
ಸೈದಾಪುರ: ಮಳೆ ನೀರನ್ನೇ ನಂಬಿಕೊಂಡು ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದು ರೈತರು ನಷ್ಟ ಅನುಭವಿಸುತ್ತಿರುವ ಹೊತ್ತಿನಲ್ಲಿ, ಕಡಿಮೆ ಸಮಯದಲ್ಲಿ ಉತ್ತಮ ಆದಾಯ ನೀಡುವ ಕಲ್ಲಂಗಡಿ ಬೆಳೆದ ಮಾಧ್ವಾರ ಮತ್ತು ಕಣೇಕಲ್ ಗ್ರಾಮದ ರೈತರು ಕೃಷಿಯಲ್ಲಿ ಇತರರಿಗೆ ಮಾದರಿಯಾಗಿದ್ದಾರೆ.
ಕಣೇಕಲ್ ಗ್ರಾಮದ ಯುವ ರೈತ ರಾಕೇಶ್ ಕೊಳವೆ ಬಾವಿಯ ನೀರು ಬಳಸಿಕೊಂಡು 3 ಎಕರೆ ಜಮೀನಿನಲ್ಲಿ 2 ತಿಂಗಳ ಅವಧಿಯಲ್ಲಿ ಬರುವ ಕಲಾಸ ಕಂಪನಿಯ ಮೆಲೋಡಿ ತಳಿಯ ಕಲ್ಲಂಗಡಿ ಬೆಳೆದು ಸುಮಾರು ₹4 ಲಕ್ಷ ಆದಾಯ ಪಡೆದಿದ್ದಾರೆ.
ಮಾಧ್ವಾರ ಗ್ರಾಮದಲ್ಲಿರುವ ಕಿಸಾನ್ ಹೈಟೆಕ್ ನರ್ಸರಿಯಲ್ಲಿ ₹1.50ನಂತೆ ಸುಮಾರು 30 ಸಾವಿರ ಕಲ್ಲಂಗಡಿ ಸಸಿಗಳನ್ನು ಖರೀದಿಸಿ ತಂದು ನಾಟಿ ಮಾಡಿದ್ದರು. ಸುಮಾರು 4 ಲಕ್ಷ ವೆಚ್ಚವಾಗಿತ್ತು. ಇದೀಗ ಎಲ್ಲಾ ಖರ್ಚು ವೆಚ್ಚ ತೆಗೆದು ₹4 ಲಕ್ಷ ಉಳಿತಾಯವಾಗಿದೆ. ಕೇವಲ ಎರಡು ತಿಂಗಳಲ್ಲಿ 3 ರಿಂದ 5 ಕೆ.ಜಿ ತೂಕದ ಕಲ್ಲಂಗಡಿ ಹಣ್ಣುಗಳು ಬೆಳೆದಿವೆ.
‘ಪ್ರಸ್ತುತ ಒಟ್ಟು 36 ಟನ್ ಇಳುವರಿ ಬಂದಿದೆ. ಕೆ.ಜಿಗೆ ₹22 ದರದಲ್ಲಿ 36 ಟನ್ ಮಾರಾಟವಾಗಿದೆ. ₹7.92 ಲಕ್ಷ ಮೊತ್ತವಾಗಿದೆ. ಕೇವಲ 2 ತಿಂಗಳಲ್ಲಿ ಲಾಭವಾಗಿರೋದು ಖುಷಿ ತಂದಿದೆ’ ಎನ್ನುತ್ತಾರೆ ಯುವ ರೈತ ರಾಕೇಶ.
ಇನ್ನು ಮಾಧ್ವಾರ ಗ್ರಾಮದ ರೈತ ಬನ್ನಪ್ಪ ಕಲಾಲ್ 1 ಎಕರೆ ಜಮೀನಲ್ಲಿ 6500 ಮೆಲೋಡಿ ತಳಿಯ ಕಲ್ಲಂಗಡಿ ಸಸಿಗಳನ್ನು ನಾಟಿ ಮಾಡಿದ್ದು, ಗೊಬ್ಬರ, ಕೀಟನಾಶಕ ಸೇರಿದಂತೆ ₹1 ಲಕ್ಷದವರೆಗೆ ವೆಚ್ಚವಾಗಿದೆ.
ಇದೀಗ 2 ತಿಂಗಳಲ್ಲಿ 15 ಟನ್ ಕಲ್ಲಂಗಡಿ ಹಣ್ಣುಗಳನ್ನು ಕೆ.ಜಿಗೆ ₹24 ದರದಂತೆ ಹೈದರಾಬಾದ್‌ಗೆ ಮಾರಾಟ ಮಾಡಲಾಗಿದೆ. ₹3.60 ಲಕ್ಷ ಹಣ ಬಂದಿದೆ. ಒಟ್ಟಾರೆಯಾಗಿ 2 ತಿಂಗಳಲ್ಲಿ ₹2.5 ಲಕ್ಷ ಲಾಭಗಳಿಸಿದಂತಾಗಿದೆ. ಇದರಿಂದ ಶ್ರಮಕ್ಕೆ ತಕ್ಕ ಪ್ರತಿಫಲ ಬಂದಿದೆ ಎನ್ನುತ್ತಾರೆ ಯುವರೈತ ಜಾನಿ ಕಲಾಲ್.
ಕಲ್ಲಂಗಡಿ ಹಣ್ಣುಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಇದರಿಂದಾಗಿ ಹೈದರಾಬಾದ್‌ನಿಂದ ವ್ಯಾಪಾರಿಗಳು ರೈತರ ಹೊಲಗಳಿಗೇ ಬಂದು ಹಣ್ಣು ಖರೀದಿ ಮಾಡಿಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ ಅವರು.
ಕೇವಲ ಹತ್ತಿಗೆ ಅಂಟಿಕೊಂಡ ರೈತರು ಬದಲಾಗುವ ಹವಾಮಾನ ವೈಪರಿತ್ಯದಿಂದ ನಷ್ಟದ ಹಾದಿಯಲ್ಲಿ ಸಾಗುತ್ತಿದ್ದಾರೆ. ಲಾಭಗಳಿಸಲು ರೈತರಿಗೆ ತೋಟಗಾರಿಕೆ ಬೆಳೆಗಳಲ್ಲಿ ಸಾಕಷ್ಟು ಅವಕಾಶವಿದೆ– ರಾಕೇಶ ಕಣೇಕಲ್, ಯುವ ರೈತ
ಮಳೆಯಾಶ್ರಿತ ಬೆಳೆಗಳಲ್ಲಿ ₹10 ಸಾವಿರದಿಂದ ₹15 ಸಾವಿರ ಲಾಭ ಪಡೆಯಬಹುದಾಗಿತ್ತು. ಆದರೆ ಕಡಿಮೆ ಅವಧಿಯಲ್ಲಿ ಲಕ್ಷ ಲಕ್ಷ ಲಾಭ ತೋಟಗಾರಿಕೆ ಬೆಳೆಗಳಲ್ಲಿ ಮಾತ್ರ ಸಾಧ್ಯ.– ಬನ್ನಪ್ಪ ಕಲಾಲ್ ಮಾಧ್ವಾರ, ರೈತ
‘ಒಂದೇ ಬೆಳೆಯ ಅವಲಂಬನೆ ಬೇಡ’
ತೋಟಗಾರಿಕೆ ಇಲಾಖೆಯಿಂದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನಿರಾವರಿ ಘಟಕ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ್ಲಾಸ್ಟಿಕ್ ಹೊದಿಕೆಯಂತಹ ಸರ್ಕಾರಿ ಸೌಲಭ್ಯಗಳನ್ನು ಕಲ್ಲಂಗಡಿ ಬೆಳೆಗೆ ಅಳವಡಿಸಿಕೊಂಡು ಉತ್ತಮ ಆದಾಯವನ್ನು ಗಳಿಸಿದ್ದಾರೆ. ಇದೇ ರೀತಿಯಾಗಿ ರೈತರು ಕೇವಲ ಮಳೆ ಮತ್ತು ಒಂದೇ ಬೆಳೆಯ ಮೇಲೆ ಅವಲಂಬಿತರಾಗದೆ ವಿವಿಧ ತೋಟಗಾರಿಕ ಬೆಳೆಗಳನ್ನು ಬೆಳೆದು ಮಾಡಿ ಅಧಿಕ ಲಾಭ ಪಡೆಯಬೇಕು’ ಎನ್ನುತ್ತಾರೆ ಯಾದಗಿರಿ ತೋಟಗಾರಿಕೆ ಉಪನಿರ್ದೇಶಕ ರಾಘವೇಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.