ಯಾದಗಿರಿ: ಸರ್ಕಾರಿ ಆಸ್ಪತ್ರೆಗೆ ನಿತ್ಯವೂ ನೂರಾರು ಜನ ರೋಗಿಗಳು ಬರುತ್ತಾರೆ. ಆದರೆ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ಕೆಲ ಬಾರಿ ವೈದ್ಯರೇ ಇರುವುದಿಲ್ಲ. ವೈದ್ಯರು ಇಲ್ಲದ ಕಾರಣ ಹೆರಿಗೆಗೆ ಬರುವ ಗರ್ಭಿಣಿಯರು ಮತ್ತು ಚಿಕಿತ್ಸೆಗೆ ಬರುವ ಬಾಣಂತಿಯರು ತೊಂದರೆ ಅನುಭವಿಸುತ್ತಾರೆ. ಅನಿವಾರ್ಯವಾಗಿ ಅವರು ಖಾಸಗಿ ಆಸ್ಪತ್ರೆಗೆ ಮೊರೆ ಹೋಗಬೇಕಾಗುತ್ತದೆ.
ಇದು ಜಿಲ್ಲೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗಳ ಚಿತ್ರಣ. ಜಿಲ್ಲೆಯಲ್ಲಿ 6 ತಾಲ್ಲೂಕುಗಳಿದ್ದು, ಹಳೆ ತಾಲ್ಲೂಕುಗಳಲ್ಲಿ ಮಾತ್ರ ತಾಲ್ಲೂಕು ಆಸ್ಪತ್ರೆ ಇವೆ. ಹೊಸ ತಾಲ್ಲೂಕುಗಳಲ್ಲಿ ಇನ್ನೂ ಸಮುದಾಯ ಆರೋಗ್ಯ ಕೇಂದ್ರಗಳಿವೆ.
ಆಸ್ಪತ್ರೆಗಳ ವಿವರ:
ಜಿಲ್ಲೆಯಲ್ಲಿ ಒಂದು ಜಿಲ್ಲಾಸ್ಪತ್ರೆ, ಎರಡು ಸರ್ಕಾರಿ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆ, 3 ನಗರ ಆರೋಗ್ಯ ಕೇಂದ್ರ, 6 ಸಮುದಾಯ ಆರೋಗ್ಯ ಕೇಂದ್ರಗಳು, 41 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 166 ಉಪ ಕೇಂದ್ರಗಳು, 8 ವಿಸ್ತಿರ್ಣ ಘಟಕಗಳಿವೆ.
ಯಾದಗಿರಿಯಲ್ಲಿ ಹಳೆ ಜಿಲ್ಲಾಸ್ಪತ್ರೆಯನ್ನು ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನಾಗಿ ಬದಲಿಸಲಾಗಿದೆ. ಆದರೆ, ವೈದ್ಯರ ತೀವ್ರ ಕೊರತೆಯಿದೆ. ಎರಡು ತಿಂಗಳ ಹಿಂದೆ ಮೂವರು ಸ್ತ್ರೀರೋಗ ತಜ್ಞರು ಇದ್ದರು. ಆದರೆ, ಈಗ ಇಬ್ಬರೇ ಇದ್ದಾರೆ. ಹೆರಿಗೆ, ಶಸ್ತ್ರಚಿಕಿತ್ಸೆಗೆ ಹಿನ್ನಡೆಯಾಗಿದೆ.
ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ನಾಲ್ವರು ಸ್ತ್ರೀರೋಗತಜ್ಞರು, ಇಬ್ಬರು ಅರಿವಳಿಕೆ ತಜ್ಞರು, ನಾಲ್ವರು ಮಕ್ಕಳ ವೈದ್ಯರು ಇರಬೇಕು. ಆದರೆ, ಇಲ್ಲಿ ನಾಲ್ವರಲ್ಲಿ ಇಬ್ಬರು ತಜ್ಞ ವೈದ್ಯರು ಮತ್ತು ಒಬ್ಬರು ಅರಿವಳಿಕೆ ತಜ್ಞರು ಇದ್ದಾರೆ.
ದಾದಿಯರ ಮೇಲೆ ಅವಲಂಬನೆ:
ನಗರ ಸೇರಿದಂತೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಕೊರತೆಯಿಂದ ದಾದಿಯರ ಮೇಲೆಯೇ ಅವಲಂಬನೆ ಆಗುವಂತೆ ಆಗಿದೆ.
ಹಳ್ಳಿ ಆಸ್ಪತ್ರೆಗಳಲ್ಲಿ ತಿಂಗಳುಗಳೂ ಕಳೆದರೂ ವೈದ್ಯರು ಆಸ್ಪತ್ರೆಗೆ ಮುಖ ಮಾಡುವುದಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮನೆ ಮಾಡಿರುವ ವೈದ್ಯರು ಹಳ್ಳಿ ಆಸ್ಪತ್ರೆಗೆ ಯಾವಾಗ ಬರುತ್ತಾರೆ, ಹೋಗುತ್ತಾರೆ ಎನ್ನುವುದು ತಿಳಿಯುವುದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ತೆರಳದ ಕಾರಣ ದಾದಿಯರು ಆಸ್ಪತ್ರೆಯನ್ನು ಮುನ್ನಡೆಸಿಕೊಂಡು ಹೋಗುವುದು ಸಾಮಾನ್ಯವಾಗಿದೆ.
ವಾಟ್ಸ್ ಆ್ಯಪ್ ಚಿಕಿತ್ಸೆ:
ಜಿಲ್ಲೆಯ ಕೆಲ ಆಸ್ಪತ್ರೆಗಳಲ್ಲಿ ರಾತ್ರಿ ಪಾಳಿಯ ವೈದ್ಯರು ಆಸ್ಪತ್ರೆಗೆ ಬಾರದೇ ವಾಟ್ಸ್ ಆ್ಯಪ್ ಚಿಕಿತ್ಸೆ ನೀಡುತ್ತಿದ್ದಾರೆ. ರಾತ್ರಿ ವೇಳೆ ಆಸ್ಪತ್ರೆಗೆ ತೆರಳಿದಾಗ ವೈದ್ಯರಿಲ್ಲದ್ದಿದಾಗ ದಾದಿಯರು ಆ ವೈದ್ಯರಿಗೆ ವಾಟ್ಸ್ ಆ್ಯಪ್ ಸಂದೇಶ ಮಾಡುತ್ತಾರೆ. ಅಲ್ಲಿಂದಲೇ ವೈದ್ಯರು ಇಂತಿಂಥ ಮಾತ್ರೆ, ಇಂಜೆಕ್ಷನ್ ನೀಡಬೇಕು ಎಂದು ಮಾಹಿತಿ ನೀಡುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಸಿಸೇರಿಯನ್ ಆದ ಬಾಣಂತಿಯರು ಎರಡು–ಮೂರು ದಿನ ಆಸ್ಪತ್ರೆಯಲ್ಲಿ ಇರಬೇಕು. ಆದರೆ, ಅವರಿಗೆ ಬಿಸಿ ನೀರು, ಸರಿಯಾದ ಊಟ, ಸ್ವಚ್ಛತೆ ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಸೌಲಭ್ಯಗಳು ಇಲ್ಲದಿದ್ದರಿಂದ ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳುತ್ತಾರೆ ಎಂದು ತೇಕರಾಳ ಗ್ರಾಮಸ್ಥ ಹಣಮಂತರಾಯ ಪಾಟೀಲ ಆರೋಪಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.