ಶಹಾಪುರ: ನಗರದ ಮಾವಿನ ಕೆರೆ ಹಾಗೂ ನಾಗರ ಕೆರೆಯಲ್ಲಿ ಸಂಗ್ರಹಿಸಿರುವ ನೀರನ್ನು ವಿದ್ಯುತ್ ಪಂಪ್‌ಸೆಟ್ ಬಳಸಿ ಬೆಳೆಗೆ ಇಲ್ಲವೆ ಅನ್ಯ ಉದ್ದೇಶಕ್ಕೆ ಉಪಯೋಗಿಸಿಕೊಂಡರೆ ಕಾನೂನು ಕ್ರಮತೆಗೆದುಕೊಳ್ಳಲಾಗುವುದು ಎಂದು ಪೌರಾಯುಕ್ತ ರಮೇಶ ಬಡಿಗೇರ ಎಚ್ಚರಿಸಿದ್ದಾರೆ.
‘ಸದ್ಯ ಎರಡು ಕೆರೆಯಲ್ಲಿ ಅಲ್ಪ ಪ್ರಮಾಣದ ನೀರು ಸಂಗ್ರಹವಿದೆ. ನೀರು ಖಾಲಿಯಾದರೆ ಅಂತರ್ಜಲಮಟ್ಟ ಕುಸಿತವಾಗಿ ಕೊಳವೆಬಾವಿಯಲ್ಲಿ ನೀರು ಇಲ್ಲದಂತೆ ಆಗುತ್ತದೆ. ಅದರಲ್ಲಿ ಮಾವಿನ ಕೆರೆಯ ಹತ್ತಿರ ಕೆಲ ವ್ಯಕ್ತಿಗಳು ಅಕ್ರಮವಾಗಿ ಟ್ರ್ಯಾಕ್ಟರ್ ಯಂತ್ರ ಬಳಸಿಕೊಂಡು ಸಜ್ಜೆ ಬೆಳೆಗೆ ನೀರುಣಿಸಿರುವ ವಿಷಯ ಗಮನಕ್ಕೆ ಬಂದಿದೆ. ನಮ್ಮ ಸಿಬ್ಬಂದಿ ತೆರಳಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.
‘ತಾಲ್ಲೂಕಿನ ಹಳ್ಳಕ್ಕೆ ಹೊಂದಿಕೊಂಡ ಜಮೀನುಗಳಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ನೀರು ಸೆಳೆದುಕೊಂಡು ಬೆಳೆಗೆ ಹಾಯಿಸುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಜಲಚರಗಳಿಗೆ ಸಂಕಷ್ಟ ಎದುರಾಗಲಿದೆ. ಅತ್ಯಂತ ಸಂಕಷ್ಟದಲ್ಲಿ ನಾವು ಇದ್ದೇವೆ. ಜನರ ಸಹಕಾರ ಅಗತ್ಯವಾಗಿದೆ. ಹಳ್ಳ ಹಾಗೂ ಇನ್ನಿತರ ಹೊಂಡಗಳಲ್ಲಿನ ನೀರು ಸೆಳೆದುಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು. ಹನಿ ನೀರು ಮಹತ್ವ ಪಡೆದುಕೊಂಡಿದೆ. ಪಕ್ಷಿಗಳಿಗೆ ನೀರುಣಿಸಲು ಮನೆ ಮುಂದೆ ತಟ್ಟೆಯಲ್ಲಿ ನೀರು ಹಾಕಿ ಮಾನವೀಯತೆ ಮೆರೆಯಬೇಕು’ ಎಂದು ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಜನರಲ್ಲಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.