ADVERTISEMENT

ಯಾದಗಿರಿ: ನಾಡಿನ ನೆಲಮೂಲ ಸಂಸ್ಕೃತಿ ಅನಾವರಣ

ಕಣ್ಮನ ಸೆಳೆದ ಜನಪದ ನೃತ್ಯ,  ಗೀತೆಗಳ ಗಾಯನ: 696 ಸ್ಪರ್ಧಿಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2025, 5:50 IST
Last Updated 4 ಡಿಸೆಂಬರ್ 2025, 5:50 IST
ಯಾದಗಿರಿಯಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಡೊಳ್ಳಿನ ನೃತ್ಯ ಪ್ರದರ್ಶಿಸಿದ ಚಿತ್ರದುರ್ಗದ ತಂಡ
ಯಾದಗಿರಿಯಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಡೊಳ್ಳಿನ ನೃತ್ಯ ಪ್ರದರ್ಶಿಸಿದ ಚಿತ್ರದುರ್ಗದ ತಂಡ   

ಯಾದಗಿರಿ: ನಾಡಿನ ನೆಲಮೂಲ ಸೊಗಡಿನ ಜಾನಪದದ ಸುಶ್ರಾವ್ಯ ಸಂಗೀತ, ಗಾಯನ ಮತ್ತು ರಾಗಕ್ಕೆ ತಕ್ಕಂತಹ ವಾದನ, ಮೈಮನವನ್ನು ಪುಳಕಿಸುವ ಜನಪದ ನೃತ್ಯ, ಅಪ್ರತಿಮ ಮಾತುಗಾರಿಕೆಯ ಭಾಷಣದ ವಾಗ್ಝರಿ, ಕಡಿದಾದ ಕಲ್ಲುಬಂಡೆಗಳನ್ನು ಏರುವ ಸಾಹಸ, ಮೈ ನವಿರೇಳಿಸಿದ ಹಗ್ಗದ ಮಲ್ಲಕಂಬದ ಯೋಗಾಸನ...

ಇಂತಹ ಕಣ್ಮನ ಸೆಳೆಯುವ ಸಾಂಸ್ಕೃತಿಕ ಕಲಾ ಪ್ರತಿಭೆಗೆ ವೇದಿಕೆಯಾಗಿದ್ದು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ರಾಜ್ಯಮಟ್ಟದ ಯುವಜನೋತ್ಸವ.

ಸಚಿವ ಶರಣಬಸಪ್ಪ ದರ್ಶನಾಪುರ ಅವರು ದೀಪ ಬೆಳಗಿಸಿ, ಮಡಿಕೆಯಲ್ಲಿ ಧಾನ್ಯಗಳು ತುಂಬಿ ಉತ್ಸವಕ್ಕೆ ಚಾಲನೆ ನೀಡಿದರು. ಸಿಹಿ, ಖಾರದ ಊಟ ಸವಿದ ಬಳಿಕ ಪ್ರಧಾನ ವೇದಿಕೆ, ಸರ್ಕಾರಿ ಪದವಿ ಕಾಲೇಜು ಸಭಾಂಗಣ, ವಿದ್ಯಾಮಂಗಲ ಕಾರ್ಯಾಲಯ, ಕನ್ನಡ ಭವನ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ ಭವನದ ವೇದಿಕೆಗಳ ಮೇಲೆ ಯುವಕರು ತಮ್ಮ ಪ್ರತಿಭೆ ಪ್ರದರ್ಶನ ನೀಡಿದರು. 

ADVERTISEMENT

ಜನಪದ ಗೀತೆ, ಜನಪದ ನೃತ್ಯ, ಚಿತ್ರಕಲೆ, ಕವಿತೆ, ಕಥೆ, ವಿಜ್ಞಾನ ಮೇಳ ಹಾಗೂ ಘೋಷಣೆ ಸ್ಪರ್ಧೆಗಳಲ್ಲಿ ಯುವಜನತೆ ಭಾಗವಹಿಸಿ ಪ್ರತಿಭೆ ಪ್ರದರ್ಶನ ಮಾಡಿದರು. ಪೂಜಾ ಕುಣಿತ, ಪಟ ಕುಣಿತ, ಜಾನಪದ ನೃತ್ಯ, ಜಾನಪದ ಗೀತೆಗಳ ಗಾಯನ, ಮಂಟೇಸ್ವಾಮಿ, ಮಲೆ ಮಾದಪ್ಪನ ಕಾವ್ಯಗಳು, ಜೇನು ಕುರುಬ, ಕಾಡು ಕುರುಬರ ಗಾಯನಗಳು, ಯಲ್ಲಮ್ಮ ತಾಯಿಯ ಸ್ತುತಿಯ ಗೀತೆಗಳು ನೆರೆದಿದ್ದವರನ್ನು ರಂಜಿಸಿದವು.

ಗಂಡು ಮೆಟ್ಟಿನ ಕಲೆಯಾದ ಡೊಳ್ಳು ಕುಣಿತದೊಂದಿಗೆ ಚಿತ್ರದುರ್ಗದ ತಂಡವು ಜನಪದ ನೃತ್ಯಕ್ಕೆ ನಾಂದಿ ಹಾಡಿತು. ಸೋಂಟಕ್ಕೆ ಕಟ್ಟಿದ ಡೊಳ್ಳು, ಬಲಗೈಯಲ್ಲಿ ಗುಣಿ, ಅದಕ್ಕೆ ತಕ್ಕಂತೆ ಸ್ಪಂದಿಸಿ ಬಾರಿಸುವ ಎಡಗೈ, ಡೊಳ್ಳಿನಿಂದ ಹೊಮ್ಮುವ ನಾದಕ್ಕೆ ತಕ್ಕಂತೆ ದಾಪುಗಾಲು ಹಾಕಿ, ನೋಡು ನೋಡುತ್ತಲೇ ಬದಲಾಗುವ ಹೆಜ್ಜೆಗಳು ಯುವಕರಲ್ಲಿನ ಪ್ರತಿಭೆಗೆ ಸಾಕ್ಷಿಯಾಯಿತು. ಒಬ್ಬರಿಗೆ ಒಬ್ಬರು ಆಸರೆಯಾಗಿ ಪಿರಾಮಿಡ್ ಮಾದರಿಯಲ್ಲಿ ನಿಂತು ಬಾರಿಸುವ ಸಾಹಸ ದೃಶ್ಯಕ್ಕೆ ಚಪ್ಪಾಳೆ ಕೇಳಿಬಂತು.

ಆ ಬಳಿಕ ಬಂದ ದಾವಣಗೆರೆಯ ತಂಡದವರು ಒಬ್ಬರ ಮೇಲೊಬ್ಬರು ಹತ್ತಿ ವಿವಿಧ ವಿನ್ಯಾಸಗಳಲ್ಲಿ ಪ್ರದರ್ಶಿಸುತ್ತಿದ್ದ ಬೀಸು ಕಂಸಾಳೆ ನೃತ್ಯವನ್ನು ವೀಕ್ಷಕರು ಕಣ್ಣು ಬಿಟ್ಟಂತೆ ನೋಡಿದರು. ಕರಾವಳಿ ಭಾಗದಲ್ಲಿ ಬಹು ಪ್ರಚಲಿತದಲ್ಲಿ ಇರುವ ಮಾರಿಯನ್ನು ಓಡಿಸುವ, ರೋಗ ರುಜಿನಗಳು ಬಾರದೆ ಇರಲಿ ಎಂದು ಪ್ರಾರ್ಥಿಸಿ ಮಾಡುವ ಮಾಯೆ ನೃತ್ಯವನ್ನು ಉಡುಪಿ ತಂಡದವರು ಆಕರ್ಷಿಕವಾಗಿ ಪ್ರದರ್ಶಿಸಿದರು. ತಂಡದವರ ವೇಷಭೂಷಣ ನೋಡುಗಲ್ಲಿ ‘ಕಾಂತಾರ’ ಸಿನಿಮಾವನ್ನು ನೆನಪಿಸಿತು.

ಇತ್ತ ಪದವಿ ಕಾಲೇಜಿನ ಸಭಾಂಗಣದಲ್ಲಿ ಜಾನಪದ ಗೀತೆಗಳ ಮಾಧುರ್ಯಕ್ಕೆ ನೆರೆದವರು ತಲೆದೂಗಿದರು. ಬೀದರ್ ತಂಡದವರು ಗಂಡನ ಮನೆಯಲ್ಲಿ ಸಂಕಷ್ಟದ ದಿನಗಳನ್ನು ಕಳೆಯುತ್ತಿರುವ ಗೃಹಿಣಿಯ ವೇದನೆಯ ಕಥೆಯನ್ನು ‘ತಾಯಿ ಹಡೆದವ್ವ ನೆನಸೈತಿ ಜೀವ, ಕಟ್ಟಿದ ಕನಸು ವಡೆದು ಚೂರಾಯಿತವ್ವಾ’ ಎಂದು ಹಾಡುತ್ತಿದ್ದರೆ ಅದನ್ನು ಪ್ರೇಕ್ಷಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿಯುತ್ತಿದ್ದರು.

ಮೈಯಲ್ಲ ಕಪ್ಪು ಬಣ್ಣ ಬಳಿದುಕೊಂಡು, ತಲೆಗೆ ನವಿಲುಗರಿಗಳು ಇರಿಸಿಕೊಂಡು, ಸೊಂಟಕ್ಕೆ ಸೊಪ್ಪು ಕಟ್ಟಿಕೊಂಡು ಬಂದ ಚಾಮರಾಜನಗರದ ತಂಡವು ಕಾಡು ಕುರುಬರ ಗೀತೆಗೆ ದನಿಯಾದರು. ಇಳಿಸಂಜೆಯ ಮಬ್ಬು ದೀಪಗಳ ನಡುವೆ ಅವರ ವೇಷಭೂಷಣ, ಗಾಯನದ ಸಾಹಿತ್ಯ, ವಾದ್ಯಗಳು ಕಾಡು ಕುರುಬರೇ ವೇದಿಕೆಗೆ ಬಂದರೇ ಎಂಬ ಮಟ್ಟಿಗೆ ನೈಜತೆಯಿಂದ ಕೂಡಿದ್ದು ಗಮನ ಸೆಳೆಯಿತು.

ಯಾದಗಿರಿಯಲ್ಲಿ ಬುಧವಾರ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಜನಪದ ನೃತ್ಯ ಪ್ರದರ್ಶಿಸಿದ ಉಡುಪಿಯ ತಂಡ
ಯಾದಗಿರಿಯಲ್ಲಿ ಬುಧವಾರ ಯುಜನೋತ್ಸವದ ಅಂಗವಾಗಿ ನಡೆದ ಸ್ಕೂಬಾ ಡೈವಿಂಗ್‌ ಸಾಹಸ ಜಲಕ್ರೀಡೆಯಲ್ಲಿ ಪಾಲ್ಗೊಂಡ ಯುವಕರು
ಯಾದಗಿರಿಯಲ್ಲಿ ಬುಧವಾರ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಹಗ್ಗದ ಮಲ್ಲಕಂಬ ಯೋಗಾಸನ ಪ್ರದರ್ಶಿದ ಬಾಗಲಕೋಟೆಯ ತುಳಸಿಗಿರಿ ತಂಡ

ಬೆಟ್ಟದ ಕಲ್ಲು ಬಂಡೆ ಹತ್ತಿ ಸಾಹಸ ಪ್ರದರ್ಶನ 

ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ರಾಜ್ಯಮಟ್ಟದ ಯುವಜನೋತ್ಸವ ಅಂಗವಾಗಿ ಆಯೋಜಿಸಿದ್ದ ರಾಕ್‌ ಕ್ಲೈಂಬಿಂಗ್ (ಬೆಟ್ಟದ ಕಲ್ಲುಬಂಡೆಗಳನ್ನು ಹಗ್ಗದ ನೆರವಿನಿಂದ ಹತ್ತುವುದು) ಕ್ರೀಡೆಯಲ್ಲಿ ಉತ್ಸವಕ್ಕೆ ಆಗಮಿಸಿದ್ದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪಾಲ್ಗೊಂಡು ಸಂಭ್ರಮಿಸಿದರು.

ಯಾದಗಿರಿ ಕೋಟೆಯ ಬೆಟ್ಟದ ಹಿಂಬದಿಯ ದುರ್ಗಮ್ಮ ದೇವಸ್ಥಾನದ ಸಮೀಪದಲ್ಲಿ ರಾಕ್‌ ಕ್ಲೈಂಬಿಂಗ್ ಸಾಹಸ ಕ್ರೀಡೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಆಯೋಜಿಸಿತ್ತು. ಬಿಬಾಸ್ ಮತ್ತು ಸುನಿತಾ ಕ್ರೀಡಾಪಟುಗಳು ಯಾದಗಿರಿ ಕೋಟೆ ಮೇಲೆ ಯಶಸ್ವಿಯಾಗಿ ರಾಕ್ ಕ್ಲೈಂಬಿಂಗ್ ಮಾಡಿ ಸಾಹಸ ಮೆರೆದರು.

ಬೆಟ್ಟದಲ್ಲಿ ಅಳವಡಿಸಿದ್ದ ಹಗ್ಗವನ್ನು ಹಿಡಿದುಕೊಂಡು ಕಡಿದಾದ ಕಲ್ಲುಗಳ ಬಂಡೆಗಳನ್ನು ಹತ್ತುವ ಮೂಲಕ ವಿದ್ಯಾರ್ಥಿಗಳು ಸಾಹಸ ಪ್ರದರ್ಶಿಸಿದರು. ಇದಕ್ಕೂ ಮೊದಲು ವಿದ್ಯಾರ್ಥಿಗಳಿಗೆ ಸಲಕರಣೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಬಂಡೆ ಹತ್ತುವಾಗ ಏನೆಲ್ಲಾ ಎಚ್ಚರ ವಹಿಸಬೇಕು ಎಂಬ ಬಗ್ಗೆ ತಿಳಿಸಲಾಯಿತು. ಈ ವೇಳೆ ಮಾತನಾಡಿದ ಕ್ರೀಡಾ ಇಲಾಖೆ ಆಯುಕ್ತ ಚೇತನ್ ಆರ್. ‘ರಾಕ್‌ ಕ್ಲೈಂಬಿಂಗ್‌ನಂತಹ ಸಾಹಸ ಕ್ರೀಡೆಗಳ ಆಯೋಜನೆಗೆ ಯಾದಗಿರಿ ಕೋಟೆ ಉತ್ತಮವಾಗಿದೆ’ ಎಂದರು.

ಎಸ್‌ಪಿ ಪೃಥ್ವಿಕ್ ಶಂಕರ್ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಚಂದ್ರ ಕಟ್ಟಿಮನಿ ಅಕಾಡೆಮಿಯ ಕೀರ್ತಿ ಸುಭಾಷ್ ಚಂದ್ರ ಮುನಿರಾಜು ಗಂಗಾಧರ ಉಪಸ್ಥಿತರಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿನ ಈಜುಕೊಳ್ಳದಲ್ಲಿ ಯುವಕರು ಸ್ಕೂಬಾ ಡೈವಿಂಗ್‌ ಸಾಹಸ ಜಲಕ್ರೀಡೆಯಲ್ಲಿಯೂ ಪಾಲ್ಗೊಂಡರು.

ತಡವಾಗಿ ಬಂದ ಸ್ಪರ್ಧಾಳು: ಕಾಡಿದ ಪ್ರೇಕ್ಷಕರು 

ಸ್ಪರ್ಧಾಳುಗಳು ಪ್ರಧಾನ ವೇದಿಕೆಗೆ ಜನಪದ ನೃತ್ಯದ ಪ್ರದರ್ಶನಕ್ಕೆ ತಡವಾಗಿ ಬಂದಿದ್ದರಿಂದ ಒಂದು ಗಂಟೆ ತಡವಾಗಿ ನೃತ್ಯ ಆರಂಭವಾದವು. ಆಯೋಜಕರು ತೀರ್ಪುಗಾರರು ಹಾಗೂ ವೀಕ್ಷಕರು ಕಾದು ಸುಸ್ತಾದರು. ಅಧಿಕಾರಿಗಳ ಒತ್ತಡಕ್ಕೆ ಮಣಿದು ಕಾಲೇಜಿನಿಂದ ಕರೆತಂದಿದ್ದ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ಕಾಲು ಕಿತ್ತಿದ್ದರು. ಸುಮಾರು 3000 ಆಸನಗಳ ಪ್ರಧಾನ ವೇದಿಕೆಯ ಮುಂಗಾದ ಕುರ್ಚಿಗಳಲ್ಲಿ ಯುವಕರು ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತಿದ್ದರು. ಆಯೋಜಕರು ತೀರ್ಪುಗಾರರು ಹತ್ತಾರು ಬಾರಿ ಕರೆದರೂ ಒಬ್ಬೊಬ್ಬರಾಗಿ ವೇದಿಕೆಯತ್ತ ಬಂದರು. ಮೊದಲ ಎರಡು ತಂಡಗಳ ಪ್ರದರ್ಶನದ ಬಳಿಕ ಮತ್ತೆ ಕಾಯುವ ಪರಿಸ್ಥಿತಿ ಬಂತು. 

ಹಗ್ಗದ ಮಲ್ಲಕಂಬದ ಯೋಗಾಸನಕ್ಕೆ ಬೆರಗು

‘ಕುರ್‌ಕುರೆ ಪಾಪ್‌ಕಾರ್ನ್‌ಗೆ ಹಠ ಮಾಡಿ ಬೇಡಿ ತಿನ್ನುವ ವಯಸ್ಸಿನಲ್ಲಿ ಹಾವಿನಂತೆ ಜೋತು ಬಿದ್ದು ಹಗ್ಗು ಹಿಡಿದು ಬಳ್ಳಿಯಂತೆ ಯೋಗಾಸನ ಮಾಡುವ ಪುಟ್ಟು ಹುಡುಗಿ ನೋಡಲ್ಲಿ...’‌ ಮಾತುಗಳು ಪ್ರೇಕ್ಷಕರ ಸಾಲಿನಿಂದ ಕೇಳಿ ಬಂದಿದ್ದು ಬಾಗಲಕೋಟೆಯ ತುಳಸಿಗಿರಿಯ ಮಲ್ಲಕಂಬ ತಂಡವರು ನೀಡಿದ ಹಗ್ಗದ ಮಲ್ಲಕಂಬದ ಪ್ರದರ್ಶನಕ್ಕೆ. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ನೀಡಿದ್ದ ಪ್ರದರ್ಶನಕ್ಕೆ ನೆರೆದವರು ಬೆರಗಾಗಿ ಹುಬ್ಬೇರಿಸಿದರು. ಸಂಜೆ ನಡೆದ ಸ್ಪರ್ಧೆಯಲ್ಲಿ ದೇಹವನ್ನು ಬಿಲ್ಲಿನಂತೆ ಬಾಗಿಸಿ ಹಗ್ಗವನ್ನು ಹಿಡಿದು ಏರುವ ಇಳಿಯುತ್ತಾ ಪಾದ ಹಸ್ತಾಪನ ಧನುರಾಸನ ಪದ್ಮಾಸನ ಭಜರಂಗಿ ಆಸನ ಪರ್ವತಾಸನ ಪ್ರದರ್ಶಿಸಿದರು. ಇದನ್ನು ಕಂಡು ನೆರೆದವರು ಚಪ್ಪಾಳೆಯ ಸುರಿಮಳೆಗೈದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.