಲ್ಲಿ ಗ್ರಾಪಂ ಸಿಬ್ಬಂದಿ ತಿಳಿ ಹೇಳಬೇಕು’ ಎಂದರು.
‘ಗ್ರಾಮ ಪಂಚಾಯಿತಿಯ ಎಂಬಿಕೆ, ಪಶು ಸಖಿ, ಕೃಷಿ ಸಖಿ, ಸ್ವ-ಸಹಾಯ ಸಂಘದ ಪ್ರತಿಯೊಬ್ಬ ಸದಸ್ಯರು ತ್ಯಾಜ್ಯವನ್ನು ಸೂಕ್ತ ವಿಲೇವಾರಿ ಮಾಡಲು ಸಹಕರಿಸಬೇಕು’ ಎಂದು ಹೇಳಿದರು.
ಜಿಲ್ಲಾ ಐಇಸಿ ಸಂಯೋಜಕ ಶಿವಕುಮಾರ ತರಬೇತಿಯ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ವೇಳೆ ಸಾಹಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ರವಿಚಂದ್ರ ಚಟ್ನಳ್ಳಿ, ಸಂಜೀವಿನಿ ಯೋಜನೆಯ ಟಿಪಿಎಂ ಬಸಲಿಂಗಪ್ಪ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ದೀಕ್ಷಿತ, ವಿಷಯ ನಿರ್ವಾಹಕರಾದ ಈಶ್ವರಪ್ಪ, ಪವನ್ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಸ್ವಚ್ಛತಾ ವಾಹಿನಿ ಸಿಬ್ಬಂದಿಗಳು ಹಾಗೂ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.