ADVERTISEMENT

ಸುರಪುರ: ಒಂದೊಂದು ಊರಿನ ಹಿಂದೆ ಒಂದೊಂದು ಇತಿಹಾಸ

ಸುರಪುರ ತಾಲ್ಲೂಕು ಭರಪೂರ ಉಪನಾಮ, ವಿಶಿಷ್ಟ ಹೆಸರುಗಳ ಗ್ರಾಮಗಳ ಆಗರ

ಅಶೋಕ ಸಾಲವಾಡಗಿ
Published 12 ಜೂನ್ 2025, 5:17 IST
Last Updated 12 ಜೂನ್ 2025, 5:17 IST
ಹೆಬ್ಬಾಳ (ಬಿ) ಗ್ರಾಮದ ಹೆಸರಿನ ಫಲಕ ಹಾಕಿರುವುದು
ಹೆಬ್ಬಾಳ (ಬಿ) ಗ್ರಾಮದ ಹೆಸರಿನ ಫಲಕ ಹಾಕಿರುವುದು   

ಸುರಪುರ: ಅವಿಭಜಿತ ಸುರಪುರ ತಾಲ್ಲೂಕು 201 ಹಳ್ಳಿಗಳನ್ನು ಹೊಂದಿತ್ತು. 2013ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಹುಣಸಗಿ ಪ್ರತ್ಯೇಕ ತಾಲ್ಲೂಕಾಗಿ ರಚನೆಯಾಯಿತು.

ಅವಿಭಜಿತ ಸುರಪುರ ತಾಲ್ಲೂಕಿನಲ್ಲಿ ವಿಚಿತ್ರ ಮತ್ತು ವಿಶಿಷ್ಟ ಹೆಸರುಗಳುಳ್ಳ, ಭರಪೂರ ಉಪನಾಮಗಳನ್ನು ಹೊಂದಿದ, ಒಂದೊಂದು ಗ್ರಾಮಕ್ಕೂ ತನ್ನದೇ ಆದ ಇತಿಹಾಸಯುಳ್ಳ ಹಲವಾರು ಹಳ್ಳಿಗಳು ಇವೆ.

ಸರ್ಕಾರಿ ದಾಖಲಾತಿಯಲ್ಲಿ ಒಂದು ಹೆಸರು ಇದ್ದರೆ ಜನರು ಕರೆಯುವ ಹೆಸರು ಹೆಚ್ಚು ಪ್ರಚಲಿತದಲ್ಲಿರುತ್ತದೆ. ಇದರಿಂದ ಬಹಳಷ್ಟು ಸಂದರ್ಭದಲ್ಲಿ ವಿಶೇಷವಾಗಿ ಆಸ್ತಿ ಖರೀದಿ, ಮಾರಾಟ ಇತರ ಸಮಯಗಳಲ್ಲಿ ಜನರು ಗೊಂದಲಕ್ಕೀಡಾಗುತ್ತಾರೆ.

ADVERTISEMENT

ಬಹಳಷ್ಟು ಗ್ರಾಮಗಳ ಮುಂದೆ ಕಂಸದಲ್ಲಿ ಜೆ, ಕೆ, ಬಿ, ಡಿ, ಎಂ, ಎಸ್.ಎಚ್, ಎಸ್.ಕೆ. ಇತರ ಉಪನಾಮಗಳು ಸೇರಿಕೊಂಡಿವೆ. ಈ ಉಪನಾಮಗಳು ಬಹುತೇಕ ಒಂದೇ ಹೆಸರಿನ ಹಳ್ಳಿಗಳನ್ನು ಪ್ರತ್ಯೇಕವಾಗಿ ಗುರುತಿಸಲು ಸಹಾಯ ಮಾಡುತ್ತವೆ.

ಜೆ ಅಂದರೆ ಜಾಗೀರ, ಕೆ ಅಂದರೆ ಕುರ್ಜ ಅಂದರೆ ಚಿಕ್ಕದು, ಬಿ ಅಂದರೆ ಬುರ್ಜ ಅಂದರೆ ದೊಡ್ಡದು, ಡಿ ಅಂದರೆ ಡೆಜಾರ್ಟ್ ಅಂದರೆ ಜನ ವಸತಿ ಇರದ, ಬಿ ಅಂದರೆ ಬೆಂಡರ್, ಮತ್ತಷ್ಟು ಹಳ್ಳಿಗಳಲ್ಲಿ ಕೆ ಅಂದರೆ ಕುರುಬ, ಎಂ ಅಂದರೆ ಮುನೀರ, ಎಸ್.ಎಚ್. ಅಂದರೆ ಸರಹದ್ ಹಸನಾಪುರ, ಎಸ್.ಎಚ್. ಅಂದರೆ ಸರಹದ್ ಕೊಡೇಕಲ್ ಎಂಬ ವಿವರಣೆಯನ್ನು ಕೊಡಲಾಗುತ್ತದೆ.

ಹೆಬ್ಬಾಳ ಎಂಬ ಎರಡು ಗ್ರಾಮಗಳು ಅನತಿ ದೂರದಲ್ಲಿವೆ. ಇವುಗಳಿಗೆ ಹೆಬ್ಬಾಳ ಕೆ ಮತ್ತು ಹೆಬ್ಬಾಳ ಬಿ ಹೆಸರಿನಿಂದ ಕರೆಯಲಾಗುತ್ತದೆ. ಮುದನೂರ ಕೆ ಮತ್ತು ಮುದನೂರ ಬಿ ಎಂಬ ಗ್ರಾಮಗಳು ಅಕ್ಕಪಕ್ಕದಲ್ಲಿವೆ. ಹಿಂದೆ ಮಹಾಮಾರಿ ರೋಗದ ಸಮಯದಲ್ಲಿ ಇಡೀ ಗ್ರಾಮವೇ ವಲಸೆ ಹೋದ ಕಾರಣ ಅಂತಹ ಗ್ರಾಮಗಳಾದ ಕಂಪಾಪುರ, ರಾಜಾಪುರ, ಕೊಜ್ಜಾಪುರ, ಕಾಗರಾಳ ಹೆಸರಿನ ಮುಂದೆ ಡಿ. ಎಂದು ನಮೂದಿಸಲಾಗುತ್ತದೆ.

ತಳ್ಳಳ್ಳಿ ಎಂಬ ಎರಡು ಗ್ರಾಮಗಳಿವೆ. ಒಂದು ಊರಿನಲ್ಲಿ ಕುರುಬ ಜನಾಂಗ ಹೆಚ್ಚಾಗಿದೆ. ಮತ್ತೊಂದು ಊರಿನಲ್ಲಿ ಬೇಡರ ಸಮಾಜದ ಜನ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಗಾಗಿ ಈ ಊರುಗಳ ಮುಂದೆ ಕೆ ಮತ್ತು ಬಿ ಎಂದು ಗುರುತಿಸಲಾಗುತ್ತದೆ.

ಖಾನಾಪುರ, ಶಖಾಪುರ, ಲಿಂಗದಳ್ಳಿ, ಬೇವಿನಾಳ ಗ್ರಾಮಗಳ ಮುಂದೆ ಎಸ್.ಎಚ್. ಎಂದು ದಾಖಲಿಸುತ್ತಾರೆ. ತಾಲ್ಲೂಕಿನ ಮತ್ತೊಂದು ಬದಿಯಲ್ಲಿ ಇರುವ ಇದೇ ಹೆಸರಿನ ಗ್ರಾಮಗಳ ಮುಂದೆ ಎಸ್.ಕೆ. ಎಂದು ಗುರುತಿಸುತ್ತಾರೆ.

ಅಗ್ನಿ, ಬೂದಿಹಾಳ, ಗುಂಡಲಗೇರಾ, ಕರಿಬಾವಿ, ಹೆಗ್ಗಣದೊಡ್ಡಿ, ಕಾಚಾಪುರ, ತಲವಾರಗೇರಿ, ಕುಪ್ಪಿ, ಕಡದರಾಳ, ಹಾಲಗೇರಿ, ಹಾಲಬಾವಿ, ತೀರ್ಥ, ತಿಂಥಣಿ, ತೋಳದಿನ್ನಿ, ವಣಕಿಹಾಳ, ವಜ್ಜಲ, ಮುಷ್ಠಳ್ಳಿ, ದಾಸರಗೋಟ.. ಇಂತಹ ವಿಶಿಷ್ಟ ಹೆಸರು ಹೊಂದಿರುವ ಹಲವಾರು ಗ್ರಾಮಗಳು ಇವೆ.

ಕೆಲವು ಊರುಗಳು ಹೆಸರುಗಳು ನಾಗರಿಕರ ಬಾಯಿಯಲ್ಲಿ ಅಪಭ್ರಂಶಗೊಂಡು ವಿಚಿತ್ರ ರೂಪಾಂತರ ಹೊಂದಿದೆ. ಮದಲಿಂಗನಾಳ ಗ್ರಾಮಕ್ಕೆ ಮನ್ಯಾಳ ಅಂತಲೂ, ಕಲ್ಲದೇವನಹಳ್ಳಿ ಗ್ರಾಮಕ್ಕೆ ಕದ್ನೆಳ್ಳಿ ಅಂತಲೂ ಕರೆಯುತ್ತಾರೆ. ಚೌಡೇಶ್ವರಿಹಾಳ ಗ್ರಾಮದ ಹೆಸರು ಸಡಸ್ರಾಳ ಎಂದು, ಹುಣಸಗಿ ಹೆಸರು ಹುಂಚಗಿ ಎಂದೂ ಕರೆಯಲಾಗುತ್ತದೆ.

ಒಂದೊಂದು ಊರಿಗೆ ಎರಡೆರಡು ಹೆಸರುಗಳು ಇವೆ. ಸತ್ಯಂಪೇಟೆಗೆ ವಣಕಿಹಾಳ ಎಂದು ಕರೆಯುತ್ತಾರೆ. ಖಾನಾಪುರ ಎಸ್‍ಎಚ್ ಗ್ರಾಮಕ್ಕೆ ರುಕ್ಮಾಪುರ ಎನ್ನುತ್ತಾರೆ. ಸುರಪುರಕ್ಕೆ ಶೋರಾಪುರ ಎಂದು ಕರೆಯುತ್ತಾರೆ. ಶೋರಾಪುರ ಎಂಬ ಹೆಸರೇ ಕಂದಾಯ ಇಲಾಖೆಯ ದಾಖಲೆಯಲ್ಲಿದೆ. ಅರಕೇರಾ ಕೆ. ಗ್ರಾಮವನ್ನು ಬಿಜಾಸಪುರ ಅಂತಲೂ ಉಚ್ಚರಿಸುತ್ತಾರೆ.
ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಗೋಸಲ ದೊರೆಗಳು ಆಡಳಿತ ಮಾಡಿದ್ದಾರೆ. ತಮ್ಮ ಪಟ್ಟದರಸಿಯರು, ರಾಣಿಯರ ಹೆಸರಿನಲ್ಲಿ ಅನೇಕ ಊರುಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ರಂಗಂಪೇಟೆ, ನರಸಿಂಗಪೇಟೆ, ಅಮ್ಮಾಪುರ, ರುಕ್ಮಾಪುರ ಪ್ರಮುಖವಾದವು.

ಕಕ್ಕೇರಾ ಹೋಬಳಿ ದೊಡ್ಡಿಗಳಿಂದ ಕೂಡಿದೆ. ರೈತ ಕುಟುಂಬಗಳು ತಮ್ಮ ಜಮೀನಿನಲ್ಲಿ ಮನೆ ಮಾಡುತ್ತಾರೆ. ಕ್ರಮೇಣ ಆ ಮನೆಗಳು ಒಂದಕ್ಕೆ ನಾಲ್ಕು, ನಾಲ್ಕರಿಂದ ಹತ್ತು ಆಗುತ್ತವೆ. ಬರುಬರುತ್ತಾ ಒಂದು ಸಣ್ಣ ಗ್ರಾಮವೇ ಅಲ್ಲಿ ನಿರ್ಮಾಣವಾಗುತ್ತದೆ. ಅದನ್ನು ದೊಡ್ಡಿಯೆಂದು ಕರೆಯಲಾಗುತ್ತದೆ.

ಅವುಗಳಲ್ಲಿ ಜಂಪರದೊಡ್ಡಿ, ಕುರೇರದೊಡ್ಡಿ, ಬೂದಗುಂಪೇರದೊಡ್ಡಿ, ಪಿರಗಾರದೊಡ್ಡಿ, ಆರ್ಯಶಂಕರದೊಡ್ಡಿ, ವಾರೇರದೊಡ್ಡಿ, ಗುಮೇದಾರದೊಡ್ಡಿ, ದಳಾರದೊಡ್ಡಿ ಇಂತಹ ಅನೇಕ ದೊಡ್ಡಿಗಳಿವೆ. ಈ ದೊಡ್ಡಿಗಳನ್ನು ಈಗ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆದಿವೆ.

ಹೀಗೆ ಹತ್ತು ಹಲವು ವೈಚಿತ್ರ್ಯ, ವಿಶೇಷ, ವೈಶಿಷ್ಟಗಳ ಗ್ರಾಮಗಳನ್ನು ತನ್ನ ಒಡಲಿನಲ್ಲಿ ಬೆಸೆದುಕೊಂಡಿರುವ ಸುರಪುರ ರಾಜ್ಯದಲ್ಲೇ ಗಮನ ಸೆಳೆಯುತ್ತದೆ.

ಬಸ್ ತಂಗುದಾಣಕ್ಕೆ ಹೆಬ್ಬಾಳ (ಕೆ) ಹೆಸರು ಬರೆದಿರುವುದು
ಆಯಾ ಗ್ರಾಮಸ್ಥರಿಗೆ ತಮ್ಮ ಊರಿನ ಬಗ್ಗೆ ಅತೀವ ಅಭಿಮಾನ ಹೆಮ್ಮೆ ಇರುತ್ತದೆ. ತಮ್ಮ ಗ್ರಾಮದ ಹೆಸರು ಅಪಭ್ರಂಶಗೊಂಡ ಬಗ್ಗೆ ಎರಡೆರಡು ಹೆಸರಿನಿಂದ ಕರೆಯುವ ಬಗ್ಗೆ ಅವರಲ್ಲಿ ಅಸಮಾಧಾನ ಇದ್ದೇ ಇದೆ
ಕನಕಪ್ಪ ವಾಗಣಗೇರಿ ಸಾಹಿತಿ
ಸುರಪುರ ತಾಲ್ಲೂಕಿನ ಎಲ್ಲ ಊರುಗಳಿಗೂ ತನ್ನದೇ ಆದ ಇತಿಹಾಸ ಇದೆ. ಇದರ ಬಗ್ಗೆ ಸಂಶೋಧನೆ ಆಗಬೇಕು. ಒಂದೇ ಸೂಕ್ತ ಹೆಸರಿನಿಂದ ಕರೆಯುವಂತೆ ಆಗಬೇಕು. ಮುಖ್ಯವಾಗಿ ಶೋರಾಪುರಕ್ಕೆ ಸುರಪುರ ಎಂದು ಮರುನಾಮಕರಣ ಆಗಬೇಕು
ಶರಣಬಸಪ್ಪ ಯಾಳವಾರ ಕಸಾಪ ತಾಲ್ಲೂಕು ಅಧ್ಯಕ್ಷ

‘ಸುರಪುರ’ ದಾಖಲಿಸುವ ಕೂಗು

ಸುರಪುರ ದೇವಸ್ಥಾನಗಳ ತವರು. ಇಲ್ಲಿನ ಅರಸನಿಗೆ ತಿರುಮಲೆಯ ವೆಂಕಟೇಶ ದರ್ಶನ ನೀಡಿದ ವೃತ್ತಾಂತ ಇದೆ. ಧಾರ್ಮಿಕತೆಗೆ ಹೆಸರುವಾಸಿ. ‘ಸುರ’ ಎಂದರೆ ದೇವರು ‘ಪುರ’ ಎಂದರೆ ಊರು. ದೇವತೆಗಳು ವಾಸಿಸುವ ನಗರ ಎಂಬ ಅರ್ಥ. ಆಂಗ್ಲರು ಇಲ್ಲಿ ಕಾಲಿಡುತ್ತದ್ದಂತೆ ಸುರಪುರ ಶೋರಾಪುರ ಆಗಿ ಅಪಭ್ರಂಶಗೊಂಡಿದೆ. ಶೋರಾಪುರ ಎಂಬ ಹೆಸರೇ ಕಂದಾಯ ದಾಖಲೆಗಳಲ್ಲಿ ಉಳಿದುಕೊಂಡಿದೆ. ಸುರಪುರ ಎಂದು ಮರುನಾಮಕರಣ ಮಾಡಬೇಕೆನ್ನುವ ಕೂಗು ಹಿಂದಿನಿಂದಲೂ ಇದೆ. ನಗರಸಭೆ ಸದಸ್ಯ ವೇಣುಮಾಧವನಾಯಕ ನಗರಸಭೆಯಲ್ಲಿ ಸುರಪುರ ಎಂದು ಹೆಸರು ಬದಲಿಸುವ ಬಗ್ಗೆ ನಿರ್ಣಯ ಮಂಡಿಸಿದ್ದಾರೆ. ಈಗ ಕಡತ ಸರ್ಕಾರದ ಅಂಗಳದಲ್ಲಿದೆ.

ರಾಣಿಯರ ಹೆಸರಿನಲ್ಲಿವೆ ಅನೇಕ ಊರುಗಳು...

ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಗೋಸಲ ದೊರೆಗಳು ಆಡಳಿತ ಮಾಡಿದ್ದಾರೆ. ತಮ್ಮ ಪಟ್ಟದರಸಿಯರು, ರಾಣಿಯರ ಹೆಸರಿನಲ್ಲಿ ಅನೇಕ ಊರುಗಳನ್ನು ನಿರ್ಮಿಸಿದ್ದಾರೆ. ಅವುಗಳಲ್ಲಿ ರಂಗಂಪೇಟೆ, ನರಸಿಂಗಪೇಟೆ, ಅಮ್ಮಾಪುರ, ರುಕ್ಮಾಪುರ ಪ್ರಮುಖವಾದವು.

ಕಕ್ಕೇರಾ ಹೋಬಳಿ ದೊಡ್ಡಿಗಳಿಂದ ಕೂಡಿದೆ. ರೈತ ಕುಟುಂಬಗಳು ತಮ್ಮ ಜಮೀನಿನಲ್ಲಿ ಮನೆ ಮಾಡುತ್ತಾರೆ. ಕ್ರಮೇಣ ಆ ಮನೆಗಳು ಒಂದಕ್ಕೆ ನಾಲ್ಕು, ನಾಲ್ಕರಿಂದ ಹತ್ತು ಆಗುತ್ತವೆ. ಬರುಬರುತ್ತಾ ಒಂದು ಸಣ್ಣ ಗ್ರಾಮವೇ ಅಲ್ಲಿ ನಿರ್ಮಾಣವಾಗುತ್ತದೆ. ಅದನ್ನು ದೊಡ್ಡಿಯೆಂದು ಕರೆಯಲಾಗುತ್ತದೆ.

ಅವುಗಳಲ್ಲಿ ಜಂಪರದೊಡ್ಡಿ, ಕುರೇರದೊಡ್ಡಿ, ಬೂದಗುಂಪೇರದೊಡ್ಡಿ, ಪಿರಗಾರದೊಡ್ಡಿ, ಆರ್ಯಶಂಕರದೊಡ್ಡಿ, ವಾರೇರದೊಡ್ಡಿ, ಗುಮೇದಾರದೊಡ್ಡಿ, ದಳಾರದೊಡ್ಡಿ ಇಂತಹ ಅನೇಕ ದೊಡ್ಡಿಗಳಿವೆ. ಈ ದೊಡ್ಡಿಗಳನ್ನು ಈಗ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಯತ್ನಗಳು ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.