ADVERTISEMENT

ಯಾದಗಿರಿ: ಭಕ್ತ ಸಾಗರದಲ್ಲಿ ‘ವಿಶ್ವ’ ಆರಾಧ್ಯರ ರಥೋತ್ಸವ

ಅನುರಣಿಸಿದ ವಿಶ್ವಾರಾಧ್ಯರ, ಗಂಗಾಧರ ಶಿವಾಚಾರ್ಯರ ಜಯ ಘೋಷಗಳು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:53 IST
Last Updated 23 ಫೆಬ್ರುವರಿ 2026, 6:53 IST
ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಯ ಅಂಗವಾಗಿ ಭಾನುವಾರ ಸಂಜೆ ರಥೋತ್ಸವಕ್ಕೆ ಸೇರಿದ ಭಕ್ತಸಮೂಹ ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಯ ಅಂಗವಾಗಿ ಭಾನುವಾರ ಸಂಜೆ ರಥೋತ್ಸವಕ್ಕೆ ಸೇರಿದ ಭಕ್ತಸಮೂಹ ಪ್ರಜಾವಾಣಿ ಚಿತ್ರಗಳು: ರಾಜಕುಮಾರ ನಳ್ಳಿಕರ   

ಯಾದಗಿರಿ: ಅಸಂಖ್ಯಾತ ಭಕ್ತರ ಮುಗಿಲು ಮುಟ್ಟುವ ಜಯಘೋಷಗಳೊಂದಿಗೆ ಅನುಗ್ರಹ ಕ್ಷೇತ್ರ ಅಬ್ಬೆ ತುಮಕೂರು ‘ವಿಶ್ವ’ ಆರಾಧ್ಯರ (ವಿಶ್ವಾರಾಧ್ಯರ) ರಥೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ಜರುಗಿತು. ಕಣ್ಣು ಹಾಯಿಸಿದಷ್ಟು ದೂರ ನೆರೆದಿದ್ದ ಭಕ್ತ ಸಾಗರ ರಥೋತ್ಸವವನ್ನು ಕಣ್ತುಂಬಿಕೊಂಡರು.

ಜಿಲ್ಲೆಯಷ್ಟೇ ಅಲ್ಲದೆ ಹೊರ ಜಿಲ್ಲೆಗಳು, ನೆರೆಯ ರಾಜ್ಯಗಳಿಂದಲೂ ಭಕ್ತರು ಕೈಯಲ್ಲಿ ಕಾಯಿ– ಕರ್ಪೂರ, ಹೂಗಳನ್ನು ಹಿಡಿದ ತಂಡೋಪತಂಡವಾಗಿ ಅಬ್ಬೆ ತುಮಕೂರಿನತ್ತ ಬಂದರು. ಸರತಿ ಸಾಲಿನಲ್ಲಿ ನಿಂತು ವಿಶ್ವಾರಾಧ್ಯ, ಭಗಳಾಂಬಿಕದೇವಿಯ ದರ್ಶನ ಪಡೆದರು. ಬಂದಂತಹ ಭಕ್ತರಿಗೆ ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು ಆಶೀರ್ವಾದ ನೀಡಿದರು. ತಂದಂತಹ ತೆಂಗಿನ ಕಾಯಿಗಳನ್ನು ರಥಕ್ಕೆ ಒಡೆದು ಪ್ರಸಾದ ಸವಿದು, ರಥೋತ್ಸವಕ್ಕಾಗಿ ಅಲ್ಲಲ್ಲಿ ಕಾದು ಕುಳಿತರು. 

ಬೆಳಗಿನ ಬಿಸಿಲು ಪ್ರಕಾಶಮಾನ ಆಗುತ್ತಿದ್ದಂತೆ ರಥದ ಮುಂಭಾಗದಲ್ಲಿ ದುಧನಿ ಮೃತ್ರಿ ಕುಟುಂಬಸ್ಥರು ರಥ ಮಹಾಪೂಜೆ, ರಥಾಂಗ ಹೋಮ ಸೇರಿದಂತೆ ಇತರೆ ಪೂಜೆಗಳು ಭಕ್ತಿ ಪೂರ್ವಕವಾಗಿ ನಡೆಸಿಕೊಟ್ಟರು. ಹೋಮ– ಹವನಗಳಲ್ಲಿ ಗಂಗಾಧರ ಶಿವಾಚಾರ್ಯರು, ಕಿರಿಯ ಸ್ವಾಮೀಜಿ ಶಿವಶೇಖರ ಶಿವಾಚಾರ್ಯರು, ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಸೇರಿದಂತೆ ಹಲವು ಭಕ್ತರು ಭಾಗಿಯಾದರು.

ADVERTISEMENT

ರಥಾಂಗ ಹೋಮ ಸಂಪನ್ನವಾಗುತ್ತಿದ್ದಂತೆ ರಥದ ಕಳಸಕ್ಕೆ ಮಠದ ಪೀಠಾಧಿಪತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಪೂಜೆ ಸಲ್ಲಿಸಿದರು. ಬಳಿಕ ಭಕ್ತರು ವಾದ್ಯ ಮೇಳ, ಜೈಘೋಷದೊಂದಿಗೆ ರಥಕ್ಕೆ ಕಳಸ ಆರೋಹಣ ಮಾಡಿದರು. ಬಣ್ಣ– ಬಣ್ಣದ ಹೂಗಳಿಂದ ತೇರನ್ನು ಅಲಂಕರಿಸಿ ರಥೋತ್ಸವಕ್ಕೆ ಅಣಿಗೊಳಿಸಿದರು.

ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಯ ಅಂಗವಾಗಿ ಭಾನುವಾರ ರಥದ ಕಳಸ ಪೂಜೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಸೇರಿದಂತೆ ಹಲವರು ಭಾಗವಹಿಸಿದರು

ಉರಿ ಬಿಸಿಲು ಕರಗಿ ಸಂಜೆ ಸೂರ್ಯಾಸ್ತಮ ಆಗುತ್ತಿದ್ದಂತೆ ರಥದ ಆವರಣವು ವಿಶ್ವಾರಾಧ್ಯರ ಭಕ್ತ ಗಣದಿಂದ ತುಂಬಿತು. ಗಂಗಾಧರ ಶಿವಾಚಾರ್ಯರು ರಥಕ್ಕೆ ಪೂಜೆ ಸಲ್ಲಿಸಿ ರಥವನ್ನು ಏರಿ 2026ನೇ ಜಾತ್ರಾ ಮಹೋತ್ಸವದ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ, ‘ವಿಶ್ವಾರಾಧ್ಯ ಮಹಾರಾಜ್‌ ಕಿ ಜೈ’, ‘ಗಂಗಾಧರ ಶಿವಾಚಾರ್ಯ ಮಹಾರಾಜ್‌ ಕಿ ಜೈ...’ ಎನ್ನುತ್ತ ಭಕ್ತರು ಬನ್ನಿ ಮರ ಸಮೀಪದ ಗುಡಿವರೆಗೆ ರಥವನ್ನು ಎಳೆದು ಪುನೀತರಾದರು. ಸುತ್ತಲೂ ಕಿಕ್ಕಿರಿದವರು ರಥಕ್ಕೆ ಖಾರೀಕು, ಬಾಳೆಹಣ್ಣು, ಅರಿಸಿನ ಬೇರುಗಳನ್ನು ಎಸೆದರು.

ಗುಡಿಯಲ್ಲಿ ಪೂಜೆ ಸಲ್ಲಿಸಿ, ಹಗ್ಗ ಬದಲಾಯಿಸಿ ಮತ್ತೆ ಜೈಕಾರದೊಂದಿಗೆ ಮೂಲ ಸ್ಥಳಕ್ಕೆ ಎಳೆದು ತರುವುದರೊಂದಿಗೆ ರಥೋತ್ಸವ ಸಂಪನ್ನಗೊಂಡಿತು. ಹಲಗೆ, ಬಾಜಾ ಭಜಂತ್ರಿ, ಡೊಳ್ಳು ಮುಂತಾದ ಮಂಗಲವಾದ್ಯಗಳು ವಾದನವು ರಥೋತ್ಸವದ ಸಂಭ್ರಮವನ್ನು ಹೆಚ್ಚಿಸಿದವು. ಭಕ್ತರು ರಥದ ಗಾಲಿಗಳಿಗೆ ತೆಂಗಿನಕಾಯಿ ಒಡೆದು ಕೈ ಮುಗಿದು ಜಾತ್ರೆಯ ಸಿಹಿ ತಿನಿಸುಗಳನ್ನು ಖರೀದಿಸಿದರು. ಕೆಲವರು ತಮ್ಮ ಗ್ರಾಮಗಳತ್ತ ತೆರಳಿದರೆ, ಮತ್ತೆ ಕೆಲವರು ಮಠದಲ್ಲಿ ಉಳಿದುಕೊಂಡು ಭಜನೆ, ಮಾನವ ಧರ್ಮ ಸಮಾವೇಶದಲ್ಲಿ ಭಾಗಿಯಾದರು.

ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಯ ಅಂಗವಾಗಿ ಭಾನುವಾರ ಗಂಗಾಧರ ಶಿವಾಚಾರ್ಯರು ಕಿರಿಯ ಸ್ವಾಮೀಜಿ ಶಿವಶೇಖರ ಶಿವಾಚಾರ್ಯರು ರಥಾಂಗ ಹೋಮ ನೆರವೇರಿಸಿದರು

ಭಕ್ತರಿಗೆ ಅನ್ನ ದಾಸೋಹ

ವಿಶ್ವಾರಾಧ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಮಠ ಹಾಗೂ ಅಬ್ಬೆ ತುಮಕೂರಿನ ರಸ್ತೆಯ ಬದಿಯಲ್ಲಿ ಭಕ್ತರು ಅನ್ನದಾಸೋಹ ಪಾನಕವನ್ನು ವಿತರಣೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಅರ್ಪಣೆ ಮಾಡಿದರು. ಭಕ್ತರು ಸಜ್ಜಕ ಅನ್ನ– ಸಾರು ಪಲಾವ್ ಮಾಡುವುದು ಕಂಡು ಬಂತು. ಮಠದ ವತಿಯಿಂದ ಮಾದಲಿ ಚಪಾತಿ ಮಜ್ಜಿಗೆ ಪಲ್ಯ ರೊಟ್ಟಿ ಅನ್ನ–ಸಾರು ಪ್ರಸಾದದ ವ್ಯವಸ್ಥೆ ಮಾಡಲಾಯಿತು.

ಬರಿಗಾಲಿನಲ್ಲಿ ಪಾದಯಾತ್ರೆ ಬಂದ ಭಕ್ತರು

ಯಾದಗಿರಿ ನಗರ ಸುತ್ತಲಿನ ಗ್ರಾಮಗಳು ಶಹಾಪುರ ಸುರಪುರ ಗುರುಮಠಕಲ್ ವಡಗೇರಾ ಸೇಡಂ ಚಿತ್ತಾಪುರ ಕಲಬುರಗಿ ಸೇರಿದಂತೆ ಹಲವೆಡೆಯಿಂದ ಭಕ್ತರು ಪಾದಯಾತ್ರೆಯ ಮೂಲಕ ಅಬ್ಬೆತುಮಕೂರಿಗೆ ಧಾವಿಸಿದರು. ಕೆಲವರು ಕುಟುಂಬ ಸಮೇತರಾಗಿ ಬರಿಗಾಲಿನಲ್ಲಿ ನಡೆದುಕೊಂಡು ಬಂದರು.  ವಿಶ್ವಾರಾಧ್ಯ ವಿದ್ಯಾವರ್ಧಕ ಸಂಸ್ಥೆಯ ವಿದ್ಯಾರ್ಥಿಗಳು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಮಾಡುವಂತೆ ನಿಗಾವಹಿಸಿ ಜಾತ್ರೆಯ ಸ್ವಯಂಸೇವಕರಂತೆ ಇಡೀ ದಿನ ಕಾರ್ಯನಿರ್ವಹಿಸಿದರು.

ಯಾದಗಿರಿ ತಾಲ್ಲೂಕಿನ ಅಬ್ಬೆ ತುಮಕೂರಿನ ವಿಶ್ವಾರಾಧ್ಯರ ಜಾತ್ರೆಯ ಅಂಗವಾಗಿ ಭಾನುವಾರ ರಥ ಕಳಸ ಪೂಜೆ ನೆರವೇರಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.