ADVERTISEMENT

ಯಾದಗಿರಿ: ಲಸಿಕಾಕರಣಕ್ಕೆ ಜಿಲ್ಲಾಧಿಕಾರಿ ಮನವೊಲಿಕೆ

ಹತ್ತಿಕುಣಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ; ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 15:07 IST
Last Updated 25 ಅಕ್ಟೋಬರ್ 2021, 15:07 IST
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಚಿನ್ನದ ವ್ಯಾಪಾರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸಮ್ಮುಖದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡಿದರು
ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಚಿನ್ನದ ವ್ಯಾಪಾರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸಮ್ಮುಖದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ನೀಡಿದರು   

ಯಾದಗಿರಿ: ತಾಲ್ಲೂಕಿನ ಹತ್ತಿಕುಣಿ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಮನಾಯಕ ತಾಂಡಾಕ್ಕೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಲಸಿಕೆ ನೀಡಬೇಕು. ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಮನವೊಲಿಸಿ ಲಸಿಕೆ ಹಾಕುವುದರಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಪಿಡಿಓ, ಗ್ರಾಮ ಲೆಕ್ಕಿಗರು, ಆರೋಗ್ಯ ಇಲಾಖೆ ಸಿಬ್ಬಂದಿ ಪ್ರಮುಖ ಪಾತ್ರವಹಿಸಬೇಕು. ಅಧಿಕಾರಿಗಳು ಕಡ್ಡಾಯವಾಗಿ ಡಾಟಾ ಎಂಟ್ರಿ ಮಾಡಬೇಕು ಎಂದು ಸೂಚಿಸಿದರು.

ಕೋವಿಡ್ ಲಸಿಕಾಕರಣದ ಬಗ್ಗೆ ಜನರಲ್ಲಿ ತಪ್ಪು ಮಾಹಿತಿ ಇದೆ. ಅದನ್ನು ದೂರ ಮಾಡಬೇಕಾಗಿದೆ. ಪ್ರತಿ ಗ್ರಾಮದಲ್ಲಿ ಸಭೆ ಮಾಡಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ADVERTISEMENT

ಹತ್ತಿಕುಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ ಉಪಕೇಂದ್ರಗಳಿವೆ. 27,147 ಜನಸಂಖ್ಯೆಯಿದೆ. ಇದರಲ್ಲಿ 15,813 ಅರ್ಹ ಫಲಾನುಭವಿಗಳಿದ್ದಾರೆ. 12,178 ಫಲಾನುಭವಿಗಳಿಗೆ ಲಸಿಕೆ ನೀಡಿ ಶೇಕಡ 77 ರಷ್ಟು ಗುರಿ ತಲುಪಿದೆ. ಇನ್ನೂ 3,500 ಜನರು ವಲಸೆ ಹೋಗಿದ್ದು, 266 ಜನರು ನಿರಾಕರಿಸಿದ್ದಾರೆ ಎಂದು ಆರೋಗ್ಯ ಕೇಂದ್ರದ ವೈದ್ಯರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಮಾತಿಗೆ ಒಪ್ಪಿಗೆ:

ಹತ್ತಿಕುಣಿ ಗ್ರಾಮದಲ್ಲಿನ ಚಿನ್ನದ ವ್ಯಾಪಾರಿಯೊಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಯ ತೀವ್ರ ಪ್ರಯತ್ನದ ಹೊರತಾಗಿಯೂ ಲಸಿಕೆ ಹಾಕಿಸಿಕೊಳ್ಳಲು ಒಪ್ಪಿರಲಿಲ್ಲ. ಈ ಸಂಗತಿಯನ್ನು ಸಿಬ್ಬಂದಿ ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಅವರೇ ಖುದ್ದಾಗಿ ಅಂಗಡಿಗೆ ಭೇಟಿ ಮಾತನಾಡಿಸಿದರು.

’ನನಗೆ ಕೋವಿಡ್‌ ಬಂದಿಲ್ಲ. ಕೋವಿಡ್‌ ಬಂದವರಿಗೆ ಲಸಿಕೆ ಹಾಕಿ. ನನಗ್ಯಾಕೆ’ ಎಂದು ಪಟ್ಟು ಹಿಡಿದಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ’ಗ್ರಾಹಕರು ನಿಮ್ಮ ಅಂಗಡಿಗೆ ಬಂದಾಗ ಅವರಿಗೆ ಕೋವಿಡ್‌ ಬಂದಿದ್ದರೆ ಆ ಸೋಂಕು ನಿಮಗೆ ಬರುವುದಿಲ್ಲವೆ. ನೀವೂ ಲಸಿಕೆ ಹಾಕಿಸಿಕೊಂಡರೆ ನೀವು ಮತ್ತು ನಿಮ್ಮ ಕುಟುಂಬದವರು ಸುರಕ್ಷಿತವಾಗಿರುತ್ತೀರಿ’ ಎಂದು ಮನವರಿಕೆ ಮಾಡಿಕೊಟ್ಟಾಗ ಅಂಗಡಿಯಾತ ಕೊನೆಗೂ ಲಸಿಕಾಕರಣಕ್ಕೆ ಒಪ್ಪಿದ ಪ್ರಸಂಗ ನಡೆಯಿತು.

ಲಸಿಕೆ ನಿರಾಕರಣೆ ಮತ್ತು ಗುಳೆ ಹೋದವರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದಾಗ ಅದನ್ನು ಖಾತ್ರಿ ಪಡಿಸಿಕೊಳ್ಳಲು ರಾಮನಾಯಕ ತಾಂಡಾ ಮತ್ತು ಹತ್ತಿಕುಣಿ ಗ್ರಾಮದ ಮನೆಗಳಿಗೆ ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಪರಿಶೀಲಿಸಿ ವಲಸೆ ಹೋದವರ ಬಗ್ಗೆ ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಪ್ರಶಾಂತ ಹನಗಂಡಿ, ಯಾದಗಿರಿ ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ, ಜಿಲ್ಲಾ ನೋಡಲ್ ಅಧಿಕಾರಿ ಡಾ.ಸಾಧಿಕ್, ಯಾದಗಿರಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ, ಹತ್ತಿಕುಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರಾಮಕೃಷ್ಣಾರೆಡ್ಡಿ ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.