ADVERTISEMENT

ನಾರಾಯಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು, ರೈತರ ಹರ್ಷ

ವಾಡಿಕೆಗೂ ಮುನ್ನ ನೀರಿನ ನಿರೀಕ್ಷೆಯಲ್ಲಿ ಅನ್ನದಾತರು

ಭೀಮಶೇನರಾವ ಕುಲಕರ್ಣಿ
Published 20 ಜೂನ್ 2021, 1:37 IST
Last Updated 20 ಜೂನ್ 2021, 1:37 IST
ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ
ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ   

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಯಾದಗಿರಿ, ಕಲಬುರ್ಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ಲಕ್ಷಾಂತರ ರೈತರ ಜೀವನಾಡಿಯಾಗಿರುವ ಆಲಮಟ್ಟಿ ಹಾಗೂ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಕಳೆದ ಎರಡು ದಿನಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರ ಸಂತಸಕ್ಕೆ ಕಾರಣವಾಗಿದೆ.

ಈ ಬಾರಿ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಮುಂಗಾರು ಪೂರ್ವ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಿರೀಕ್ಷೆಯಂತೆ ಮಳೆಯಾಶ್ರಿತ ಪ್ರದೇಶ ಜಮೀನುಗಳಲ್ಲಿ ಈಗಾಗಲೇ ತೊಗರಿ ಬಿತ್ತನೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬಹುತೇಕ ರೈತರು ಭತ್ತ ನಾಟಿಗಾಗಿ ಜಮೀನುಗಳನ್ನು ಹದಗೊಳಿಸಿ ಇಟ್ಟುಕೊಂಡಿದ್ದು, ಸಸಿ ಹಾಕಿಕೊಳ್ಳಲು ಬೀಜ ಚೆಲ್ಲುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೆ ಒಂದು ತಿಂಗಳು ಅವಧಿಗೂ ಮುನ್ನ ಈ ಬಾರಿ ಜಲಾಶಯಗಳಿಗೆ ನೀರು ಹರಿದು ಬರುತ್ತಿದ್ದರಿಂದಾಗಿ ಕಾಲುವೆಗಳಿಗೆ ಬೇಗ ಹರಿಯಬಹುದಾಗಿದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ರೈತರು ಹೇಳುತ್ತಾರೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮೂರು ವಾರ ಮೊದಲೇ ಕೃಷ್ಣಾ ನದಿಗೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಇದರಿಂದಾಗಿ ಈ ಬಾರಿ ಬೇಗ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ ಎಂದು ನಿಗಮದ ಮೂಲಗಳಿಂದ ತಿಳಿದು ಬಂದಿದೆ.

ADVERTISEMENT

‘ಶನಿವಾರ ಆಲಮಟ್ಟಿ ಲಾಲ ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ 1.56 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ನಾರಾಯಣಪುರ ಬಸವಸಾಗರ ಜಲಾಶಯಕ್ಕೆ 600 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಸದ್ಯ ಆಲಮಟ್ಟಿ ಜಲಾಶಯದಲ್ಲಿ 42 ಟಿಎಂಸಿ ಅಡಿ ಹಾಗೂ ಬಸವಸಾಗರದಲ್ಲಿ 19.56 ಟಿಎಂಸಿ ಅಡಿ ನೀರು ಸಂಗ್ರಹವಿದೆ’ ಎಂದು ಡ್ಯಾಂ ಡಿವಿಜನ್ ಕಾರ್ಯನಿರ್ವಾಹಕ ಎಂಜಿನಿಯರ್ ಶಂಕರ ನಾಯ್ಕೋಡಿ ತಿಳಿಸಿದರು.

‘ಒತ್ತಾಯಕ್ಕೂ ಮುನ್ನ ನೀರು ಹರಿಸಿ’

ಪ್ರತಿ ವರ್ಷವೂ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಒತ್ತಾಯ, ಮನವಿಗಳ ಬಳಿಕ ಕಾಲುವೆಗೆ ನೀರು ಹರಿಸುವ ನಿಟ್ಟಿನಲ್ಲಿ ಐಸಿಸಿ ಸಭೆ ಕರೆಯಲಾಗುತ್ತಿತ್ತು. ಆದರೆ, ಈ ಬಾರಿ ನದಿ ಪಾತ್ರದಲ್ಲಿ ಮಳೆಯಾಗುತ್ತಿದ್ದರಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಆದ್ದರಿಂದ ಕಾಲುವೆಗಳಿಗೆ ನೀರು ಹರಿಸುವ ಕುರಿತಂತೆ ನೀರಾವರಿ ಸಲಹಾ ಸಮಿತಿ ಸಭೆಯನ್ನು ನಡೆಸಿ ಕೂಡಲೇ ಕಾಲುವೆಗಳಿಗೆ ನೀರು ಹರಿಸುವಂತೆ ಭಾರತೀಯ ಕಿಸಾನ್ ಸಂಘದ ಪ್ರಮುಖ ಸಿದ್ದಲಿಂಗಯ್ಯ ಹಿರೇಮಠ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರುದ್ರಣ್ಣ ಮೇಟಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.