ADVERTISEMENT

‘ಬಡವರ ಪರ ಕೆಲಸ ಮಾಡುವ ಕಾಂಗ್ರೆಸ್‌ಗೆ ಮತ ನೀಡಿ’

ಮಿನಾಸಪುರ: ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 15:34 IST
Last Updated 27 ಏಪ್ರಿಲ್ 2024, 15:34 IST
ಗುರುಮಠಕಲ್ ಹತ್ತಿರದ ಮಿನಾಸಪುರ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ತೆಲಂಗಾಣದ ಮಕ್ತಾಲ್ ಶಾಸಕ ವಾಕಿಟಿ ಶ್ರೀಹರಿ ಮತಯಾಚಿಸಿದರು
ಗುರುಮಠಕಲ್ ಹತ್ತಿರದ ಮಿನಾಸಪುರ ಗ್ರಾಮದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ತೆಲಂಗಾಣದ ಮಕ್ತಾಲ್ ಶಾಸಕ ವಾಕಿಟಿ ಶ್ರೀಹರಿ ಮತಯಾಚಿಸಿದರು   

ಪ್ರಜಾವಾಣಿ ವಾರ್ತೆ

ಗುರುಮಠಕಲ್: ‘ದೇಶದಲ್ಲಿ ಬಡಜನರ ಅವಶ್ಯಕತೆ ಪೂರೈಸುವವರ ಮತ್ತು ಧರ್ಮದ ಭಾವನೆ ಕೆದಕಿ ಮತ ಯಾಚಿಸುವವರ ನಡುವೆ ಲೋಕಸಭಾ ಚುನಾವಣೆಯು ನಡೆಯುತ್ತಿದೆ. ಆದರೆ,  ಬಡ, ಹಿಂದುಳಿದ ಜನರ ಸಮಸ್ಯೆಗಳನ್ನು ಅರಿತು, ಬಡವರ ಏಳ್ಗೆಯ ಪರ ಕೆಲಸ ಮಾಡುತ್ತಿರುವ ಕಾಂಗ್ರೆಸ್‌ಗೆ ಮತ ನೀಡಬೇಕು’ ಎಂದು ತೆಲಂಗಾಣದ ಮಕ್ತಾಲ್ ಕ್ಷೇತ್ರದ ಶಾಸಕ ವಾಕಿಟಿ ಶ್ರೀಹರಿ ಮನವಿ ಮಾಡಿದರು.

ತಾಲ್ಲೂಕು ವ್ಯಾಪ್ತಿಯ ಮಾಧ್ವಾರ, ಯಲ್ಸತ್ತಿ, ಅನಪುರ, ಮಿನಾಸಪುರ, ಕೊಂಕಲ್, ಚಿನ್ನಕಾರ ಹಾಗೂ ಯಲ್ಲೇರಿ ಗ್ರಾಮಗಳಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿಗಳ ಮೂಲಕ ಬಡ ಜನರಿಗೆ ಆರ್ಥಿಕವಾಗಿ ಸಹಾಯ ಕಲ್ಪಿಸಲಾಗುತ್ತಿದೆ. ಕರ್ನಾಟಕದಂತೆ ತೆಲಂಗಾಣದಲ್ಲೂ ಈ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದ್ದು, ಕಾಂಗ್ರೆಸ್ ಸದಾ ಬಡ ಜನರ ಏಳ್ಗೆಗಾಗಿ ನುಡಿದಂತೆ ನಡೆಯುವ ಪಕ್ಷ ಎಂದರು.

ADVERTISEMENT

ಮಲ್ಲಿಕಾರ್ಜುನ ಖರ್ಗೆ ಅವರಿಂದ ಈ ಭಾಗದಲ್ಲಿ ನೀರು, ಶಿಕ್ಷಣ, ರಸ್ತೆ ಸೇರಿದಂತೆ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಅವರಂತ ಧೀಮಂತ ನಾಯಕನ್ನು ದೇಶಕ್ಕೆ ಕೊಟ್ಟದ್ದು ಗುರುಮಠಕಲ್ ಜನ. ನಿಮ್ಮ ಆಶೀರ್ವಾದದ ಬಲದಿಂದ ಅವರು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇಂತಹ ಸಮಯದಲ್ಲಿ ನೀವು ಅವರೊಂದಿಗೆ ಹಿಂದೆಂದಿಗಿಂತ ದುಪ್ಪಟ್ಟು ಶಕ್ತಿಯಾಗಿ ನಿಲ್ಲಬೇಕಿದೆ. ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ಅವರಿಗೆ ಹೆಚ್ಚು ಮತಗಳನ್ನು ನೀಡುವ ಮೂಲಕ ಖರ್ಗೆ ಅವರ ಕೈ ಬಲಪಡಿಸಬೇಕು ಎಂದು ಕೋರಿದರು.

ಮಾಜಿ ಸಚಿವ ಬಾಬುರಾವ ಚಿಂಚನಸೂರ ಮಾತನಾಡಿ, ರಾಧಾಕೃಷ್ಣ ದೊಡ್ಡಮನಿ ಅವರ ಗೆಲುವು ಕೇವಲ ಅವರೊಬ್ಬರದಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಲವಾಗಲಿದೆ. ನಮ್ಮೆಲ್ಲರ ಗೆಲುವೂ ಹೌದು. ರಾಧಾಕೃಷ್ಣ ದೊಡ್ಡಮನಿಯಂತಹ ಸಮಾಜಿಕ ಕಳಕಳಿಯ ಅಭ್ಯರ್ಥಿಗೆ ಮತ್ತು ಸಜ್ಜನ, ಸನ್ನಡತೆಯ ಅಭ್ಯರ್ಥಿಗೆ ಮತ ನೀಡಿದರೆ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ಹೇಳಿದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ, ಸಚಿವ ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸರೆಡ್ಡಿಗೌಡ ಅನಪುರ ಮತಯಾಚಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೃಷ್ಣ ಚಪೆಟ್ಲಾ, ನಿರಂಜನರೆಡ್ಡಿ, ಶ್ರೇಣಿಕಕುಮಾರ ದೋಖಾ, ಮರಿಗೌಡ ಹುಲಕಲ್, ಸಾಯಿಬಣ್ಣ ಬೋರಬಂಡಾ, ನಿತ್ಯಾನಂದ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಯುವ ಘಟಕದ ಬಾಬಾ, ರಘುನಾಥರೆಡ್ಡಿ ನಜರಾಪುರ, ಮೈಪಾಲರೆಡ್ಡಿ ಹತ್ತಿಕುಣಿ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು ಮತ್ತು ಸ್ಥಳೀಯ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.