ADVERTISEMENT

ವಡಗೇರಾ | ಬಿಡಿಸಿಟ್ಟ ಹತ್ತಿ ಕಳವು: ರೈತರ ಆತಂಕ

ವಡಗೇರಾ ಪಟ್ಟಣದ ವಿವಿಧೆಡೆ ಘಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 5:24 IST
Last Updated 17 ಡಿಸೆಂಬರ್ 2024, 5:24 IST
<div class="paragraphs"><p>ವಡಗೇರಾ ಪಟ್ಟಣದ ವಿವಿಧೆಡೆ ಘಟನೆ</p></div>

ವಡಗೇರಾ ಪಟ್ಟಣದ ವಿವಿಧೆಡೆ ಘಟನೆ

   

ವಡಗೇರಾ: ತಾಲ್ಲೂಕಿನ ವಿವಿಧೆಡೆ ರೈತರು ಕಟಾವಿಗೆ ಬಂದಿರುವ ಹತ್ತಿಯನ್ನು ಬಿಡಿಸಿ ಜಮೀನಿನಲ್ಲಿ ಸಂಗ್ರಹಿಸಿರುವ ಹತ್ತಿಯನ್ನು ಕಳ್ಳರು ರಾತ್ರೋ ರಾತ್ರಿ ಕಳವು ಆಗುತ್ತಿರುವುದು  ರೈತರ ನಿದ್ದೆಗೆಡಿಸಿದೆ.

ವಡಗೇರಾ ಪಟ್ಟಣದ ಬಡ ರೈತರಾದ ಮಲ್ಲಪ್ಪ ಮಾಗನೂರ, ದೇವಪ್ಪ ಬೂದಿನಾಳ, ಬಸವರಾಜ ನಾಟೇಕಾರ, ಧನ್ನಯ್ಯ ದೊಡ್ಡಿ ಹಾಗೂ ಹಣಮಂತ ಬೂದಿನಾಳ ಅವರ ಜಮೀನುಗಳಲ್ಲಿ ಸಂಗ್ರಹಿಸಿದ್ದ ಹತ್ತಿಯನ್ನು ಕಳೆದ ಎರಡು ಮೂರು ದಿನಗಳ ಹಿಂದೆ ಕಳ್ಳರು ದೋಚಿ ಪರಾರಿಯಾಗಿದ್ದಾರೆ.

ADVERTISEMENT

ರೈತರು ಬೆಳಿಗ್ಗೆಯಿಂದ ಸಂಜೆವವರೆಗೆ ಜಮೀನಿನಲ್ಲಿದ್ದು, ಕೂಲಿ ಕಾರ್ಮಿಕರ ಜತೆ  ಹತ್ತಿಯನ್ನು ಬಿಡಿಸಿ ಜಮೀನಿನಲ್ಲಿ ಒಂದು ಕಡೆ ಹತ್ತಿಯನ್ನು ಗುಡ್ಡೆ ಹಾಕಿ ಮನೆಗೆ ಬಂದಾಗ ರಾತ್ರಿ ಸಮಯದಲ್ಲಿ ಕಳ್ಳರು ತಮ್ಮ ಕೈ ಚಳಕನ್ನು ತೋರುತ್ತಿದ್ದಾರೆ

ಕಳ್ಳರು ರಸ್ತೆಯ ಬದಿಯಲ್ಲಿಯೇ ಇರುವ ಹತ್ತಿ ಜಮೀನುಗಳನ್ನು ಗುರಿ ಮಾಡಿಕೊಂಡಿದ್ದಾರೆ. ರಸ್ತೆ ಬದಿಯಲ್ಲಿ ತಾವು ತಂದಿರುವ ವಾಹನ ನಿಲ್ಲಿಸುವ ಕಳ್ಳರು, ಜಮೀನಿನ ಮಧ್ಯೆ ಗುಡ್ಡೆ ಹಾಕಿದ ಹತ್ತಿಯನ್ನು ಚೀಲಗಳಲ್ಲಿ ಸುಮಾರು 50 ರಿಂದ 70 ಕೆಜಿಯಷ್ಟು ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ ಎಂದು ರೈತರು ಹೇಳುತ್ತಾರೆ.

ಇಳುವರಿ ಕಡಿಮೆ, ಬೆಲೆಯೂ ಕಡಿಮೆ : ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ತಿ ಬೆಳೆಯಲ್ಲಿ ಇಳುವರಿ ಕಡಿಮೆ ಆಗಿರುವುದರಿಂದ ಹಾಗೂ ಹತ್ತಿಗೆ ಸರಿಯಾದ ಬೆಂಬಲ ಬೆಲೆಯೂ ಇಲ್ಲದೇ  ರೈತರು ಆತಂಕದಲ್ಲಿದ್ದಾರೆ. ಇದರ ನಡುವೆ ಜಮೀನಿನಲ್ಲಿ ಬಿಡಿಸಿ ಇಟ್ಟಿರುವ ಹತ್ತಿ ಮಾಯ ಆಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

‘ರೈತರು ಕಷ್ಟಪಟ್ಟು ಬೆಳೆದ ಹತ್ತಿ ಕಳವು ಆಗುತ್ತಿದ್ದು, ಇದರಿಂದ ರೈತ ಕುಟುಂಬಗಳು ಬೀದಿ ಪಾಲಾಗುತ್ತವೆ. ಹಾಗಾಗಿ ಹತ್ತಿ ಫಸಲು ಇರುವ ರೈತರ ಜಮೀನಿನ ಕಡೆ ರಾತ್ರಿ ಸಮಯದಲ್ಲಿ ಪೊಲೀಸ್‌ ಬಿಟ್ ಹೆಚ್ಚಿಸಬೇಕು’ ಪ್ರಗತಿಪರ ರೈತ ಹೊನ್ನಪ್ಪ ಕಡೇಚೂರ ಎಂದು ಒತ್ತಾಯಿಸಿದರು.

ಜಮೀನುಗಳಲ್ಲಿ ಹತ್ತಿ ಕಳುವಾದ ಬಗ್ಗೆ ಯಾರೂ ದೂರು ಕೊಟ್ಟಿಲ್ಲ . ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು. ರಾತ್ರಿ ಗಸ್ತು ಹೆಚ್ಚಿಸಲಾಗುವುದು
ಮೆಹಬೂಬ ಅಲಿ ಪಿಎಸ್‌ಐ ವಡಗೇರಾ
ಕಳೆದ ಎರಡು ಮೂರು ದಿನಗಳಿಂದ ವಿಪರೀತ ಚಳಿ ಇರುವುದರಿಂದ ರಾತ್ರಿ ಸಮಯದಲ್ಲಿ ಜಮೀನಿಗೆ ಹೋಗಲು ಆಗಿರಲಿಲ್ಲ. ಆ ಸಮಯದಲ್ಲಿ ಕಳ್ಳರು ಹತ್ತಿಯನ್ನು ಕಳವು ಮಾಡಿದ್ದಾರೆ.
ಮಲ್ಲಪ್ಪ ಮಾಗನೂರ ಹತ್ತಿ ಕಳವು ಆದ ಜಮೀನಿನ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.