ADVERTISEMENT

ಯಾದಗಿರಿ: ಕಾಣದ ಸ್ವಚ್ಛತೆ; ಸಾಂಕ್ರಾಮಿಕ ರೋಗಗಳಿಗೆ ದಾರಿ

ಜಿಲ್ಲೆಯಲ್ಲಿ ಆಗಾಗ ಸುರಿಯುತ್ತಿರುವ ಮಳೆ, ಕೋವಿಡ್‌ ನೆಪದಲ್ಲಿ ಸಾಂಕ್ರಾಮಿಕ ರೋಗಗಳ ನಿರ್ಲಕ್ಷ್ಯ

ಬಿ.ಜಿ.ಪ್ರವೀಣಕುಮಾರ
Published 12 ಸೆಪ್ಟೆಂಬರ್ 2021, 19:30 IST
Last Updated 12 ಸೆಪ್ಟೆಂಬರ್ 2021, 19:30 IST
ಯಾದಗಿರಿ ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಡೆಂಗಿ ಪ್ರಕರಣ ಪತ್ತೆ ಹಚ್ಚಲು ಲಾರ್ವಾ ಪರೀಕ್ಷಿಸಿದ ಅಧಿಕಾರಿ
ಯಾದಗಿರಿ ತಾಲ್ಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಡೆಂಗಿ ಪ್ರಕರಣ ಪತ್ತೆ ಹಚ್ಚಲು ಲಾರ್ವಾ ಪರೀಕ್ಷಿಸಿದ ಅಧಿಕಾರಿ   

ಯಾದಗಿರಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ 15 ದಿನಗಳಿಂದ ಆಗಾಗ ತುಂತುರು ಮಳೆ ಸುರಿಯುತ್ತಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತೆ ಆಗಿದೆ.

ನಗರದ ಕೊಳಚೆ ಪ್ರದೇಶ ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಮರೀಚಿಕೆ ಆಗಿರುವುದರಿಂದ ಡೆಂಗಿ, ಚಿಕೂನ್‌ಗುನ್ಯಾ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನೂ ಮಕ್ಕಳಿಂದ ಹಿಡಿದು ದೊಡ್ಡವರ ತನಕ ವೈರಲ್‌ ಜ್ವರ ಕಾಣಿಸಿಕೊಂಡು ಕೆಮ್ಮು, ನೆಗಡಿಯಿಂದ ಜನರು ಬಳಲುತ್ತಿದ್ದಾರೆ.

ಮಳೆಗಾಲದ ಜೂನ್‌, ಜುಲೈ, ಆಗಸ್ಟ್‌, ಸೆಪ್ಟೆಂಬರ್ ತಿಂಗಳಲ್ಲಿ ಚಿಕೂನ್ ಗುನ್ಯಾ, ಡೆಂಗಿ ಜ್ವರ ಹೆಚ್ಚಾಗಿ ಕಾಡುತ್ತವೆ.

ADVERTISEMENT

ಡೆಂಗಿಯು ‘ಈಡಿಸ್ ಈಜೀಪ್ಟಿ’ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ನೀರಿನಲ್ಲಿ ಸಂತಾನೋತ್ಪತ್ತಿಯನ್ನು ಬೆಳೆಸುವ ಈ ಸೊಳ್ಳೆಯು 7 ದಿನಗಳಲ್ಲಿ ಮೊಟ್ಟೆಯಿಂದ ಮರಿ ಸೊಳ್ಳೆಯಾಗಿ ಪರಿವರ್ತನೆಗೊಳ್ಳುತ್ತದೆ. ಡೆಂಗಿ ಹಾಗೂ ಚಿಕೂನ್‍ಗುನ್ಯಾ ರೋಗಗಳು ವೈರಾಣುವಿನಿಂದ ಬರುವ ಕಾಯಿಲೆಗಳು. ಡೆಂಗಿ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ರೋಗಿಯ ತೀವ್ರತೆಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುತ್ತಿದೆ.

ತೀವ್ರ ತಲೆನೋವು, ಕಣ್ಣು ನೋವು, ಕೀಲು ಮತ್ತು ಸ್ನಾಯು ನೋವು, ಹಸಿವಾಗದೇ ಇರುವುದು, ತುರಿಕೆ ಹಾಗೂ ತೀವ್ರ ಜ್ವರ ಡೆಂಗಿ ರೋಗದ ಲಕ್ಷಣಗಳಾಗಿವೆ. ಮಲೇರಿಯಾ ಪ್ರಾಥಮಿಕ ಕಾಯಿಲೆಯಾಗಿದ್ದು, ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯು ಒಬ್ಬರಿಂದ ಒಬ್ಬರಿಗೆ ಈ ರೋಗ ಹರಡುತ್ತದೆ. ಜ್ವರ, ಚಳಿ, ತಲೆನೋವು, ವಾಂತಿ, ಮೈ-ಕೈ ನೋವು ರೋಗದ ಲಕ್ಷಣಗಳಾಗಿವೆ. ನಿಂತ ನೀರಿನ ತಾಣಗಳು ಸೊಳ್ಳೆ ಉತ್ಪತ್ತಿಯ ಕೇಂದ್ರವಾಗಿರುತ್ತವೆ. ಅನಾಫಿಲೀಸ್ ಸೊಳ್ಳೆಯು ನೀರಿನ ಮೇಲೆ 160ರಿಂದ 300 ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಗಳು ಮರಿಯಾಗಿ ಹೊರ ಬರುತ್ತವೆ. ಇಂಥ ಮಾಹಿತಿ ಗ್ರಾಮೀಣ ಭಾಗದ ಜನತೆಗೆ ತಿಳಿಸುವುದು ಅವಶ್ಯವಾಗಿದೆ.

‘ಜಿಲ್ಲಾಧಿಕಾರಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಕೇವಲ ಕೋವಿಡ್‌ಗೆ ಮಾತ್ರ ಲಕ್ಷ್ಯ ಕೊಡದೇ ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ರೋಗಗಳ ಕಡೆ ಗಮನಹರಿಸಿ ಪರೀಕ್ಷೆಗಳನ್ನು ಮಾಡಬೇಕು. ಇಲ್ಲದಿದ್ದರೆ ಇವು ಹೆಚ್ಚಳವಾಗಿ ಜನರು ತೊಂದರೆ ಅನುಭವಿಸಬೇಕಾಗುತ್ತದೆ’ ಎನ್ನುತ್ತಾರೆ ಲೋಕಜನಶಕ್ತಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜಾಅಪ್ಪಾರಾವ ನಾಯಕ.

‘ಸುರಪುರ ನಗರದಲ್ಲಿ ಡೆಂಗಿ ಜ್ವರ ಜಾಸ್ತಿ ಆಗುತ್ತಿದೆ. ಇದು ಮಕ್ಕಳಲ್ಲಿ ಹೆಚ್ಚು ಕಂಡು ಬರುತ್ತಿದೆ. ತಾಲ್ಲೂಕು, ನಗರಸಭೆ ಅಧಿಕಾರಿಗಳು ಪ್ರತಿ ವಾರ್ಡ್‌ಗಳಲ್ಲಿ ಔಷಧಿ ಸಿಂಪಡಿಸಿ ಸ್ವಚ್ಛತೆ ಕಾಪಾಡಬೇಕು’ ಎಂದು ಒತ್ತಾಯಿಸುತ್ತಾರೆ.

‘ಸಾಂಕ್ರಮಿಕ ರೋಗಗಳಿಂದ ರಕ್ಷಣೆ ಪಡೆಯಲು ಸ್ವಚ್ಛತೆಯೊಂದೇ ಪರಿಹಾರ. ಸಾರ್ವಜನಿಕರು ತಮ್ಮ ತಮ್ಮ ಮನೆ ಸುತ್ತಮುತ್ತ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ತ್ಯಾಜ್ಯ ವಸ್ತು ಹಾಗೂ ಇನ್ನಿತರ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು’ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಮುಬಾಸಿರ್ ಸಾಜೀದ್‌ ಅವರು ಹೇಳುತ್ತಾರೆ.

ಜನವರಿಯಿಂದ ಆಗಸ್ಟ್‌ವರೆಗೆ ಡೆಂಗಿ 960 ಪ್ರಕರಣಗಳಲ್ಲಿ 38 ದೃಢಪಟ್ಟಿವೆ. ಚಿಕೂನ್‌ಗುನ್ಯಾ 852 ಶಂಕಿತ ಪ್ರಕರಣಗಳಲ್ಲಿ 25 ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಡೆಂಗಿ ಪ್ರಕರಣಗಳು:

ಜಿಲ್ಲೆಯಲ್ಲಿ 2017ರಲ್ಲಿ 65, 2018ರಲ್ಲಿ 62, 2019ರಲ್ಲಿ 279, 2020ರಲ್ಲಿ 122, 2021ರ ಆಗಸ್ಟ್‌ ವರಗೆ 63 ಪ್ರಕರಣಗಳು ದೃಢಪಟ್ಟಿವೆ.

ಚಿಕೂನ್‌ಗುನ್ಯಾ ಪ್ರಕರಣಗಳಲ್ಲಿ 2017ರಲ್ಲಿ 35, 2018ರಲ್ಲಿ 100, 2019ರಲ್ಲಿ 248, 2020ರಲ್ಲಿ 71, 2021ರಲ್ಲಿ 51 ಪ್ರಕರಣಗಳು ದೃಢಪಟ್ಟಿವೆ.2017ರಲ್ಲಿ 16 ಮಲೇರಿಯಾ ಪ್ರಕರಣಗಳು, 2018ರಲ್ಲಿ 5, 2020ರಲ್ಲಿ 3 ಪ್ರಕರಣಗಳು ದೃಢಪಟ್ಟಿವೆ.


ಜೂನ್‌ನಿಂದ ಆಗಸ್ಟ್‌ವರೆಗೆ
ತಾಲ್ಲೂಕು;ಡೆಂಗಿ, ಚಿಕೂನ್‌ಗುನ್ಯಾ

ಯಾದಗಿರಿ; 10;03
ಶಹಾಪುರ;05;15
ಸುರಪುರ;10;7
ಒಟ್ಟು;25;25

5 ವರ್ಷಗಳ ಸಾಂಕ್ರಾಮಿಕ ರೋಗಗಳ ವಿವರ
ಯಾದಗಿರಿ; ಡೆಂಗಿ; 365
ಶಹಾಪುರ; ಡೆಂಗಿ; 156
ಸುರಪುರ; ಡೆಂಗಿ; 70

ಯಾದಗಿರಿ; ಚಿಕೂನ್‌ಗುನ್ಯಾ; 323
ಶಹಾಪುರ; ಚಿಕೂನ್‌ಗುನ್ಯಾ; 116
ಸುರಪುರ; ಚಿಕೂನ್‌ಗುನ್ಯಾ; 73
(ಆಧಾರ: ಆರೋಗ್ಯ ಇಲಾಖೆ)

ಹಳ್ಳಿಯಲ್ಲಿ ಸ್ವಚ್ಛತೆಯೇ ಸವಾಲು

ಶಹಾಪುರ: ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಎಂಬುವುದು ಸವಾಲಿನ ಪ್ರಶ್ನೆಯಾಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇರುವುದಿಲ್ಲ. ತಗ್ಗು ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತಲಿದೆ.

ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಾಗಿಂಗ್ ಮಾಡುವುದು ನಗಣ್ಯವಾಗಿದೆ. ಅಲ್ಲದೆ ನೀರಾವರಿ ಪ್ರದೇಶದ ಜಮೀನುಗಳಲ್ಲಿ ಭತ್ತದ ಗದ್ದೆಯಲ್ಲಿ ನಿರಂತರವಾಗಿ ನೀರು ನಿಲುಗಡೆಯಿಂದ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ರಾತ್ರಿ ಸಮಯದಲ್ಲಿ ಜಾನುವಾರುಗಳಿಗೆ ಸೊಳ್ಳೆ ಪರದೆ ಕಟ್ಟಿ ಸಂರಕ್ಷಣೆ ಮಾಡುವಂತಾಗಿದೆ. ಕೆಲ ದಿನದಿಂದ ಸುರಿದ ಜಿಟಿ ಜಿಟಿ ಮಳೆಯಿಂದ ವಾತಾವರಣದಲ್ಲಿ ಏರುಪೇರು ಆಗಿ ಡೆಂಗಿ, ಮಲೇರಿಯಾ ಹಾಗೂ ಚಿಕೂನ್‌ಗುನ್ಯಾ ರೋಗದ ಬಾಧೆಯಿಂದ ಜನ ಹೈರಾಣಾಗಿದ್ದಾರೆ.

‘ತಾಲ್ಲೂಕಿನ ವನದುರ್ಗ ಗ್ರಾಮದ ತಗ್ಗು ಪ್ರದೇಶದಲ್ಲಿ ಚರಂಡಿ ಹಾಗೂ ಮಳೆ ನೀರು ಸಂಗ್ರಹದಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಅಂಥ ಜಾಗದಲ್ಲಿ ನಲ್ಲಿ ನೀರು ಜನರಿಗೆ ತೆಗೆದುಕೊಂಡು ನಾನಾ ರೋಗಗಳಿಗೆ ಆಹ್ವಾನಿಸುವಂತೆ ಆಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನಹರಿಸಲಿ’ ಎನ್ನುತ್ತಾರೆ ವನದುರ್ಗ ಗ್ರಾಮದ ಮುಖಂಡ ಯಲ್ಲಯ್ಯ ನಾಯಕ ವನದುರ್ಗ.

‘ಪ್ರತಿಯೊಬ್ಬರು ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು. ತ್ಯಾಜ್ಯ ವಸ್ತುಗಳನ್ನು ಎಸೆದು ನೀರು ನಿಲುಗಡೆಯಾದಂತೆ ನೋಡಿಕೊಳ್ಳಬೇಕು. ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಬೇಕು. ಫಾಗಿಂಗ್ ಮಾಡಬೇಕು’ ಎನ್ನುತ್ತಾರೆ ವೈದ್ಯರು ಒಬ್ಬರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಹರಸಾಹಸ

ಸುರಪುರ: ಅವಿಭಜಿತ ಸುರಪುರ ತಾಲ್ಲೂಕಿನಲ್ಲಿ ಪ್ರತಿ ವರ್ಷ ಸಾಂಕ್ರಾಮಿಕ ರೋಗಗಳು ಕಂಡು ಬರುತ್ತವೆ. ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹರಸಾಹಸ ಪಡುವಂತಾಗಿದೆ.

ಪ್ರವಾಹ ತಗ್ಗಿದ ಮೇಲೆ ಉಳಿಯುವ ಮಾಲಿನ್ಯ, ಮಳೆಯಿಂದ ತೆಗ್ಗು ಪ್ರದೇಶದಲ್ಲಿ ನಿಲ್ಲುವ ನೀರು, ಗ್ರಾಮಗಳಲ್ಲಿ ತಾಂಡವವಾಡುತ್ತಿರುವ ಹೊಲಸು ಇವೆಲ್ಲವೂ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿವೆ.

ಕೆಲ ದಿನಗಳ ಹಿಂದೆ ಭೈರಿಮರಡಿ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರಿಗೆ ಚಿಕೂನ್‍ಗುನ್ಯಾ ಕಂಡು ಬಂದಿತ್ತು. ಆರೋಗ್ಯ ಇಲಾಖೆ ಅಲ್ಲೆ ಕ್ಯಾಂಪ್ ಮಾಡಿ ಚಿಕಿತ್ಸೆ ನೀಡಿದ ಪರಿಣಾಮ ರೋಗ ವಾಸಿಯಾಗಿದೆ.

ಕಕ್ಕೇರಾ, ಮಂಜಲಾಪುರದಲ್ಲಿ ಕೆಲ ಜನರು ಚಿಕೂನ್‍ಗುನ್ಯಾ ಪೀಡಿತರಾಗಿದ್ದರು. ನಾರಾಯಣಪುರದಲ್ಲಿ ಮಲೇರಿಯಾ ಹರಡಿತ್ತು. ರಂಗಂಪೇಟೆಯಲ್ಲಿ ಕೆಲವರಿಗೆ ಡೆಂಗೆ ಬಂದಿತ್ತು. ಯಾಳಗಿಯಲ್ಲಿ ಕಾಲರಾ ಜನರನ್ನು ಕಾಡಿತ್ತು. ಈಗ ಎಲ್ಲೆಡೆ ಸಾಂಕ್ರಾಮಿಕ ರೋಗ ಹತೋಟಿಗೆ ಬಂದಿದೆ. ಆದರೂ ಸಾಂಕ್ರಾಮಿಕದ ಭೀತಿ ಇದ್ದೇ ಇದೆ.

ತಾಲ್ಲೂಕಿನಲ್ಲಿ 15 ಪ್ರಾಥಮಿಕ ಆರೋಗ್ಯ ಕೇಂದ್ರ, 1 ಸಮೂದಾಯ ಆರೋಗ್ಯ ಕೇಂದ್ರ, 1 ತಾಲ್ಲೂಕು ಅಸ್ಪತ್ರೆ ಇದೆ. ಎಲ್ಲ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತರಿದ್ದಾರೆ.

ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳ ಬಗ್ಗೆ, ಬರದಂತೆ ತಡೆಯುವ ಬಗ್ಗೆ ಅರಿವು ಮೂಡಿಸಿದ್ದಾರೆ. ಎಲ್ಲ ಗ್ರಾಮಗಳಲ್ಲಿ ಪೈಪ್‍ಲೈನ್ ಸೋರಿಕೆಯಾಗದಂತೆ ನೋಡಿಕೊಳ್ಳುವುದು ಮತ್ತು ನೈರ್ಮಲ್ಯ ಕಾಪಾಡುವ ಬಗ್ಗೆ ಸೂಚನೆ ನೀಡಲಾಗಿದೆ.

* ಕಳೆದೆರಡು ವರ್ಷಕ್ಕಿಂತ ಈ ವರ್ಷ ಕಡಿಮೆ ಪ್ರಮಾಣದಲ್ಲಿ ಡೆಂಗಿ, ಚಿಕೂನ್‌ಗುನ್ಯಾ ಕಾಣಿಸಿಕೊಂಡಿದೆ. ಮಲೇರಿಯಾ ಅಲ್ಲಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ

-ಡಾ.ಇಂದುಮತಿ ಕಾಮಶೆಟ್ಟಿ, ಡಿಎಚ್‌ಒ

* ಕೋವಿಡ್‌ ಲಸಿಕೆ ಜೊತೆಗೆ ಸಾಂಕ್ರಾಮಿಕ ರೋಗಗಳ ಕುರಿತು ಜನತೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ಹೆಚ್ಚಿನ ಪ್ರಕರಣಗಳು ಕಂಡು ಬಂದಿಲ್ಲ.

-ಡಾ.ಲಕ್ಷ್ಮಿಕಾಂತ, ಮಲೇರಿಯಾ ನಿಯಂತ್ರಣ ಅಧಿಕಾರಿ

* ಸುರಪುರ ತಾಲ್ಲೂಕಿನಲ್ಲಿ ಚರಂಡಿ ಸ್ವಚ್ಛತೆ ಮಾಡದಿದ್ದರಿಂದ ಸೊಳ್ಳಗಳ ಉತ್ಪಾದನೆಯಾಗಿ ಡೆಂಗಿ, ಚಿಕೂನ್‌ಗುನ್ಯಾ ಹೆಚ್ಚಾಗುತ್ತಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕು

-ರಾಜಾಅಪ್ಪಾರಾವ ನಾಯಕ, ಲೋಕಜನಶಕ್ತಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ

* ಜಿಟಿ ಜಿಟಿ ಮಳೆ ಹಾಗೂ ತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗಿ ಸೊಳ್ಳೆ ಉತ್ಪತ್ತಿಯಾಗಿ ಡೆಂಗಿ ಹಾಗೂ ಇನ್ನಿತರ ಕಾಯಿಲೆಗಳು ಬರುತ್ತಲಿವೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು

-ಡಾ.ರಮೇಶ ಗುತ್ತೆದಾರ, ತಾಲ್ಲೂಕು ವೈದ್ಯಾಧಿಕಾರಿ ಶಹಾಪುರ

* ಸಾಂಕ್ರಾಮಿಕ ರೋಗ ಕಂಡು ಬಂದರೆ ರೋಗಿ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬೇಕು. ಇದು ರೋಗ ಹತೋಟಿ ಮಾಡಲು ನೆರವಾಗುತ್ತದೆ

-ಡಾ. ರಾಜಾ ವೆಂಕಪ್ಪನಾಯಕ, ಟಿಎಚ್ಒ ಸುರಪುರ

* ಸಾಂಕ್ರಾಮಿಕ ರೋಗಗಳು ಹರಡಲು ಮುಖ್ಯ ಕಾರಣ ಗ್ರಾಮಗಳಲ್ಲಿ ಇರುವ ಅಶುಚಿತ್ವ. ಗ್ರಾಮಗಳಲ್ಲಿ ನೈರ್ಮಲ್ಯ ಕಾಪಾಡದಿದ್ದರೆ ಅಭಿವೃದ್ಧಿ ಅಧಿಕಾರಿಯನ್ನು ಹೊಣೆ ಮಾಡಬೇಕು

-ಮಲ್ಲುನಾಯಕ ಕಬಾಡಗೇರಿ, ಮುಖಂಡ ಸುರಪುರ

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.