ADVERTISEMENT

ಯಾದಗಿರಿ: ಶಿಕ್ಷಕನ ಕೈಹಿಡಿದ ವಿಘ್ನ ನಿವಾರಕ

ಕೋವಿಡ್‌ ಕಾರಣದಿಂದ ಚಿತ್ರಕಲಾ ಶಿಕ್ಷಕನ ಉದ್ಯೋಗ ನಷ್ಟ

ಬಿ.ಜಿ.ಪ್ರವೀಣಕುಮಾರ
Published 1 ಸೆಪ್ಟೆಂಬರ್ 2021, 19:31 IST
Last Updated 1 ಸೆಪ್ಟೆಂಬರ್ 2021, 19:31 IST
ಯಾದಗಿರಿಯ ಗಂಜ್‌ ಪ್ರದೇಶದಲ್ಲಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಿರುವ ಚಿತ್ರಕಲಾ ಶಿಕ್ಷಕ ಭೀಮೇಶ ಮಿರ್ಜಾಪುರಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ
ಯಾದಗಿರಿಯ ಗಂಜ್‌ ಪ್ರದೇಶದಲ್ಲಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಅಂತಿಮ ರೂಪ ನೀಡುತ್ತಿರುವ ಚಿತ್ರಕಲಾ ಶಿಕ್ಷಕ ಭೀಮೇಶ ಮಿರ್ಜಾಪುರಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ   

ಯಾದಗಿರಿ: ಕೋವಿಡ್‌ ಕಾರಣದಿಂದ ಶಾಲೆ ಇಲ್ಲದೇ ಎರಡು ವರ್ಷಗಳಿಂದ ಖಾಲಿ ಕುಳಿತಿರುವ ಚಿತ್ರಕಲಾ ಶಿಕ್ಷಕರಿಬ್ಬರು ಈ ಬಾರಿ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ತಾತ್ಕಾಲಿಕ ಉದ್ಯೋಗ ಕಂಡುಕೊಂಡಿದ್ದಾರೆ.

ನಗರದ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದ ಭೀಮೇಶ ಮಿರ್ಜಾಪುರ ಅವರಿಗೆ ಕೋವಿಡ್‌ ಕಾರಣದಿಂದ ಉದ್ಯೋಗ ನಷ್ಟವಾಗಿದೆ.ನಗರದ ಎಪಿಎಂಸಿ ಮಾರುಕಟ್ಟೆಯ ಸ್ನೇಹಿತರ ಮಳಿಗೆಯಲ್ಲಿ ಎರಡು ತಿಂಗಳಿನಿಂದ ಜೇಡಿಮಣ್ಣಿನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅರುಣಕುಮಾರ ಯಾದಗಿರಿ ಅವರು ಗುರುಮಠಕಲ್ ಪಟ್ಟಣದ ಖಾಸಗಿ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದರು. ಈಗ ಅವರೂ ನಿರುದ್ಯೋಗಿ. ಭೀಮೇಶ ಜೊತೆಗೆ ಅವರೂ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ADVERTISEMENT

140ಕ್ಕೂ ಹೆಚ್ಚು ಮೂರ್ತಿ ತಯಾರಿಕೆ: ಬೆಂಗಳೂರಿನಿಂದ 50 ಕೆ.ಜಿಯ 20 ಚೀಲ ಜೇಡಿ ಮಣ್ಣು ತರಿಸಿ 140ಕ್ಕೂ ಹೆಚ್ಚು ಮೂರ್ತಿಗಳನ್ನು ತಯಾರಿಸಿದ್ದಾರೆ. ಎಂಟು ಇಂಚಿನಿಂದ ಎರಡೂವರೆ ಅಡಿ ಎತ್ತರದವರೆಗಿನ ಮೂರ್ತಿಗಳಿಗೆ ರೂಪಕೊಟ್ಟಿದ್ದಾರೆ. ‘3ಡಿ’ ಮಾದರಿಯಲ್ಲಿ ಮೂರ್ತಿಗಳನ್ನು ರೂಪಿಸಿದ್ದಾರೆ.

‘ಶಾಲೆಯಲ್ಲಿ ಐದು ವರ್ಷ ಚಿತ್ರಕಲಾ ಶಿಕ್ಷಕನಾಗಿದ್ದಾಗ ಜೀವನ ಚೆನ್ನಾಗಿತ್ತು. ವೇತನವೂ ಸಿಗುತ್ತಿತ್ತು. ಕೋವಿಡ್‌ ನನ್ನ ಉದ್ಯೋಗ ಕಸಿದುಕೊಂಡಿತು. ₹40 ಸಾವಿರ ಸಾಲ ಮಾಡಿ, ಈಗ ಗಣೇಶನ ಮಣ್ಣಿನ ಮೂರ್ತಿಗಳನ್ನು ತಯಾರಿಸಿದ್ದೇವೆ. ವಿಘ್ನನಿವಾರಕ ಕೈ ಹಿಡಿಯುತ್ತಾನೆ ಎನ್ನುವ ಭರವಸೆ ಇದೆ. ಸ್ನೇಹಿತರೊಂದಿಗೆ ಸೇರಿ ನಗರದಲ್ಲಿ ಮಾರಾಟ ಮಾಡುತ್ತೇನೆ’ ಎನ್ನುತ್ತಾರೆ ಭೀಮೇಶ ಮಿರ್ಜಾಪುರ.

‘ಪತ್ನಿ, ಮಕ್ಕಳನ್ನು ಸಾಕುವುದೇ ಕಷ್ಟವಾಗಿತ್ತು. ಸ್ನೇಹಿತರು ಸೇರಿ ಮೂರ್ತಿ ತಯಾರಿಸಿದ್ದೇವೆ. ನಮ್ಮ ಶ್ರಮಕ್ಕೆ ಬೆಲೆ ಸಿಗುವ ಭರವಸೆ ಇದೆ’ ಎನ್ನುವುದು ಅರುಣಕುಮಾರ ಯಾದಗಿರಿ ಅವರ ಹೇಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.