ಹುಣಸಗಿ : ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದಿಂದ ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬುಲೆರೊ ವಾಹನ ಪಲ್ಟಿಯಾದ ಪರಿಣಾಮವಾಗಿ ಒಬ್ಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು, 34ಕ್ಕೂ ಹೆಚ್ಚು ಜನರಿಗೆ ಗಾಯವಾದ ಘಟನೆ ಭಾನುವಾರ ನಡೆದಿದೆ.
ಈ ಘಟನೆಯು ಹುಣಸಗಿ ಕೆಂಭಾವಿ ಮುಖ್ಯ ರಸ್ತೆಯ ತಾಲ್ಲೂಕಿನ ಸದಬ ಗ್ರಾಮದ ಬಳಿ ನಡೆದಿದ್ದು, ಮೃತರನ್ನು ಕಲ್ಲದೇವನಹಳ್ಳಿ ಗ್ರಾಮದ ಲಕ್ಷ್ಮಿ (35) ಎಂದು ಗುರುತಿಸಲಾಗಿದೆ. ಕಲ್ಲದೇವನಹಳ್ಳಿ ಗ್ರಾಮದ ಕೂಲಿ ಕಾರ್ಮಿಕರು ಭಾನುವಾರ ಬೆಳಿಗ್ಗೆ ಎಲ್ಲರೂ ಒಂದೇ ವಾಹನದಲ್ಲಿ ಮೆಣಸಿನಕಾಯಿ ಬಿಡಿಸಲು ಹೊರಟಿದ್ದರು ಎಂದು ತಿಳಿದು ಬಂದಿದೆ. ಗಾಯಗೊಂಡಿದ್ದ 34 ಜನರಿಗೆ ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು.
ಗಂಭೀರವಾಗಿ ಗಾಯಗೊಂಡಿದ್ದ 8 ಜನರನ್ನು ವಿಜಯಪುರ, ಯಾದಗಿರಿ ಹಾಗೂ ಕಲಬುರಗಿ ಆಸ್ಪತ್ರೆಗೆ ಕಳಿಸಿಕೊಡಲಾಗಿದೆ ಎಂದು ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದ ಡಾ.ರಶೀದ್ ಹಾಗೂ ಡಾ. ಉಮಾ ತಿಳಿಸಿದರು. ಘಟನಾ ಸ್ಥಳಕ್ಕೆ ಹುಣಸಗಿ ಸಿಪಿಐ ಸಚಿನ್ ಭೇಟಿ ನೀಡಿದ್ದು ಈ ಕುರಿತು ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದತ್ತ ಧಾವಿಸಿದ್ದರಿಂದಾಗಿ ಕೆಲಹೊತ್ತು ಆಸ್ಪತ್ರೆ ಜನರಿಂದ ತುಂಬಿತ್ತು. ಗಾಯಾಳುಗಳ, ಕುಟಂಬಸ್ಥರ ಆಕ್ರಂದನ ಹೆಚ್ಚಾಗಿತ್ತು. ವಿಷಯ ತಿಳಿದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಾಂಗ್ರೆಸ್ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ರಾಜಾ ಕುಮಾರ ನಾಯಕ, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಜಿ.ಪಂ. ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ, ಮಲ್ಲಣ್ಣ ಸಾಹುಕಾರ, ಪಟ್ಟಣ ಪಂಚಾಯಿತಿ ಸದಸ್ಯ ಶರಣು ದಂಡಿನ್, ಸಿದ್ದು ಮುದಗಲ್ಲ, ನಿಂಗರಾಜ ಬಾಚಿಮಟ್ಟಿ, ಬಸವರಾಜ ಸಜ್ಜನ್, ಆರ್.ಎಂ.ರೇವಡಿ, ರವಿ ಮಲಗಲದಿನ್ನಿ ಹಾಗೂ ಇತರರು ಭೇಟಿ ನೀಡಿ ಘಟನೆಯ ಮಾಹಿತಿ ಪಡೆದುಕೊಂಡು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.