ADVERTISEMENT

ಯಾದಗಿರಿ: ಥಂಡಿಗೆ ತಣ್ಣನೆಯ ವ್ಯಾಪಾರ ಸುಸ್ತು!

ಬಿ.ಜಿ.ಪ್ರವೀಣಕುಮಾರ
Published 6 ಜನವರಿ 2025, 6:11 IST
Last Updated 6 ಜನವರಿ 2025, 6:11 IST
<div class="paragraphs"><p>ಯಾದಗಿರಿ ತಾಲ್ಲೂಕಿನ&nbsp;ಎಸ್ ಹೊಸಳ್ಳಿ ಗ್ರಾಮದಲ್ಲಿ ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿರುವ ಮಕ್ಕಳು </p></div>

ಯಾದಗಿರಿ ತಾಲ್ಲೂಕಿನ ಎಸ್ ಹೊಸಳ್ಳಿ ಗ್ರಾಮದಲ್ಲಿ ಚಳಿಗೆ ಬೆಂಕಿ ಕಾಯಿಸಿಕೊಳ್ಳುತ್ತಿರುವ ಮಕ್ಕಳು

   

ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ್

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ವಿಪರೀತ ಚಳಿ ಆವರಿಸಿದ್ದು, ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 16 ತಪಾಮಾನ ದಾಖಲಾಗಿದೆ.

ADVERTISEMENT

5ರಿಂದ 6 ಕಿ.ಮೀ. ವೇಗದಲ್ಲಿ ತಣ್ಣನೆಯ ಗಾಳಿ ಬೀಸುತ್ತಿದೆ. ಬಯಲು ಜಾಗ, ಬೆಟ್ಟ ಗುಡ್ಡಗಳಲ್ಲಿ ಬೆಳಗಿನ ಮಂಜಿನ ವಾತಾವರಣ ಆಹ್ಲಾದಕರವಾಗಿದೆ. ಸಂಜೆ 6 ಗಂಟೆಯಿಂದಲೇ ತಂಪಿನ ಅನುಭವವಾಗುತ್ತಿದ್ದು, ಬೆಳಿಗ್ಗೆ 8 ಗಂಟೆಯಾದರೂ ಸೂರ್ಯ ಪ್ರಖರವಾಗಿ ಕಾಣಿಸುತ್ತಿಲ್ಲ. ಸಂಜೆ ಮತ್ತು ಬೆಳಗಿನ ಜಾವ ಇದ್ದು, ಮಂಜಿನ ಹನಿ ಬಿದ್ದು ತೇವಾಗುತ್ತಿದೆ. ಇದು ಹಿಂಗಾರು ಬೆಳೆಗಳಿಗೂ ಅನುಕೂಲವಾಗಿದೆ.

ಐಸ್‌ಕ್ರಿಮ್‌ ವ್ಯಾಪಾರ ಥಂಡಾ: ಚಳಿ ವಿಪರೀತ ಇರುವ ಕಾರಣ ಐಸ್‌ಕ್ರಿಮ್‌ ಉದ್ಯಮ ಥಂಡಾ ಹೊಡೆದಿದೆ. ಐಸ್ ಕ್ರೀಂ ಮಳಿಗೆಯಲ್ಲಿ ₹5 ರಿಂದ ₹500 ಮೌಲ್ಯದ ಐಸ್ ಕ್ರೀಂಗಳಿವೆ. ಆದರೆ, ಈಗ ₹5ರಿಂದ ₹100 ವರೆಗೆ ಐಸ್ ಕ್ರೀಂ ಮಾತ್ರ ಮಾರಾಟವಾಗುತ್ತಿದೆ. ಫ್ಯಾಮಿಲಿ ಪ್ಯಾಕ್‌ ಐಸ್ ಕ್ರೀಂ ಕೇಳುವವರು ಇಲ್ಲ. ಚಳಿಗೆ ಬೇಡಿಕೆಯೂ ಇಲ್ಲ ಎಂದು ವ್ಯಾಪಾರಿಗಳು ಹೇಳುವ ಮಾತಾಗಿದೆ. 

ಚಹಾಕ್ಕೆ ಬೇಡಿಕೆ: ಚಳಿಯ ವಾತಾವರಣಕ್ಕೆ ಜಿಲ್ಲೆಯಲ್ಲಿ ಚಹಾ ಭರ್ಜರಿ ವ್ಯಾಪಾರವಾಗುತ್ತಿದೆ. ತಟ್ಟಿ ಹೋಟೆಲ್‌ಗಳಲ್ಲಿ ಉಪಾಹಾರಕ್ಕಿಂತ ಚಹಾದ ವ್ಯಾಪಾರ ಹೆಚ್ಚಾಗಿ ನಡೆಯುತ್ತಿದೆ. ಅದರಲ್ಲೂ ಶುಂಠಿ ಚಹಾಕ್ಕೆ ಬೇಡಿಕೆ ಹೆಚ್ಚಿದ್ದು, ಗ್ರಾಹಕರು ಬಯಸಿ ಚಹಾವನ್ನು ಹೀರುತ್ತಿದ್ದಾರೆ.

ಚಳಿಗೆ ಮುಖಕ್ಕೆ ಬಟ್ಟಿಕೊಂಡು ಚಹಾ ಮೊರೆದ ಹೋದ ಜನರು

ಇನ್ನೂ ಮನೆಯಲ್ಲಿದ್ದವರು ಚಳಿಯ ವಾತಾವರಣದಿಂದ ಎರಡ್ಮೂರು ಬಾರಿ ಚಹಾ ಸೇವನೆ ಮಾಡುತ್ತಿದ್ದಾರೆ.

ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯ: ಬೆಳಗಿನ ಜಾವ ಹಳ್ಳಿ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೆಂಕಿ ಕಾಯಿಸಿಕೊಳ್ಳುವ ದೃಶ್ಯ ರಸ್ತೆ ಪಕ್ಕದಲ್ಲಿ ಕಾಣಿಸುತ್ತದೆ. ಭತ್ತದ ಹುಲ್ಲು ತಂದು ಸುಟ್ಟು ಬೆಂಕಿ ಹಾಕಿಸಿಕೊಳ್ಳುವುದು ಗ್ರಾಮೀಣ ಪ್ರದೇಶದಲ್ಲಿ ಕಂಡು ಬರುತ್ತಿದೆ. ದೊಡ್ಡವರು, ಮಕ್ಕಳು ಬೆಳಿಗ್ಗೆ ವೇಳೆ ಬೆಂಕಿ ಕಾಯಿಸಿಕೊಂಡು ಚಳಿಯನ್ನು ಮರೆಯುತ್ತಿದ್ದಾರೆ.

ನಿಲ್ಲದ ಕಾಯಕ: ಚಳಿ ಇದ್ದರೂ ಕೆಲವರು ತಮ್ಮ ಕಾಯಕವನ್ನು ಮುಂದುವರಿಸಿದ್ದಾರೆ. ಹಾಲು, ಪತ್ರಿಕೆ ಹಾಕುವವರು, ತರಕಾರಿ ಮಾರಾಟಗಾರರು, ಕೊಡ ವ್ಯಾಪಾರಿಗಳು ಸ್ಟೆಟರ್‌ ಹಾಕಿಕೊಂಡು ತಮ್ಮ ಕಾರ್ಯ ಮುಂದುವರಿಸಿದ್ದಾರೆ.

ಚಳಿ ಲೆಕ್ಕಿಸದೆ ಬಟ್ಟೆ ಮಾರಾಟ ಮಾಡಲು ಆಟೋದಲ್ಲಿ ತೆರಳಿದ ಮಾರಾಟಗಾರರು
15 ಎಕರೆಯಲ್ಲಿ ಜೋಳ ಬೆಳೆದಿದ್ದೇವೆ. ಒಂದು ಎಕರೆಗೆ 7-8 ಕ್ವಿಂಟಲ್ ಇಳುವರಿ ನಿರೀಕ್ಷೆ ಇದ್ದು ಚಳಿಯ ಇಬ್ಬನಿಗೆ ಜೋಳ ಫಸಲು ಚೆನ್ನಾಗಿ ಬಂದಿದೆ
ಸಿದ್ದಲಿಂಗರೆಡ್ಡಿ ಸಾಹಿಬಗೌಡ ಚಟ್ನಳ್ಳಿ ಯುವ ರೈತ
ಹಿಂದಿನ ವರ್ಷಗಳಲ್ಲಿ ಸರಿಯಾಗಿ ಬೆಳೆಗಳಿಲ್ಲದೆ ತೊಂದರೆ ಎದುರಿಸಿದ್ದು ಈ ಬಾರಿ ಭಗವಂತ ಕೃಪೆ ತೋರಿದ್ದರಿಂದ ಉತ್ತಮವಾಗಿ ಬೆಳೆಗಳು ಬೆಳೆದಿವೆ. ಶೇಂಗಾ ಮತ್ತು ಜೋಳ ಬೆಳೆಗಳು ಉತ್ತಮವಾಗಿ ಬೆಳೆದಿವೆ
ಬಸವರಾಜ ಪಾಟೀಲ ರೈತ ಹೊಸಳ್ಳಿ
ವಿಪರೀತ ಚಳಿ ಇರುವ ಕಾರಣ ಗ್ರಾಹಕರು ಹೆಚ್ಚು ಶುಂಠಿ ಚಹಾ ಬಯಸಿ ಆರ್ಡರ್‌ ಮಾಡುತ್ತಿದ್ದಾರೆ. ವ್ಯಾಪಾರವೂ ಚೆನ್ನಾಗಿ ಆಗುತ್ತಿದೆ
ಗುರುಸ್ವಾಮಿ ಪೂಜಾರಿ ವ್ಯಾಪಾರಿ
ಚಳಿ ಹೆಚ್ಚಿರುವ ಕಾರಣ ರಕ್ತನಾಳಗಳು ಬಿಗಿಯಾಗಿ ಅಧಿಕ ರಕ್ತದೋತ್ತಡ ಇರುವವರಿಗೆ ಸಮಸ್ಯೆ ಆಗುತ್ತದೆ. ಮನೆಯಲ್ಲೇ ತಯಾರಿಸಿದ ಬಿಸಿಬಿಸಿ ಆಹಾರ ಸೇವನೆ ಮಾಡಿ
ಡಾ.ವಿರೇಶ್‌ ಜಾಕಾ ಜನರಲ್‌ ಫಿಜಿಷಿಯನ್‌

ಚಳಿಗೆ ಎಳನೀರು ದರ ಇಳಿಕೆ

ಚಳಿ ವಾತಾವರಣದಿಂದ ಎಳನೀರು ದರ ಒಂದಕ್ಕೆ ₹25ಕ್ಕೆ ಬಂದು ನಿಂತಿದೆ. ಕಳೆದ ವರ್ಷ ಬೇಸಿಗೆಯಲ್ಲಿ ₹50 ದರವಿದ್ದ ಎಳನೀರು ಈಗ ಚಳಿಯ ಕಾರಣ ಅರ್ಧದಷ್ಟು ಬೆಲೆ ಇಳಿಕೆಯಾಗಿದೆ. ಮದ್ದೂರು ಮೈಸೂರು ಮಂಡ್ಯ ಭಾಗದಿಂದ ಜಿಲ್ಲೆಗೆ ಎಳನೀರು ಸರಬರಾಜು ಲಾರಿಯಲ್ಲಿ ಲೋಡುಗಟ್ಟಲೆ ಆಗುತ್ತಿದ್ದು ಗ್ರಾಹಕರನ್ನು ಆಕರ್ಷಿಸಲು ₹25 ಫಲಕ ಅಂಟಿಸಿ ಎಳನೀರು ವ್ಯಾಪಾರಿಗಳು ಗಮನ ಸೆಳೆಯುತ್ತಿದ್ದಾರೆ.

ಶೇ 98.60 ರಷ್ಟು ಬಿತ್ತನೆ

ಜಿಲ್ಲೆಯಲ್ಲಿ 2024–25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಶೇ 98.60 ಬಿತ್ತನೆಯಾಗಿದ್ದು ಚಳಿಗೆ ಜೋಳ ಕಡಲೆ ಶೇಂಗಾ ನಳನಳಿಸುತ್ತಿವೆ. ಶಹಾಪುರ ಸುರಪುರ ಹುಣಸಗಿ ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಹೆಚ್ಚು ಭತ್ತ ನಾಟಿ ಮಾಡಿದರೆ ಯಾದಗಿರಿ ಗುರುಮಠಕಲ್‌ ವಡಗೇರಾ ತಾಲ್ಲೂಕಿನಲ್ಲಿ ಜೋಳ ಕಡಲೆ ಶೇಂಗಾ ಸಜ್ಜೆ ಬಿತ್ತನೆ ಮಾಡಲಾಗಿದೆ.

ಹಿಂಗಾರು ಜೋಳ ಮೆಕ್ಕೆಜೋಳ ಭತ್ತ ಸೇರಿದಂತೆ ಏಕದಳ ಧಾನ್ಯಗಳು ನೀರಾವರಿ 1538.18 ಹಾಗೂ ಖುಷ್ಕಿ 17264.80 ಹೆಕ್ಟೇರ್ ಸೇರಿದಂತೆ ಒಟ್ಟು 18802.98 ಹೆಕ್ಟೇರ್ ಪ್ರದೇಶದಲ್ಲಿ ಗುರಿ ಹೊಂದಲಾಗಿದ್ದು ನೀರಾವರಿಯಲ್ಲಿ 751.00 ಹೆಕ್ಟೇರ್ ಹಾಗೂ ಖುಷ್ಕಿ ಪ್ರದೇಶದಲ್ಲಿ 16225 ಹೆಕ್ಟೇರ್ ಬಿತ್ತನೆ ಮಾಡಿದ್ದು ಜಿಲ್ಲೆಯಲ್ಲಿ ಶೇ. 98.60ರಷ್ಟು ಪ್ರಮಾಣದ ಗುರಿ ಸಾಧನೆ ಮಾಡಲಾಗಿದೆ.

ಮುಂಗಾರು ಹಂಗಾಮಿನ ಬೆಳೆಯಲ್ಲಿ ಉತ್ತಮ ಇಳುವರಿ ಪಡೆದಿರುವ ರೈತರು ಹಿಂಗಾರು ಹಂಗಾಮಿನಲ್ಲೂ ಉತ್ತಮ ಇಳುವರಿ ಪಡೆಯುವ ನಿರೀಕ್ಷೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ. ಜೋಳಕ್ಕೆ ಈ ಬಾರಿ ಹೆಚ್ಚಿನ ಇಳುವರಿ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.