
ಸೈದಾಪುರ: ‘ಯುವಕರು ತಮ್ಮ ಮತದಾನದ ಹಕ್ಕುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸಬೇಕು’ ಎಂದು ಪ್ರಭಾರ ಉಪತಹಸೀಲ್ದಾರ್ ದಸ್ತಗಿರಿ ನಾಯಕ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಸಂಸ್ಥೆಯಲ್ಲಿ ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡ ‘ರಾಷ್ಟ್ರೀಯ ಮತದಾರರ ದಿನ’ ಆಚರಣೆ ಪ್ರತಿಜ್ಞಾನವಿಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ದೇಶದ ಮತದಾರರಿಗೆ ಮೀಸಲಾಗಿರುವ ಈ ದಿನವನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತಿಳಿವಳಿಕೆಯಿಂದ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಮತದಾರರಲ್ಲಿ ಜಾಗೃತಿ ಮೂಡಿಸಲು ಬಳಸಲಾಗುತ್ತದೆ. ಮತದಾರರು ತಮ್ಮ ಅಮೂಲ್ಯವಾದ ಮತವನ್ನು ದೇಶದ ಹಿತವನ್ನು ಕಾಯುವ ಹಾಗೂ ಶಿಕ್ಷಣವಂತ ನಾಗರಿಕರಿಗೆ ನೀಡಿ ಅವರನ್ನು ಆರಿಸಿ ತರಬೇಕು’ ಎಂದರು.
‘ಮತವನ್ನು ಕೇವಲ ಹಣ, ಬಟ್ಟೆ, ಬಂಗಾರ, ಮದ್ಯಪಾನಗಳಿಗೆ ಮಾರಿಕೊಳ್ಳದೆ ಪ್ರಗತಿಗರ ಸಹಕರಿಸುವವರಿಗೆ ನೀಡಿ. ಯುವಕರು ತಮ್ಮ ಹಕ್ಕುಗಳನ್ನು ಅತ್ಯಂತ ಪ್ರಾಮಾಣಿಕತೆಯಿಂದ ಚಲಾಯಿಸುವುದು ಮತ್ತು ಇತರರನ್ನು ಸಹ ಹಾಗೆ ಮಾಡಲು ಪ್ರೇರೇಪಿಸಬೇಕು’ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಮಡಿವಾಳಪ್ಪ, ಮುಖ್ಯಶಿಕ್ಷಕ ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಹಿರಿಯ ಶಿಕ್ಷಕ ಗೂಳಪ್ಪ, ಎಸ್.ಮಲ್ಹಾರ, ಹಣಮರೆಡ್ಡಿ ಮೋಟ್ನಳ್ಳಿ, ಸಂಗಾರೆಡ್ಡಿ ಪಾಟೀಲ, ಶೋಭಾ ಸೇರಿದಂತೆ ಇತರರಿದ್ದರು.