ADVERTISEMENT

ಭಾರತೀಯ ಸಂಸ್ಕೃತಿ ಉತ್ಸವಕ್ಕೆ 30 ಲಕ್ಷ ಜನ: ಸದಾಶಿವ ಸ್ವಾಮೀಜಿ

ವಿಕಾಸ ಪಥ ಯಾತ್ರೆಗೆ ಅದ್ಧೂರಿ ಸ್ವಾಗತ 

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 15:26 IST
Last Updated 24 ಆಗಸ್ಟ್ 2024, 15:26 IST
ಸುರಪುರದಲ್ಲಿ ಶನಿವಾರ ವಿಕಾಸ ಪಥ ಯಾತ್ರೆಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಸದಾಶಿವ ಸ್ವಾಮೀಜಿ, ಗುರುಶಾಂತಮೂರ್ತಿ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಸುರೇಶ್ ಸಜ್ಜನ್, ಸೋಮು ಶಾಬಾದಿ ಇತರರು ಭಾಗವಹಿಸಿದ್ದರು
ಸುರಪುರದಲ್ಲಿ ಶನಿವಾರ ವಿಕಾಸ ಪಥ ಯಾತ್ರೆಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಸದಾಶಿವ ಸ್ವಾಮೀಜಿ, ಗುರುಶಾಂತಮೂರ್ತಿ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ಸುರೇಶ್ ಸಜ್ಜನ್, ಸೋಮು ಶಾಬಾದಿ ಇತರರು ಭಾಗವಹಿಸಿದ್ದರು   

ಸುರಪುರ: ‘ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯು 50 ವರ್ಷ ಪೂರೈಸಿದ ನೆನಪಿನ ಅಂಗವಾಗಿ ಹಮ್ಮಿಕೊಂಡಿರುವ ಭಾರತೀಯ ಸಂಸ್ಕೃತಿ ಉತ್ಸವದಲ್ಲಿ 30 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ತಿಳಿಸಿದರು.

ಸಮೀಪದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಾಸ ಪಥ ಯಾತ್ರೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿಕಾಸ ಅಕಾಡೆಮಿ ಸಂಯೋಜಕ ಬಸವರಾಜ ಪಾಟೀಲ ಸೇಡಂ ಅವರ ನೇತೃತ್ವದಲ್ಲಿ ಸೇಡಂನ ಪ್ರಕೃತಿ ನಗರ 2025ರ ಜ.29ರಿಂದ ಫೆ.6ರವರೆಗೆ ಭಾರತೀಯ ಸಂಸ್ಕೃತಿ ಉತ್ಸವ-7 ಹಮ್ಮಿಕೊಳ್ಳಲಾಗಿದೆ. 240 ಎಕರೆ ಪ್ರದೇಶದಲ್ಲಿ ಅಭೂತಪೂರ್ವವಾಗಿ ನಡೆಯುವ ಈ ಉತ್ಸವದಲ್ಲಿ 1,500 ಮಠಾಧೀಶರು, ನಾಲ್ಕು ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ. ಮಾತೃ ಸಮಾವೇಶ, ಶೈಕ್ಷಣಿಕ, ಯುವ, ಕೃಷಿ, ಆಹಾರ ಮತ್ತು ಆರೋಗ್ಯ, ಸ್ವಯಂ ಉದ್ಯೋಗ, ಸೇವಾ ಶಕ್ತಿ ಸೇರಿ ವಿವಿಧ ಸಮಾವೇಶಗಳನ್ನು ಆಯೋಜಿಸಲಾಗಿದೆ’ ಎಂದರು.

ADVERTISEMENT

‘ಮಾಜಿ ರಾಷ್ಟ್ರಪತಿ ರಮಾನಾಥ್ ಕೋವಿಂದ್, ಕನೇರಿಯಾದ ಕಾಡಸಿದ್ದೇಶ್ವರ ಸ್ವಾಮೀಜಿ, ಸುತ್ತೂರು ಸ್ವಾಮೀಜಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸೇರಿ ನಾಡಿನ ಶ್ರೇಷ್ಠ ಮಠಾಧೀಶರು, ಸಂತರು, ಧರ್ಮದರ್ಶಿಗಳು, ಧಾರ್ಮಿಕ ಮುಖಂಡರು, ಚಿಂತಕರು, ವಿದ್ವಾಂಸರು ಭಾಗವಹಿಸಿ ಮಾರ್ಗದರ್ಶನ ನೀಡುವರು’ ಎಂದರು.

‘51 ಜನ ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ, ಕಲ್ಯಾಣ ಕರ್ನಾಟಕದ 51 ಜನ ಸಾಧಕರಿಗೆ, ಭಾರತದ 51 ಸಾಧಕರಿಗೆ, 51 ಜನ ಅನಿವಾಸಿ ಭಾರತೀಯ ಸಾಧಕರನ್ನು ಸನ್ಮಾನಿಸಲಾಗುತ್ತಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾದ ಊಟ, ವಸತಿ ವ್ಯವಸ್ಥೆ ಇರುತ್ತದೆ. ಉತ್ಸವದ ಯಶಸ್ವಿಗೆ ಎಲ್ಲರ ಸಹಕರಿಸಬೇಕು’ ಎಂದು ಹೇಳಿದರು.

ರುಕ್ಮಾಪುರ ಹಿರೇಮಠದ ಗುರುಶಾಂತಮೂರ್ತಿ ಶಿವಾಚಾರ್ಯ, ಲಕ್ಷ್ಮಿಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ, ವಿಕಾಸ ಅಕಾಡೆಮಿ ಸಂಚಾಲಕ ಎಚ್.ಸಿ.ಪಾಟೀಲ, ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್ ಮಾತನಾಡಿದರು.

ನಾಗಭೂಷಣ ಬಿಲ್ಲಂಕೊಂಡಿಮಠ ಪ್ರಾರ್ಥನೆ ಗೀತೆ ಹಾಡಿದರು. ಚನ್ನಮಲ್ಲಿಕಾರ್ಜುನ ಗುಂಡಾನೂರ ವಚನ ಗಾಯನ ಮಾಡಿದರು. ಡಿ.ಸಿ.ಪಾಟೀಲ ಸ್ವಾಗತಿಸಿದರು. ಪ್ರಕಾಶ ಅಂಗಡಿ ಕನ್ನೆಳ್ಳಿ ನಿರೂಪಿಸಿದರು. ಅಕಾಡೆಮಿ ತಾಲ್ಲೂಕು ಸಂಚಾಲಕ ಸೋಮಶೇಖರ ಶಾಬಾದಿ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.