
ಯಾದಗಿರಿ: ‘ಮನುಷ್ಯರಿಗೆ ಒಳ್ಳೆಯದನ್ನು ಗುರುತಿಸುವ ಸೂಕ್ಷ್ಮ ಜ್ಞಾನ ಹಾಗೂ ಒಳ್ಳೆಯದ್ದನ್ನು ಸಾಧಿಸುವ ಛಲ, ಲೋಕ ವ್ಯವಹಾರ ಹಾಗೂ ಸಾಮಾಜಿಕ ವಿನಯ ಇರಬೇಕು’ ಎಂದು ವಿದ್ವಾಂಸ ಗೊ.ರು. ಚನ್ನಬಸಪ್ಪ ಹೇಳಿದರು.
ಇಲ್ಲಿನ ಪಾಟೀಲ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಸಿದ್ದಪ್ಪ ಎಸ್.ಹೊಟ್ಟಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಅಭಿನಂದನಾ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜನಿಸಿದ ದಿನ ಹಾಗೂ ನಾವು ಏಕೆ ಜನಿಸಿದ್ದು ಎಂಬುದನ್ನು ಸ್ಮರಣೆಯಲ್ಲಿ ಇರಿಸಿಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ಯಾವುದಾದರು ಕೆಲಸದಲ್ಲಿ ತೊಡಗಿಸಿಕೊಂಡಾಗ ಸಮಸ್ಯೆ, ಸವಾಲು, ಕಷ್ಟ– ನಷ್ಟಗಳು, ದೂರು– ಆರೋಪಗಳು ಬರುವುದು ಸಹಜ. ಅವುಗಳಿಗೆ ಹೆದರಿ ಏನೂ ಮಾಡದೆ ಸುಮ್ಮನೆ ಕೂರಬಾರದು. ನಮ್ಮಿಂದ ಸಾಧ್ಯವಾಗುವ ಕ್ಷೇತ್ರದಲ್ಲಿ ಸಾಧಿಸಿ ತೋರಿಸಬೇಕು’ ಎಂದರು.
‘ಒಬ್ಬ ವ್ಯಕ್ತಿಗೆ ಘನತೆ, ಗೌರವ ಬರುವುದು ಆತನಿಗೆ ಇರುವ ಅಧಿಕಾರದಿಂದ ಅಲ್ಲ. ಆತ ಸಮಾಜಕ್ಕೆ ಸಲ್ಲಿಸುವ ಸೇವೆಯಿಂದ. ಅಧಿಕಾರ, ಸ್ಥಾನ– ಮಾನಗಳ ಪಿತ್ತ ನೆತ್ತಿಗೆ ಏರಿಸಿ ಮನಸ್ಸನ್ನು ವಿಕೃತಗೊಳಿಸುತ್ತದ ಎಂಬುದರ ಅರಿವೂ ಇರಬೇಕು’ ಎಂದರು.
ಭಾಲ್ಕಿಯ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಸಿದ್ದಪ್ಪ ಅವರ ಸಾಹಿತ್ಯ, ಸಂಘಟನೆ, ಸಹಕಾರ ಕೃಷಿಯ ಕಾಯಕ ಹಳ್ಳಿಯಿಂದ ಆರಂಭವಾಗಿ ದೆಹಲಿ ವರೆಗೂ ಮುಟ್ಟಿದೆ. ಜೀವನದ ಮೌಲ್ಯಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ತಮ್ಮ ಕಾಯಕದ ಮೂಲಕ ತೋರಿಸಿಕೊಟ್ಟಿದ್ದಾರೆ’ ಎಂದರು.
‘ದ್ವೇಷ, ಅಸೂಯೆ, ಕೋಪ ಇರಿಸಿಕೊಂಡವರು ಎಲ್ಲಿಯೂ ಸಲ್ಲರು. ಹಣ, ಅಧಿಕಾರಕ್ಕಿಂತ ಪ್ರೀತಿ, ಸ್ನೇಹ, ವಿಶ್ವಾಸ ಇರಿಸಿಕೊಂಡು ನಡೆದವರು ಎಲ್ಲಡೆಯೂ ಸಲ್ಲುವರು. ಎಲ್ಲರೂ ನನ್ನವರೆಂದು ಪ್ರೀತಿಸುವವರು ಭಗವಂತನ ಪ್ರೀತಿಗೂ ಪಾತ್ರರಾಗುತ್ತಾರೆ’ ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ ಮಾತನಾಡಿ, ‘ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಸಿದ್ದಪ್ಪ ಅವರು, ಎರಡೂ ಸಂಸ್ಥಗಳಲ್ಲಿ ಸಮನ್ವಯ ಸಾಧಿಸಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ’ ಎಂದರು.
ಸಿದ್ದಪ್ಪ ಎಸ್.ಹೊಟ್ಟಿ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು. ‘ದಣಿವರಿಯದ ಧೀಮಂತ’ ಅಭಿನಂದನಾ ಗ್ರಂಥ, ‘ಧೀಮಂತ ಚೇತನಿ’ ಗ್ರಂಥ, ಧ್ವನಿ ಸುರಳಿ ಹಾಗೂ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ವೀರಸಿಂಹಾಸನ ಮಹಾ ಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು, ಖಾಸಾ ಮಠದ ಶಾಂತವೀರ ಗುರುಮುರಘರಾಜೇಂದ್ರ ಸ್ವಾಮೀಜಿ, ಹೆಡಗಿಮದ್ರಾದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ಸಿನಿಮಾ ನಟ ದೊಡ್ಡಣ್ಣ, ಬಸವ ಸಮಿತಿ ಉಪಾಧ್ಯಕ್ಷ ಹಣಮಂತರೆಡ್ಡಿ ಮುದ್ನಾಳ, ನಫೆಡ್ ಉಪಾಧ್ಯಕ್ಷ ತರಲೋಕ್ ಸಿಂಗ್, ನಫೆಡ್ ನಿರ್ದೇಶಕ ಅಶೋಕ ರಾಠೋಡ, ಮುಖಂಡರಾದ ವಿಶ್ವನಾಥರೆಡ್ಡಿ ದರ್ಶನಾಪುರ, ಶಿವಾನಂದ ಮಾನಕರ್, ಸುರೇಶ ಆರ್. ಸಜ್ಜನ್, ಲಿಂಗಾರೆಡ್ಡಿ ಬಾಸರೆಡ್ಡಿ, ಸುಭಾಶ್ಚಂದ್ರ ಕೌಲಗಿ, ಮಹೇಶ ರೆಡ್ಡಿ ಮುದ್ನಾಳ ಸೇರಿ ಇತ್ತರರು ಉಪಸ್ಥಿತರಿದ್ದರು.
ಸಿದ್ದಪ್ಪ ಹೊಟ್ಟಿ ಅವರು ತಾವು ಹಿಡಿದಿದ್ದನ್ನು ಸಾಧಿಸಿ ತೋರಿಸಿದ್ದರಿಂದಾಗಿ ಇವತ್ತು ಮಂಡ್ಯ ದೆಹಲಿಯಿಂದ ಅವರ ಆಪ್ತರು ಹಿತೈಷಿಗಳು ಬಂದಿದ್ದಾರೆ.-ಚನ್ನಾರೆಡ್ಡಿ ಪಾಟೀಲ ತುನ್ನೂರು, ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.