ADVERTISEMENT

ಕುಷ್ಠರೋಗ ಮುಕ್ತ ಜಿಲ್ಲೆಗೆ ಪಣ ತೊಡಿ: ಶಾಸಕ ವೆಂಕಟರೆಡ್ಡಿ ಮುದ್ನಾಳ ಸೂಚನೆ

ಜಿಲ್ಲೆಯಲ್ಲಿ ಫೆ.13ರ ವರೆಗೆ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 1:55 IST
Last Updated 31 ಜನವರಿ 2021, 1:55 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿದರು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿದರು   

ಯಾದಗಿರಿ: ಗುಣಮುಖವಾಗುವ ಕುಷ್ಠರೋಗದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿದ್ದು, ಹಿಂದಿಗಿಂತಲೂ ಇದೀಗ ಕುಷ್ಠರೋಗಿಗಳನ್ನು ಸಕಾರಾತ್ಮಕವಾಗಿ ನೋಡುವ ಮನೋಭಾವ ಮೂಡಿದೆ ಎಂದು ಶಾಸಕ ವೆಂಕಟರೆಡ್ಡಿ ಮುದ್ನಾಳ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಆಡಿಟೋರಿಯಂ ಹಾಲ್‍ನಲ್ಲಿ ಜ.30ರಿಂದ ಫೆ.13ರ ವರೆಗೆ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಕುರಿತು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರ ದಿನಾಚರಣೆ ಅಂಗವಾಗಿ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿಅವರುಮಾತನಾಡಿದರು.

ಕುಷ್ಠರೋಗ ಅರಿವು ಕಾರ್ಯಕ್ರಮವನ್ನು ಕುಷ್ಠರೋಗ ನಿರ್ಮೂಲನಾ ದಿನವನ್ನಾಗಿ ಆಚರಿಸುವುದು ಉತ್ತಮ ಎಂದುಅಭಿಪ್ರಾಯಪಟ್ಟ ಶಾಸಕರು, ವೈದ್ಯರು, ನರ್ಸ್‍ಗಳು ಈ ರೋಗಿಗಳಿಗೆ ಉತ್ತಮ ಶುಶ್ರೂಷೆ ನೀಡಿ ಆರೈಕೆ ಮಾಡಿದ ಪರಿಣಾಮ ಕುಷ್ಠರೋಗವನ್ನು ನಿಯಂತ್ರಣಕ್ಕೆ ತರುತ್ತಿದ್ದಾರೆ. ಈ ರೋಗಿಗಳನ್ನು ಈ ಹಿಂದೆ ಊರ ಹೊರಗೆ ಇರಿಸುತ್ತಿದ್ದರು. ಇದೀಗ ಪರಿಸ್ಥಿತಿ ಬದಲಾಗಿದೆ. ಮತ್ತಷ್ಟು ಜಾಗೃತಿ ಮೂಡಿಸಿಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ ಮಾತನಾಡಿ, ನಗರದಲ್ಲಿರುವ ಕುಷ್ಠರೋಗಿಗಳ ಕಾಲೊನಿಗೆ ಭೇಟಿ ನೀಡಿದ್ದು, ಅಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಿಕೊಡುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಆಶಾ ಕಾರ್ಯಕರ್ತೆಯರು ಉತ್ತಮ ಆರೈಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಮಾತನಾಡಿ, ಆರಂಭದಲ್ಲಿಯೇ ಕುಷ್ಠರೋಗವನ್ನು ಪತ್ತೆ ಹಚ್ಚಿದ್ದಲ್ಲಿಉತ್ತಮ ಚಿಕಿತ್ಸೆ ನೀಡಿ ಗುಣಪಡಿಸಬಹುದು, ಕುಷ್ಠರೋಗ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ನಾವೆಲ್ಲರೂ ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣತೊಟ್ಟು ಕಾರ್ಯಪ್ರವೃತ್ತರಾಗಿದ್ದೇವೆ. ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ, ಸಂಪೂರ್ಣವಾಗಿ ಗುಣಪಡಿಸಬಹುದು. ನಮ್ಮ ಜಿಲ್ಲೆಯಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡು ಕುಷ್ಠರೋಗ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ತರಲು ನಾವು ಬದ್ದರಾಗೋಣ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ಕುಷ್ಠರೋಗ ಶಾಪವಲ್ಲ, ಯಾವುದೇ ಕಾರಣಕ್ಕೂ ಭಯ ಪಡಬಾರದು. ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಬಹುದು ಎಂದರು.

ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಭಗವಂತ ಅನ್ವರ್ ಮಾತನಾಡಿ, ಈ ರೋಗ ಬೇಗ ಪತ್ತೆಯಾದರೆಚಿಕಿತ್ಸೆಯೂ ಬೇಗನೇ ಆರಂಭಿಸಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಗಿರಿಜಮ್ಮ ಸದಾಶಿವಪ್ಪಗೌಡ ರೋಟ್ನಡಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಇಂದುಮತಿ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.

ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಗುಣಮುಖರಾದ ಕುಷ್ಠರೋಗಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದೇ ವೇಳೆ ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಕುಷ್ಠರೋಗದಿಂದ ಗುಣಮುಖರಾದ ಹಿರಿಯರಿಗೆ ಸನ್ಮಾನಿಸಿದರು.

ಆರೋಗ್ಯ ಶಿಕ್ಷಣಾಧಿಕಾರಿ ರಂಗಣ್ಣ ಪಾಟೀಲ ಸ್ವಾಗತಿಸಿದರು. ಶರಣು ಹೊಸಮನಿ ವಂದಿಸಿದರು.

* ವೈದ್ಯರು ಹಾಗೂ ರೋಗಿಗಳ ಸಹಕಾರದಿಂದ ರೋಗ ನಿರ್ಮೂಲನೆ ಮಾಡಬಹುದಾಗಿದೆ. ಆಶಾ ಕಾರ್ಯಕರ್ತೆಯರು ಮಾತ್ರೆ, ಔಷಧ ನೀಡುವ ಮೂಲಕ ಈ ರೋಗಿಗಳನ್ನು ಗುಣಪಡಿಸುತ್ತಿದ್ದಾರೆ.
-ವೆಂಕಟರೆಡ್ಡಿ ಮುದ್ನಾಳ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.