ಸುರಪುರ: ತಾಲ್ಲೂಕಿನ ಚಂದಲಾಪುರ ಗ್ರಾಮದ ವಿದ್ಯಾವಂತ ಯುವಕ ವಿಶ್ವರಾಜ ವಂಟೂರ ಕೃಷಿಯಲ್ಲಿ ಅನನ್ಯ ಸಾಧನೆ ಮಾಡಿ ಇಲ್ಲಿನ ರೈತರಿಗೆ ಮಾದರಿಯಾಗಿದ್ದಾರೆ.
ಸ್ನಾತಕೋತ್ತರ ಪದವೀಧರರಾದ ಇವರು ಅತಿಥಿ ಉಪನ್ಯಾಸದ ಜೊತೆಗೆ ಕೃಷಿ ಮೈಗೂಡಿಸಿಕೊಂಡಿದ್ದಾರೆ. ಚಂದಲಾಪುರ ಕಾಲುವೆ ಕೊನೆಯ ಭಾಗದ ಗ್ರಾಮ. ಇಲ್ಲಿ ನೀರು ತಲುಪುವುದೇ ಇಲ್ಲ. ಹೆಸರಿಗೆ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದರೂ ಇಲ್ಲಿನ ರೈತರು ನೆಚ್ಚಿಕೊಂಡಿದ್ದು ಮಳೆಯನ್ನು ಮಾತ್ರ. ಹೀಗಾಗಿ ಈ ಭಾಗದ ರೈತರ ಕೃಷಿ ವರಮಾನವೂ ಕಡಿಮೆ.
5 ಜನ ಸಹೋದರರ ಕೂಡು ಕುಟುಂಬ ವಿಶ್ವರಾಜ ಅವರದ್ದು. 20 ಎಕರೆ ಕೃಷಿ ಭೂಮಿ ಹೊಂದಿದ್ದರೂ ಹೆಚ್ಚಿನ ಆದಾಯ ಇರಲಿಲ್ಲ. ಮಳೆ ಆಶ್ರಿತ ಬೆಳೆಯ ಮೇಲೆ ಅವಲಂಬನೆ. ಸಂಸಾರ ತೂಗಿಸಲು ಕುರಿ ಸಾಕಣೆ, ಇತರ ಉಪ ಕೃಷಿ ಚಟುವಟಿಕೆಗಳತ್ತ ಸಹೋದರರ ಒಲವು ಇತ್ತು.
ವಿಶ್ವರಾಜ ಅವರಿಗೆ ಕೃಷಿಯಲ್ಲಿ ಏನನ್ನಾದರೂ ಸಾಧಿಸುವ ಛಲ ಇತ್ತು. ತಂದೆಯ ಮನವೊಲಿಸಿ 2019ರಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ 200 ಚದುರಡಿ ಬಾವಿ ತೋಡಿಸಿದರು. 50 ಅಡಿ ಆಳ ತೋಡಿಸಿದರೂ ಹನಿ ನೀರು ಬರಲಿಲ್ಲ. ಎಲ್ಲರಿಂದಲೂ ನಿಂದಿಸಿಕೊಳ್ಳುವಂತಾಯಿತು. 6 ತಿಂಗಳ ನಂತರ ಉತ್ತಮ ಮಳೆ ಬಂತು. 2020ರಲ್ಲೂ ಸಾಕಷ್ಟು ಮಳೆ ಸುರಿದಿದ್ದರಿಂದ ಬಾವಿ ತುಂಬಿ ತುಳುಕಿತು. ನೀರಿನ ಸೆಲೆಯೂ ಹೆಚ್ಚಾಯಿತು. 2020ರ ಬೇಸಿಗೆಯಲ್ಲೂ ಬಾವಿಯಲ್ಲಿ ಸಾಕಷ್ಟು ನೀರು ಇತ್ತು. ಈಗಲೂ ಬಾವಿಯಲ್ಲಿ ಸಮೃದ್ಧ ನೀರು ಇದೆ. ಈಗ ಮುಂಗಾರು ಮತ್ತು ಹಿಂಗಾರು ಎರಡೂ ಫಸಲಿಗೂ ಸಾಕಷ್ಟು ನೀರು ಸಿಗುತ್ತಿದೆ. ಮತ್ತಷ್ಟು ಹಣ ಖರ್ಚು ಮಾಡಿ ಭೂಮಿ ಸಮತಟ್ಟು ಮಾಡಿ ಹತ್ತಿ, ಶೇಂಗಾ, ಸಜ್ಜೆ, ತೊಗರಿ ಬೆಳೆದು ಕಳೆದ ಮುಂಗಾರು ಹಂಗಾಮಿನಲ್ಲಿ ₹8 ಲಕ್ಷ ಲಾಭ ಮಾಡಿಕೊಂಡಿದ್ದಾರೆ.
ಈಗ ಹೊಲದಲ್ಲಿ ಸಜ್ಜೆ, ತೊಗರಿ ನಳನಳಿಸುತ್ತಿದೆ. ಈ ಬಾರಿಯೂ ₹8 ರಿಂದ 9 ಲಕ್ಷ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕೈಲಾಗದು ಎಂದು ಕೈಕಟ್ಟಿ ಕೂಡದೆ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ವಿಶ್ವರಾಜ ಈಗ ರೈತರ ಪಾಲಿನ ಹೀರೋ.
ಸಿಗದ ನರೇಗಾ ಹಣ: ‘ತಂದೆಯವರ ಹೆಸರಿನಲ್ಲಿ ಭೂಮಿ ಇದ್ದರಿಂದ ಅವರ ಹೆಸರಿನಲ್ಲೇ ನರೇಗಾ ಯೋಜನೆಯಲ್ಲಿ ಬಾವಿ ತೋಡಿಸಲಾಗಿತ್ತು. ₹2 ಲಕ್ಷ ಖರ್ಚು ಮಾಡಲಾಗಿತ್ತು. ಆದರೆ ನೀರು ಬರಲಿಲ್ಲ. ತಂದೆಯವರೂ ತೀರಿಕೊಂಡರು. ತಂದೆಯವರ ಹೆಸರಿಗೆ ಚೆಕ್ ಕೊಡಲು ಬರುವುದಿಲ್ಲ. ಮೇಲಧಿಕಾರಿಗಳ ಸಲಹೆ ಪಡೆಯಲಾಗುವುದು ಎಂದು ಹತ್ತಾರು ಬಾರಿ ತಿರುಗಾಡಿಸಿದ ಅಧಿಕಾರಿಗಳು ಕೊನೆಗೂ ಹಣ ಕೊಡಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ವಿಶ್ವರಾಜ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.