ADVERTISEMENT

ಯಾದಗಿರಿ: ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ ಜಾಗೃತಿ ಜಾಥಾ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 5:06 IST
Last Updated 7 ಡಿಸೆಂಬರ್ 2022, 5:06 IST
   

ಯಾದಗಿರಿ: ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಾವಯವ ಉತ್ಪನ್ನಗಳ ಹಾಗೂ ಸಿರಿಧಾನ್ಯಗಳ ಕುರಿತು ರೈತರಿಗೆ ಮತ್ತು ಗ್ರಾಹಕರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಂಗವಾಗಿ 'ಸಿರಿಧಾನ್ಯಗಳ ನಡಿಗೆ ಆರೋಗ್ಯದ ಕಡೆಗೆ' ಜಾಗೃತಿ ಜಾಥಾ ನಗರದಲ್ಲಿ ಬುಧವಾರ ನಡೆಯಿತು.

ಹೊಸ ಬಸ್ ನಿಲ್ದಾಣದಿಂದ ಆರಂಭವಾದ ನಡಿಗೆ ಶಾಸ್ತ್ರಿ ವೃತ್ತ, ಸುಭಾಷ ವೃತ್ತ, ಪದವಿ ಕಾಲೇಜು ಮಾರ್ಗವಾಗಿ ಕಾರ್ಯಕ್ರಮ ನಡೆಯುವ ಬಾಲಾಜಿ ಕಲ್ಯಾಣ ಮಂಟಪ ತಲುಪಿತು.

ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್, ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ADVERTISEMENT

ಡೊಳ್ಳು ಕುಣಿತ ಮೂಲಕ ಜಾಥಾ ಆರಂಭವಾಯಿತು. ಕೃಷಿ ಇಲಾಖೆ ವಾಹನಗಳಲ್ಲಿ ರೈತ ಗೀತೆ, ಜಾಗೃತಿ ಸಂದೇಶಗಳನ್ನು ಚಿತ್ತರಿಸಲಾಯಿತು.

ಸಿರಿಧಾನ್ಯಗಳು ಸೇವಿಸಿ ಆರೋಗ್ಯ ವೃದ್ಧಿಸಿ, ನವಣೆ ಉಣಿಸು ಬವಣೆ ಬಿಡಿಸು, ಊದಲು ತಿನ್ನೋರ್ಗೆ ಉಬ್ಬಸಾ ಇಲ್ಲ, ಬರಗ ಇದ್ರೆ ಬರಗಾಲದಲ್ಲೂ ಬದುಕು, ಕೊರಲೆ ತಿಂದು ಕೊರಗೋದು ಬಿಡು, ಹಾರಕ ತಿಂದೋರು ಹಾರ್ತ ಹೋದ್ರು, ಸಜ್ಜೆ ತಿಂದು ವಜ್ಜೆ (ವಜನು-ಭಾರ) ಹೊರು ಜೋಳವನ್ನು ತಿಂಬುವನು ತೋಳದಂತಾಗುವನು ಎನ್ನುವ ಫಲಕಗಳನ್ನು ಹಿಡಿದು ಜಾಥಾ ನಡೆಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಆರ್. ನಾಯ್ಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಕೃಷಿ ಉಪ ನಿರ್ದೇಶಕ ಡಾ. ಮತ್ತುರಾಜ್.ಎಸ್, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ, ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಸಮಾಜ ಕಲ್ಯಾಣ ಉಪನಿರ್ದೇಶಕ ಎಸ್.ಎಸ್.ಚನ್ನಬಸವ, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಶೇಷುಲು, ನಗರಸಭೆ ಪೌರಾಯುಕ್ತ ಶರಣಪ್ಪ, ಕೃಷಿ ತಾಂತ್ರಿಕ ಅಧಿಕಾರಿ ರಾಜಕುಮಾರ, ಯಾಮಾರೆಡ್ಡಿ ಮುಂಡಾಸ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.