ADVERTISEMENT

ವೈಜ್ಞಾನಿಕ ಸಮ್ಮೇಳನ: ಜೀವಮಾನ ಸಾಧನೆ, ವಿಶಿಷ್ಟ ಸೇವಾ ಪ್ರಶಸ್ತಿಗಳ ಪ್ರದಾನ

ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ಇಂದು

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 6:13 IST
Last Updated 29 ಡಿಸೆಂಬರ್ 2025, 6:13 IST
ಯಾದಗಿರಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ, ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಸೇರಿ ಹಲವರು ಪಾಲ್ಗೊಂಡಿದ್ದರು
ಯಾದಗಿರಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ, ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಸೇರಿ ಹಲವರು ಪಾಲ್ಗೊಂಡಿದ್ದರು   

ಯಾದಗಿರಿ: ಇಲ್ಲಿನ ಮೈಲಾಪುರ ಅಗಸಿಯಲ್ಲಿ ಭಾನುವಾರ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ 5ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಅಲಂಕೃತವಾದ ಸಾರೋಟ ಮಾದರಿಯ ತೆರೆದ ವಾಹನದಲ್ಲಿ ಸಮ್ಮೇಳನ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ, ಅವರೊಂದಿಗೆ ಪತ್ನಿ ಹಾಗೂ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಅವರು ಆಸಿನರಾದರು. ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ ಹಾಗೂ ಚಿಗರಹಳ್ಳಿಯ ಮರುಳ ಶಂಕರಪೀಠದ ಸಿದ್ಧಬಸವ ಕಬೀರಾನಂದ ಸ್ವಾಮೀಜಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.

ಡೊಳ್ಳು ಕುಣಿತ, ಹಲಗೆ ವಾದನ, ಬ್ಯಾಂಡ್‌ ಬಾಜಾ ಮತ್ತಿತರೆ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಸಾಗಿತು. ತಲೆಯ ಮೇಲೆ ಬಿಂದಿಗೆ ಹೊತ್ತು, ಸಾಂಪ್ರದಾಯಿಕ ಧಿರಿಸಿನಲ್ಲಿ ಲಂಬಾಣಿ ಕಲಾವಿದರು ಹಲಗೆ ವಾದನಕ್ಕೆ ನೃತ್ಯ ಮಾಡುತ್ತಾ ಸಾಗಿದರು.

ADVERTISEMENT

ಸಮ್ಮೇಳನ ಅಧ್ಯಕ್ಷರು ಬಸವಣ್ಣನ ಭಾವಚಿತ್ರವನ್ನು ಹಿಡಿದು ಕುಳಿತರು. ಸ್ವಲ್ಪ ದೂರ ಸಾಗುತ್ತಿದ್ದಂತೆ ಸಂಘಟಕರು ಬುದ್ಧ, ಬಸವ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರು ಒಟ್ಟಾಗಿರುವ ಫೋಟೊವನ್ನು ನೀಡಿದರು. ಮೂವರು ಮಹನೀಯರ ಫೋಟೊವನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಮಾರ್ಗ ಮಧ್ಯದಲ್ಲಿ ಸಮ್ಮೇಳನ ಅಧ್ಯಕ್ಷರ ಆಪ್ತರು, ಬೆಂಬಲಿಗರು ಸನ್ಮಾನಿಸಿ ಅಭಿನಂದನೆಯೂ ಸಲ್ಲಿಸಿದರು.

ಶಾಲೆಯ ಮಕ್ಕಳು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಸಮ್ಮೇಳನದ ಸಂಘಟಕರು, ಸ್ವಯಂ ಸೇವಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಯು ಮೈಲಾಪುರ ಅಗಸಿಯಿಂದ ಹೊರಟು ದುರ್ಗಾ ದೇವಿ ದೇವಸ್ಥಾನ ಪ್ರವೇಶದ್ವಾರ, ಛತ್ರಪತಿ ಶಿವಾಜಿ ಸರ್ಕಲ್, ಗಾಂಧಿ ವೃತ್ತ ಮೂಲಕ ಹಾದು ವೀರಶೈವ ಕಲ್ಯಾಣ ಮಂಟಪ ಮುಂಭಾಗದಲ್ಲಿ ಸಂಪನ್ನಗೊಂಡಿತು.

ಮೆರವಣಿಗೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಅನಪುರ, ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ, ಮುಖಂಡರಾದ ವಿಶ್ವಾನಾಥ ಸಿರವಾರ, ಮರೆಪ್ಪ ಚಟ್ಟರಕಿ, ಭೀಮಣ್ಣ ಮೇಟಿ, ಹಣುಮೇಗೌಡ ಮರಕಲ್, ಎ.ಸಿ. ಕಾಡ್ಲೂರ್, ಭೀಮರಾವ ಲಿಂಗೇರಿ, ಎಸ್‌.ಎಸ್‌. ನಾಯಕ, ರವೀಂದ್ರ ಶಾಬಾದಿ, ಶಿವರಂಜನ್ ಸತ್ಯಂಪೇಟೆ, ಅಶೋಕ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಯಾದಗಿರಿಯಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ನೃತ್ಯದ ಮಾಡಿದ ಲಂಬಾಣಿ ಕಲಾವಿದರು

ಸಮ್ಮೇಳನದಲ್ಲಿ ಇಂದು

ಜಿಲ್ಲಾ ಕ್ರೀಡಾಂಗಣದ ವೇದಿಕೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ಸೋಮವಾರ ಬೆಳಿಗ್ಗೆ 9ರಿಂದ ಶುರುವಾಗಲಿದೆ. ರಾಷ್ಟ್ರ ಧ್ವಜಾರೋಹಣ– ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ. ಪರಿಷತ್ತು ಧ್ವಜಾರೋಹಣ– ಹುಲಿಕಲ್ ನಟರಾಜ್. ಸಾನ್ನಿಧ್ಯ– ನಿಜಗುಣಾನಂದ ಸ್ವಾಮೀಜಿ ಶಾಂತವೀರ ಗುರುಮುರುಘಾರಾಜೇಂದ್ರ ಸ್ವಾಮೀಜಿ ಸಿದ್ಧಬಸವ ಕಬೀರಾನಂದ ಸ್ವಾಮೀಜಿ. ಬೆಳಿಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟನೆ– ಸಚಿವ ಶರಣಬಸಪ್ಪ ದರ್ಶನಾಪುರ. ಆರು ಪುಸ್ತಕಗಳ ಬಿಡುಗಡೆ– ಸಚಿವ ಸತೀಶ ಜಾರಕಿಹೊಳಿ. ‘ವಿಜ್ಞಾನ ಗಿರಿ’ ಸ್ಮರಣ ಸಂಚಿಕೆ ಬಿಡುಗಡೆ– ಪರಿಷತ್ತಿನ ಮಹಾಪೋಷಕ ಎ.ಎಸ್. ಕಿರಣ್‌ಕುಮಾರ್. ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ– ಸಚಿವ ಎನ್‌.ಎಸ್. ಬೋಸರಾಜ್. ಪ್ರಮಾಣ ವಚನ– ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು. ಕ್ಯಾಲೆಂಡರ್ ಮತ್ತು ದಿನಚರಿ ಬಿಡುಗಡೆ– ಶಾಸಕರಾದ ಶರಣಗೌಡ ಕಂದಕೂರು ರಾಜಾ ವೇಣುಗೋಪಾಲ ನಾಯಕ. ಜೀವಮಾನ ಸಾಧನ ಮತ್ತು ವಿಶಿಷ್ಟ ಸೇವಾ ಪ್ರಶಸ್ತಿ ಪ್ರದಾನ– ಸಂಸದರಾದ ಜಿ.ಕುಮಾರ್ ನಾಯಕ್ ರಾಧಾಕೃಷ್ಣ ದೊಡ್ಡಮನಿ.  ಮಧ್ಯಾಹ್ನ 2ಕ್ಕೆ ‘ಸಂವಿಧಾನ– ಸಂವೇದನೆ’ ‘ಕಂದಾಚಾರದ ಸುಳಿಯೊಳಗೆ’ ಗೋಷ್ಠಿಗಳು. ಮಂಡನೆ– ವಕೀಲ ಸಧೀರ್ ಮರೋಳ್ಳಿ ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ. ಅಧ್ಯಕ್ಷತೆ– ಪರಿಷತ್ತು ಗೌರವ ಮಾರ್ಗದರ್ಶಕ ವಿಜಯ ಪ್ರಕಾಶ.  ಸಂಜೆ 4ಕ್ಕೆ ‘ಎಐ ಏನು ಮಾಯವೋ’ ‘ಮೌಢ್ಯತೆಯ ಮಾರಿಯನ್ನು ಹೊರದೂಡಲು ಬನ್ನಿ’ ಗೋಷ್ಠಿಗಳು. ಮಂಡನೆ– ಲೆಕ್ಕ ಪರಿಶೋಧಕ ಡಿ.ಎಂ. ಸುರೇಶ ಸಿಯುಕೆ ಪ್ರೊ.ಶಿವಗಂಗಾ ರುಮ್ಮಾ. ಅಧ್ಯಕ್ಷತೆ– ರೈತ ಸಂಘದ ನಾಗರತ್ನ ಪಾಟೀಲ ಯಕ್ಷಿಂತಿ. ಸಂಜೆ 6ಕ್ಕೆ ಸಮ್ಮೇಳನ ಅಧ್ಯಕ್ಷರೊಂದಿಗೆ ಸಂವಾದ. ರಾತ್ರಿ 7ಕ್ಕೆ ಪವಾಡಗಳ ಅನಾವರಣ ಪ್ರಾತ್ಯಕ್ಷಿಕೆ. ರಾತ್ರಿ 8ಕ್ಕೆ ‘ಕಾಲಚಕ್ರ’ ನಾಟಕ ಪ್ರದರ್ಶನ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.